ರಾಜರ್ಷಿ ನಾಲ್ವಡಿ ಒಡೆಯರ ಸೇವೆ ಆಚಂದ್ರಾರ್ಕ: ಪ್ರಾಚಾರ್‍ಯ ಕೆ.ರಂಗಪ್ಪ

| Published : Jun 05 2024, 12:30 AM IST

ರಾಜರ್ಷಿ ನಾಲ್ವಡಿ ಒಡೆಯರ ಸೇವೆ ಆಚಂದ್ರಾರ್ಕ: ಪ್ರಾಚಾರ್‍ಯ ಕೆ.ರಂಗಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯೂರಿನ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಹಿರಿಯೂರು

ಆಧುನಿಕ ಕನ್ನಡ ನಾಡಿನ ಅಭಿವೃದ್ಧಿಯ ಹರಿಕಾರ ಹಾಗೂ ಚಿತ್ರದುರ್ಗ ಜಿಲ್ಲೆಯ ಜೀವನಾಡಿ ವಿವಿ ಸಾಗರ ಜಲಾಶಯದ ನಿರ್ಮಾಣದ ರೂವಾರಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡಿಗರ ಮನಸ್ಸಲ್ಲಿ ಎಂದೆoದಿಗೂ ಅಮರರಾಗಿದ್ದಾರೆ ಎಂದು ಪ್ರಾಂಶುಪಾಲ ಮ್ಯಾಕ್ಲೂರಹಳ್ಳಿ ಕೆ.ರಂಗಪ್ಪ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಡತನ ನಿರ್ಮೂಲನೆ ಮತ್ತು ಗ್ರಾಮೀಣ ಮೂಲ ಸೌಕರ್ಯಗಳ ಅಭಿವೃದ್ಧಿಯ ಕಾಳಜಿ ಹೊಂದಿದ್ದ ಅವರು ತಾನೊಬ್ಬ ಜನಸೇವಕ ಜನ ಸೇವೆಯೇ ತನ್ನ ನೈಜ ಗುರಿ ಎಂದು ಪ್ರತಿಪಾದಿಸಿ ಪ್ರಜಾಪ್ರಭುತ್ವ ಸಿದ್ಧಾಂತವನ್ನು ಜನರಿಗೆ ಪರಿಚಯಿಸಿದರು. ಪ್ರಜೆಗಳ ಸಮಸ್ಯೆಯನ್ನು ಆಲಿಸಲು ಪ್ರಜಾಪ್ರತಿನಿಧಿ ಸಭೆಯನ್ನು ಬಲಗೊಳಿಸಿ ನ್ಯಾಯವಿಧಾಯಕ ಸಭೆಯನ್ನು ಸ್ಥಾಪಿಸಿದರು ಎಂದರು.

ಹಿರಿಯ ಉಪನ್ಯಾಸಕ ಈ.ನಾಗೇಂದ್ರಪ್ಪ ಮಾತನಾಡಿ, ಶಿಕ್ಷಣವೇ ಎಲ್ಲರ ಅಭಿವೃದ್ಧಿಗೂ ಮೂಲವೆಂದು ಭಾವಿಸಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಏಷ್ಯಾ ಖಂಡದಲ್ಲೇ ಮೊದಲ ಬಾರಿಗೆ ಜಲ ವಿದ್ಯುತ್ ಯೋಜನೆ ಪ್ರಾರಂಭಿಸಿದರು. ಅಲ್ಲದೇ ಆರೋಗ್ಯ, ಬಾಲ್ಯ ವಿವಾಹ ನಿಷೇಧ, ಹೆಣ್ಣು ಮಕ್ಕಳಿಗೆ ಶಿಕ್ಷಣ, ವಿಧವೆಯರಿಗೆ ಸಹಾಯಧನ, ಮಹಿಳೆಯರಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡಲು ಕಾನೂನು ರೂಪಿಸಿದ್ದು, ಅವರ ಆಳ್ವಿಕೆಯ ಕಾಲದ ಸಾಧನೆಗಳಾಗಿದ್ದು, ಅವರ ಅವಧಿಯನ್ನು ಮೈಸೂರಿನ ಸುವರ್ಣಯುಗವೆಂದೇ ಬಣ್ಣಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎಚ್.ಆರ್.ಲೋಕೇಶ್, ಎಲ್.ಶಾಂತ ಕುಮಾರ್, ಮಂಜು, ಈ.ಪ್ರಕಾಶ್, ಬಿ.ಎಂ.ತಿಪ್ಪೇಸ್ವಾಮಿ, ಶಿಕ್ಷಕಿಯರಾದ ರಾಜೇಶ್ವರಿ, ಸುನೀತ ಕುಮಾರಿ, ನೂರಜಾನ್, ಅಪ್ರಅಜುಂ, ಮಾಲಾ ಮುಂತಾದವರು ಹಾಜರಿದ್ದರು.