೭ರಂದು ರಾಜರಾಜೇಶ್ವರಿ ದೇವಾಲಯ ವಾರ್ಷಿಕೋತ್ಸವ

| Published : May 03 2024, 01:04 AM IST

ಸಾರಾಂಶ

ಕೊಡಗಿನ ಮಡಿಕೇರಿ ತಾಲೂಕು ಕರ್ಣಂಗೇರಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ 7ರಂದು ನಡೆಯಲಿದೆ. ೭ರಂದು ಬೆಳಗ್ಗೆ 6 ಗಂಟೆಗೆ ದೇವಸ್ಥಾನದಲ್ಲಿ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ತಾಲೂಕಿನ ಕರ್ಣಂಗೇರಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ 7ರಂದು ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿ ಗೋವಿಂದಸ್ವಾಮಿ ತಿಳಿಸಿದ್ದಾರೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 6 ಗಂಟೆಗೆ ದೇವಸ್ಥಾನದಲ್ಲಿ ಧ್ವಜಾರೋಹಣ, 6.30ಕ್ಕೆ ಗಣಪತಿ ಹೋಮ, 7.30ಕ್ಕೆ ದೇವಿಗೆ ಅಭಿಷೇಕ, ಹೂವಿನ ಅಲಂಕಾರ ನಂತರ ತೀರ್ಥಸ್ನಾನ, 9.20ಕ್ಕೆ ಕಳಸ ಪೂಜೆ, ನೈವೇದ್ಯ ಪ್ರಸಾದ ಹಾಗೂ ಮಹಾಮಂಗಳಾರತಿ ನಡೆಯಲಿದೆ. 11.45ಕ್ಕೆ ದೇವಸ್ಥಾನದ ಆವರಣದ ಸುತ್ತ ದೇವಿಯ ರಥೋತ್ಸವ ನಡೆಯಲಿದೆ. ಸಹಸ್ರಾರು ಭಕ್ತರು ದೇವಿಯ ರಥವನ್ನು ಎಳೆಯಲಿದ್ದಾರೆ ಎಂದರು.ನಂತರ ತುಲಾಭಾರ, ತಲೆಮುಡಿ ತೆಗೆಯುವುದು, ತೀರ್ಥಸ್ನಾನ, ಉರುಳು ಸೇವೆ, ಕುಂಕುಮಾರ್ಚನೆ ಮತ್ತು ಮಂಗಳಾರತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮದ್ಯಾಹ್ನ 12 ಗಂಟೆಗೆ ಅನ್ನದಾನ ಬಳಿಕ ತಾಯಿಯ ದರ್ಶನ, ಸಂಜೆ 6ಕ್ಕೆ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದೀಪಾರಾಧನೆ, ರಾತ್ರಿ 9 ಗಂಟೆಗೆ ಅನ್ನದಾನ ಸೇವೆ, ದೇವಿಯ ದರ್ಶನ ಹಾಗೂ ಪೂಜಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಂದು ದೇವಾಲಯಕ್ಕೆ ಆಗಮಿಸುವ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ನೀಡಲಾಗುತ್ತದೆ ಎಂದು ಧರ್ಮದರ್ಶಿಗಳು ಮಾಹಿತಿ ನೀಡಿದರು.

ಆಡಳಿತ ಮಂಡಳಿ ಸದಸ್ಯ ಸಚಿನ್ ಮಾತನಾಡಿ, ರಥೋತ್ಸವದಲ್ಲಿ ಭಕ್ತರು ದೇವಿಯ ರಥವನ್ನು ಎಳೆದರೆ, 15 ವರ್ಷದೊಳಗಿನ 50 ಕ್ಕೂ ಹೆಚ್ಚು ಹೆಣ್ಮಕ್ಕಳು ಕಳಸ ಹೊತ್ತು ರಥದೊಂದಿಗೆ ಸಾಗಲಿದ್ದಾರೆ ಎಂದರು.

ಆಡಳಿತ ಮಂಡಳಿ ಸದಸ್ಯರಾದ ಕಿರಣ್ ಕುಮಾರ್, ಪ್ರಶಾಂತ್ ಮತ್ತು ಭಕ್ತರಾದ ಚುಮ್ಮಿ ದೇವಯ್ಯ ಸುದ್ದಿಗೋಷ್ಠಿಯಲ್ಲಿದ್ದರು.