ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಹಿರಿಯ ಸಚಿವ ಕೆ.ಎನ್.ರಾಜಣ್ಣನವರಿಗೆ ಸಂಪುಟದಿಂದ ವಜಾಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷವು ಪರಿಶಿಷ್ಟರಿಗೆ ಅಗೌರವಿಸಿದೆ ಈ ಮೂಲಕ ಕಾಂಗ್ರೆಸ್ಸಿನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲದ್ದನ್ನು ತೋರಿಸಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ನಗರದಲ್ಲಿ ಮಾಜಿ ಶಾಸಕ, ಪಕ್ಷದ ಹಿರಿಯ ನಾಯಕ ಎಚ್.ಎಸ್.ಶಿವಶಂಕರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟರಿಗೆ ಸಾಮಾಜಿಕ ನ್ಯಾಯ ಒದಗಿಸುವುದಾಗಿ ಹೇಳುವ ಕಾಂಗ್ರೆಸ್ ಪಕ್ಷ ಅದೇ ಪರಿಶಿಷ್ಟ ಪಂಗಡದ ಹಿರಿಯ ನಾಯಕ ಕೆ.ಎನ್.ರಾಜಣ್ಣಗೆ ವಜಾಗೊಳಿಸಿದೆ ಎಂದರು.
ರಾಜಣ್ಣನವರಿಂದ ಗೌರವಾನ್ವಿತವಾಗಿ ರಾಜೀನಾಮೆ ಕೇಳಬಹುದಿತ್ತು. ಆದರೆ, ಪರಿಶಿಷ್ಟ ಜಾತಿ-ಪಂಗಡಗಳ ನಾಯಕರನ್ನು ಕಾಂಗ್ರೆಸ್ ಪಕ್ಷ ನಡೆಸಿಕೊಳ್ಳುವ ರೀತಿ ಸರಿ ಇಲ್ಲ. ಏಕಾಏಕಿ ರಾಜಣ್ಣನವರಿಗೆ ಸಂಪುಟದಿಂದ ಕಿತ್ತು ಹಾಕುವ ಮೂಲಕ ಹಿರಿಯ ನಾಯಕನಿಗೆ ಮುಜುಗರ ತಂದಿದೆ. ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿನಲ್ಲೇ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದು ಟೀಕಿಸಿದರು.ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಚಿವರ ವಿರುದ್ಧ ಯಾವುದೇ ಕ್ರಮವನ್ನೂ ಕಾಂಗ್ರೆಸ್ ಕೈಗೊಂಡಿಲ್ಲ. ಆದರೆ, ಸತ್ಯವನ್ನೇ ನುಡಿದ ಕೆ.ಎನ್.ರಾಜಣ್ಣನವರನ್ನೇ ಬಲಿಪಶು ಮಾಡಿದೆ. ಮತ ಕಳವು ಕುರಿತಂತೆ ಹಿರಿಯ ನಾಯಕರಾದ ಕೆ.ಎನ್.ರಾಜಣ್ಣ ಹೇಳಿಕೆಯಲ್ಲಿ ತಪ್ಪೇನಿದೆ? ಸತ್ಯವನ್ನೇ ನುಡಿದ ರಾಜಣ್ಣನವರ ಮಾತನ್ನು ಅರಗಿಸಿ ಕೊಳ್ಳಲಾಗದೇ, ಸತ್ಯ ನುಡಿದ ರಾಜಣ್ಣಗೆ ಸಂಪುಟದಿಂದ ವಜಾ ಮಾಡುವುದು ಎಷ್ಚರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯತೆ ಕಾಪಾಡುವ ಬಗ್ಗೆ 2 ದಿನಗಳ ಹಿಂದೆ ಉಭಯ ಪಕ್ಷಗಳ ನಾಯಕರು ಚರ್ಚಿಸಿದ್ದು, ಸಮನ್ವಯ ಕಾಯ್ದುಕೊಳ್ಳಲು ಸಮಿತಿ ರಚಿಸುವ ಪ್ರಸ್ತಾಪಕ್ಕೆ ಬಿಜೆಪಿ ಸಕಾರಾತ್ಮಕವಾಗಿ ಸ್ಪಂದಿಸಿದೆ. ಮುಂಬರುವ ತಾಪಂ, ಜಿಪಂ, ಪಾಲಿಕೆ, ನಗಸಭೆ ಸೇರಿ ಯಾವುದೇ ಚುನಾವಣೆಗಳು ನಡೆದರೂ ಬಿಜೆಪಿ-ಜೆಡಿಎಸ್ ಪಕ್ಷಗಳ ಮೈತ್ರಿ ಮುಂದುವರಿಯಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು, ಅಧಿಕಾರಕ್ಕೆ ಬಂದಾಗ ಇಲ್ಲದ ಮತಗಳ್ಳತನದ ಆರೋಪವನ್ನು ಕಾಂಗ್ರೆಸ್ಸಿನ ವರಿಷ್ಟ ರಾಹುಲ್ ಗಾಂಧಿ ಇತರರು ಈಗ ಲೋಕಸಭೆ ಚುನಾವಣೆಯಲ್ಲಿ ತಮಗೆ ಹಿನ್ನಡೆಯಾದ ಎರಡು ವರ್ಷಗಳ ಬಳಿಕ ಮಾತನಾಡುತ್ತಿದ್ದಾರೆ ಕುಟುಕಿದರು.
ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ವಿಪ ಮಾಜಿ ಸದಸ್ಯ ಚೌಡರೆಡ್ಡಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ನಾಡಗೌಡ, ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಮುಖಂಡರಾದ ಜೆ.ಅಮಾನುಲ್ಲಾ ಖಾನ್, ಡಿ.ಯಶೋಧಱ, ಪ್ರತಾಪ್ ಜೋಗಿ, ಎಸ್.ಓಂಕಾರಪ್ಪ, ಬಾತಿ ಶಂಕರ ಇತರರು ಇದ್ದರು. ಬಾಕ್ಸ್..ಎಸ್ಐಟಿ ತನಿಖೆ ನಂತರ ಪ್ರತಿಕ್ರಿಯಿಸುವೆ
ಅನಾಮಿಕ ವ್ಯಕ್ತಿಯ ದೂರಿನ ಮೇರೆಗೆ ಧರ್ಮಸ್ಥಳದಲ್ಲಿ ಎಸ್ಐಟಿ ಸ್ಥಳ ಪರಿಶೀಲಿಸುತ್ತಿರುವುದನ್ನು ನೋಡುತ್ತಿದ್ದು, ಎಸ್ಐಟಿ ತನಿಖೆ ನಂತರ ಔಟ್ ಕಮ್ ಏನು ಬರುತ್ತೆ, ಆ ನಂತರ ಚರ್ಚೆ ಮಾಡುವುದು ಸೂಕ್ತ. ಇದು ಅತ್ಯಂತ ಸೂಕ್ಷ್ಮವಾದ ವಿಚಾರವಾಗಿದ್ದು, ಯಾವುದೇ ಊಹಾಪೋಹಗಳ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಎಸ್ಐಟಿ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಇದರ ಬಗ್ಗೆ ಪ್ರತಿಕ್ರಿಯಿಸುವುದು ಒಳ್ಳೆಯದು ಎಂದು ಪ್ರಶ್ನೆಯೊಂದಕ್ಕೆ ನಿಖಿಲ್ ಪ್ರತಿಕ್ರಿಯಿಸಿದರು.ಬೆಂಗಳೂರಿನಲ್ಲಿ ಕನ್ನಡ ಚಿತ್ರರಂಗದ ಮೇರು ನಟ ಡಾ.ವಿಷ್ಣುವರ್ಧನ್ ರ ಸಮಾಧಿ ನೆಲಸಮಗೊಳಿಸಿದ ಘಟನೆ ತೀವ್ರ ನೋವುಂಟು ಮಾಡಿದೆ. ಇಂತಹ ಬೆಳವಣಿಗೆಯೇ ಆಗಬಾರದಿತ್ತು. ವಿಷ್ಣುವರ್ಧನ್‌ರ ಸಮಾಧಿ ವಿಚಾರವಾಗಿ ನಾನು ಏನು ಮಾಡುತ್ತೇನೆ ಎಂಬ ಬಗ್ಗೆ ಶೀಘ್ರ ಮಾಹಿತಿ ನೀಡುತ್ತೇನೆ.
ನಿಖಿಲ್ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ, ಜೆಡಿಎಸ್ ರಾಜ್ಯ ಯುವ ಘಟಕ.