ಮಂತ್ರಿ ಸ್ಥಾನ ಕಳೆದುಕೊಂಡರೂ ಡಿಸಿಸಿ ಬ್ಯಾಂಕ್ ನ ಎಲ್ಲಾ 14 ಮಂದಿ ನಿರ್ದೇಶಕ ಸ್ಥಾನಕ್ಕೆ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳುವ ಮೂಲಕ ಕೆ.ಎನ್. ರಾಜಣ್ಣ ಅವರು ಮತ್ತೆ ಬ್ಯಾಂಕ್ ನ ಅಧ್ಯಕ್ಷ ಸ್ಥಾನದ ಪಟ್ಟಕ್ಕೇರಲಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಮಂತ್ರಿ ಸ್ಥಾನ ಕಳೆದುಕೊಂಡರೂ ಡಿಸಿಸಿ ಬ್ಯಾಂಕ್ ನ ಎಲ್ಲಾ 14 ಮಂದಿ ನಿರ್ದೇಶಕ ಸ್ಥಾನಕ್ಕೆ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳುವ ಮೂಲಕ ಕೆ.ಎನ್. ರಾಜಣ್ಣ ಅವರು ಮತ್ತೆ ಬ್ಯಾಂಕ್ ನ ಅಧ್ಯಕ್ಷ ಸ್ಥಾನದ ಪಟ್ಟಕ್ಕೇರಲಿದ್ದಾರೆ. ಭಾನುವಾರ ನಡೆದ 6 ನಿರ್ದೇಶಕ ಚುನಾವಣೆಯಲ್ಲಿ ಜಯಭೇರಿ ಬಾರಿಸುವುದರೊಂದಿಗೆ ಸಹಕಾರ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಸಹಕಾರ ಸಚಿವ ಸ್ಥಾನದಿಂದ ವಜಾಗೊಂಡ ಬಳಿಕ ಹಲವಾರು ಮುಖಂಡರು ರಾಜಣ್ಣಗೆ ಸವಾಲಾಗಿದ್ದರು. ಅಲ್ಲದೇ ರಾಜಣ್ಣಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಟ್ಟ ತಪ್ಪಿಸಲು ನಾನಾ ರೀತಿಯ ಕಸರತ್ತು ನಡೆಸಿದ್ದರು. ಆದರೆ ರಾಜಣ್ಣ ಅವರ ತಂತ್ರಗಾರಿಕೆಯ ಮುಂದೆ ವಿರೋಧಿಗಳ ಕಸರತ್ತು ವಿಫಲವಾಗಿದ್ದು ಅಂತಿಮವಾಗಿ ಎಲ್ಲಾ 14 ಮಂದಿ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳುವ ಮೂಲಕ ಮತ್ತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಾದಿ ಏರಲಿದ್ದಾರೆ.

ಬ್ಯಾಂಕ್ ನ ನಿರ್ದೇಶಕರಾಗಿ ಈ ಬಾರಿ ಮೂರು ಮಂದಿ ಶಾಸಕರು ಆಯ್ಕೆಯಾಗಿದ್ದಾರೆ. ಈ ಪೈಕಿ ಮಧುಗಿರಿಯ ಶಾಸಕ ಕೆ.ಎನ್. ರಾಜಣ್ಣ, ತಿಪಟೂರು ಶಾಸಕ ಕೆ. ಷಡಕ್ಷರಿ ಹಾಗೂ ಪಾವಗಡ ಶಾಸಕ ವೆಂಕಟೇಶ್ ಅವರು ನಿರ್ದೇಶಕರಾಗಿದ್ದಾರೆ. ಈ ಪೈಕಿ ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದರೆ ಷಡಕ್ಷರಿ ಮತ್ತು ವೆಂಕಟೇಶ್ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ನಿರ್ದೇಶಕರಾಗಿದ್ದಾರೆ.ಮತಕಳವು ವಿಚಾರವಾಗಿ ರಾಜಣ್ಣ ಹೇಳಿದ ಹೇಳಿಕೆ ಹೈಕಮಾಂಡ್ ಗೆ ಸಿಟ್ಟು ತರಿಸಿದ್ದರ ಪರಿಣಾಮ ಅವರು ಮಂತ್ರಿ ಸ್ಥಾನದಿಂದ ವಜಾಗೊಂಡಿದ್ದರು. ಹೀಗಾಗಿ ರಾಜಣ್ಣ ಅವರಿಂದ ಡಿಸಿಸಿ ಬ್ಯಾಂಕ್ ಹುದ್ದೆಯನ್ನು ಕಸಿದುಕೊಳ್ಳಲು ವಿರೋಧಿಗಳು ನಡೆಸಿದ ಎಲ್ಲಾ ತಂತ್ರಗಳು ವಿಫಲವಾದಂತಾಗಿದೆ.

