3 ಡಿಸಿಎಂ ಬೇಕು: ಮತ್ತೆ ಕೂಗೆಬ್ಬಿಸಿದ ಸಚಿವ ರಾಜಣ್ಣ!

| Published : Jun 12 2024, 12:36 AM IST

ಸಾರಾಂಶ

ಲೋಕಸಭೆ ಎಲೆಕ್ಷನ್‌ ಮುಗೀತಿದ್ದಂತೆ ಬೇಡಿಕೆ ಮತ್ತೆ ಪ್ರಾರಂಭವಾಗಿದ್ದು, ರಾಜ್ಯಕ್ಕೆ 3 ಡಿಸಿಎಂ ಬೇಕು ಎಂಬುದಾಗಿ ಸಚಿವ ರಾಜಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಮೂರು ಉಪ ಮುಖ್ಯಮಂತ್ರಿ ಹುದ್ದೆಗಳ ಬೇಡಿಕೆಗೆ ಜೀವ ಬಂದಿದೆ. ರಾಜ್ಯದಲ್ಲೀಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತಿದೆ. ಹೀಗಾಗಿ ಮೂರು ಉಪ ಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಸಿದರೆ ಅನುಕೂಲವಾಗಲಿದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಮೂವರು ಉಪಮುಖ್ಯಮಂತ್ರಿಗಳು ಬೇಕು ಎಂಬುದು ನನ್ನ ನಿರಂತರ ಬೇಡಿಕೆ. ಈ ಹಿಂದೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ವಿಚಾರವಾಗಿ ಸುಮ್ಮನಿರಲು ಹೇಳಿದ್ದರು. ಹಾಗಾಗಿ ಲೋಕಸಭಾ ಚುನಾವಣೆ ಮುಗಿಯುವವರೆಗೆ ಅದರ ಬಗ್ಗೆ ಮಾತನಾಡದೆ ಸುಮ್ಮನಿದ್ದೆ. ಈಗ ಸ್ಥಳೀಯ ಸಂಸ್ಥೆ ಚುನಾವಣೆ ಇದೆ. ಹೀಗಾಗಿ ಮೂರು ಉಪ ಮುಖ್ಯಮಂತ್ರಿ ಹುದ್ದೆ ಅಗತ್ಯವಿದೆ. ನಾನು ಖರ್ಗೆ ಅವರನ್ನು ಖುದ್ದಾಗಿ ಭೇಟಿ ಮಾಡಿ ಮತ್ತೆ ಈ ವಿಚಾರ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

ಇದೇ ವೇಳೆ ಹಾಸನ ಜಿಲ್ಲೆ ಉಸ್ತುವಾರಿ ಬದಲಾವಣೆ ಮಾಡಿದರೆ ಮಾಡಲಿ ಎಂದ ಅವರು, ನಾನು ಆ ಜಿಲ್ಲೆ ಉಸ್ತುವಾರಿ ಸ್ಥಾನವನ್ನು ಯಾವತ್ತೂ ಕೇಳಿರಲಿಲ್ಲ ಎಂದರು. ಜತೆಗೆ, ಯಾವ ಸಚಿವರ ಖಾತೆಗಳೂ ಬದಲಾವಣೆ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಖರ್ಗೆ ಸಿಎಂ ಆಗೋ ಲಕ್ಷಣ ಇಲ್ಲ:

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದ್ದರೆ ಹಿಂದೆಯೇ ಆಗುತ್ತಿದ್ದರು. ಖರ್ಗೆ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸಲೂ ಆಗುವುದಿಲ್ಲ. ಆದರೆ ಮುಖ್ಯಮಂತ್ರಿ ಆಗುವ ಲಕ್ಷಣ ಈಗ ಇಲ್ಲ ಎಂದು ರಾಜಣ್ಣ ಅಭಿಪ್ರಾಯಪಟ್ಟರು.

ಇದೇ ವೇಳೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆ ಕುರಿತೂ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿ ಒಂದು ವರ್ಷವಾಯ್ತು. ಕೆಲಸ ಮಾಡುವುದರಲ್ಲಿ ಅವರು ಹಿಂದೆ ಬಿದ್ದಿದ್ದಾರಾ? ಯಾವುದಾದರೂ ಹಗರಣ ಇದೆಯೇ? ಇಲ್ಲ ಅಂದ ಮೇಲೆ ಯಾವ ಆಧಾರದ ಮೇಲೆ ಅವರನ್ನು ಬದಲಾಯಿಸುತ್ತಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲು ಮುಖ್ಯಮಂತ್ರಿ ಕುರ್ಚಿ ಖಾಲಿ ಇದೆಯಾ? ರಾಜ್ಯದಲ್ಲಿ ಉಳಿದ ಅವಧಿಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಲಾಭಈ ಹಿಂದೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ವಿಚಾರವಾಗಿ ಸುಮ್ಮನಿರಲು ಹೇಳಿದ್ದರು. ಈಗ ಸ್ಥಳೀಯ ಸಂಸ್ಥೆ ಚುನಾವಣೆ ಇದೆ. ಹೀಗಾಗಿ 3 ಉಪ ಮುಖ್ಯಮಂತ್ರಿ ಹುದ್ದೆ ಅಗತ್ಯವಿದೆ. ನಾನು ಖರ್ಗೆ ಅವರನ್ನು ಖುದ್ದಾಗಿ ಭೇಟಿ ಮಾಡಿ ಚರ್ಚಿಸುತ್ತೇನೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದ್ದಾರೆ.