ಇನ್ನೂ ಜಿಲ್ಲೆಯಲ್ಲಿ ಹಾಗೂ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ವರ್ಷಗಳಿಂದ ತಮ್ಮದೇಯಾದ ಶಕ್ತಿ ಹೊಂದಿರುವ ರಾಜಣ್ಣ ಸರಕಾರ ರಚನೆಯಾದಾಗ ಬೇಕು ಎಂದು ಕೇಳಿ ಸಹಕಾರ ಖಾತೆ ಪಡೆದು ಅದರ ಉಳಿವಿಗೆ ಹೆಚ್ಚಿನ ಶ್ರಮ ವಹಿಸಿದ್ದರು. ಇನ್ನೂ ಜಿಲ್ಲೆಯಲ್ಲಿ ತುಮುಲ್‌ ಅಧ್ಯಕ್ಷ ಸ್ಥಾನದ ಚುನಾವಣೆ ನಡೆದಾಗ ಪಾವಗಡ ಶಾಸಕ ಎಚ್.ವಿ. ವೆಂಕಟೇಶ್‌ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಸಹಕಾರ ಕ್ಷೇತ್ರದಲ್ಲಿ ತಮ್ಮ ಶಕ್ತಿ ಎಂಬುದನ್ನು ಸಾಬೀತುಪಡಿಸಿದ್ದರು. ಈಗ ಮತ್ತೆ ಶಾಸಕ ವೆಂಕಟೇಶ್‌ ಸೇರಿ ಎಲ್ಲಾ ಸ್ಥಾನಗಳನ್ನು ತಮ್ಮದೇ ಬೆಂಬಲಿಗರನ್ನು ಗೆಲ್ಲಿಸಿಕೊಂಡು ಬಂದಿರುವ ರಾಜಣ್ಣ ಮತ್ತೊಮ್ಮೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇನ್ನೂ ತಿಪಟೂರಿನಿಂದ ಗೆದ್ದಿರುವ ಶಾಸಕ ಕೆ. ಷಡಕ್ಷರಿ ಸಹ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಅವರು ಸಹ ಪಕ್ಷದ ಚೌಕಟ್ಟಿನಲ್ಲಿ ಇರುವುದರಿಂದ ಅನಿವಾರ್ಯವಾಗಿ ರಾಜಣ್ಣಗೆ ಬೆಂಬಲ ನೀಡಲೇಬೇಕಾಗಿರುವುದು ರಾಜಣ್ಣಗೆ ಲಾಭವಾಗಲಿದೆ. ಇನ್ನೂ ಗುಬ್ಬಿಯಲ್ಲಿ ಗೆದ್ದಿರುವ ಪ್ರಭಾಕರ್‌ 21 ಮತಗಳನ್ನು ಪಡೆಯುವ ಮೂಲಕ ಎದುರಾಳಿ ಚನ್ನಮಲ್ಲಿಕಾರ್ಜುನ ಶೂನ್ಯ ಸಾಧನೆ ಮಾಡುವಂತೆ ಮಾಡಿದ್ದಾರೆ. ಇದರಿಂದಾಗಿ ಗುಬ್ಬಿ ಭಾಗದಲ್ಲಿ ಸಹ ರಾಜಣ್ಣ ಪ್ರಾಬಲ್ಯ ಮೆರೆದಿದ್ದಾರೆ.