ರಾಜಶೇಖರ ಹಿಟ್ನಾಳಗೆ ಗೆಲುವಿನ ಸುಯೋಗ: ಶಿವರಾಜ ತಂಗಡಗಿ

| Published : Mar 23 2024, 01:04 AM IST

ರಾಜಶೇಖರ ಹಿಟ್ನಾಳಗೆ ಗೆಲುವಿನ ಸುಯೋಗ: ಶಿವರಾಜ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ಜಿಲ್ಲೆಯಲ್ಲಿ ೧೦ ವರ್ಷಗಳ ಕಾಲ ಬಿಜೆಪಿಯವರು ಯಾವ ಅಭಿವೃದ್ಧಿಯನ್ನೂ ಮಾಡಲಿಲ್ಲ. ಕೇವಲ ಮೋದಿ ಅವರ ಹೆಸರಿನಲ್ಲಿ ಬರೀ ಸುಳ್ಳು ಹೇಳಿದ್ದೆ ಸಾಧನೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಯಲಬುರ್ಗಾ: ಈ ಸಾರಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ಸುಯೋಗ ಕೂಡಿಬಂದಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲೆಯಲ್ಲಿ ೧೦ ವರ್ಷಗಳ ಕಾಲ ಬಿಜೆಪಿಯವರು ಯಾವ ಅಭಿವೃದ್ಧಿಯನ್ನೂ ಮಾಡಲಿಲ್ಲ. ಕೇವಲ ಮೋದಿ ಅವರ ಹೆಸರಿನಲ್ಲಿ ಬರೀ ಸುಳ್ಳು ಹೇಳಿದ್ದೆ ಸಾಧನೆಯಾಗಿದೆ. ಹೀಗಾಗಿ ಈ ಸಾರಿ ನಮ್ಮ ಅಭ್ಯರ್ಥಿ ರಾಜಶೇಖರ ಅವರಿಗೆ ಗೆಲುವು ನಿಶ್ಚಿತ ಎಂದರು.

ಬಿಜೆಪಿಯವರು ಮತ್ತೆ ೪೦೦ ಸ್ಥಾನ ಪಡೆಯುತ್ತೇವೆಂದು ಹೇಳುತ್ತಿದ್ದಾರೆ. ಆದರೆ ದೇಶದ ಜನತೆ ಪ್ರಜ್ಞಾವಂತರಿದ್ದಾರೆ. ಬಿಜೆಪಿಯವರಿಗೆ ೨೦೨೪ರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್‌ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ಜನರು ಹಣಕ್ಕಾಗಿ ಮತ ಹಾಕುವುದಿಲ್ಲ. ಕಾಂಗ್ರೆಸ್ ಅಭಿವೃದ್ಧಿಯನ್ನು ಗಮನಿಸಿ ಮತ ಹಾಕುತ್ತಾರೆ. ಈ ಹಿಂದೆ ಕಾಂಗ್ರೆಸ್ ೫೦ ವರ್ಷಗಳ ಕಾಲ ಈ ದೇಶವನ್ನಾಳಿದೆ. ನದಿ, ಸೇತುವೆ, ರಸ್ತೆ, ಡ್ಯಾಂಗಳು ಸೇರಿದಂತೆ ಸಾಕಷ್ಟು ಅಭಿವೃದ್ಧಿಗೊಳಿಸಿ ಜನಮಾಸದಲ್ಲಿ ಉಳಿದುಕೊಂಡಿದೆ. ಆದರೆ ಮೋದಿ ಅವರು ೧೦ ವರ್ಷಗಳಲ್ಲಿ ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ. ಅಂಥವರಿಗೆ ದೇಶದ ಜನತೆ ಮತ ಹಾಕುವುದಿಲ್ಲ. ಬರೀ ಸುಳ್ಳು ಹೇಳುವ ಮೋದಿ ಅವರ ಮಾತಿಗೆ ಮರುಳಾಗಿ ಯಾರೂ ಬಿಜೆಪಿಗೆ ಮತ ಹಾಕಬೇಡಿ ಎಂದರು.

ಲೋಕಸಭಾ ನಿಯೋಜಿತ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮಾತನಾಡಿ, ಈಗಾಗಲೇ ನಾನು ಎರಡು ಬಾರಿ ಸೋತಿದ್ದೇನೆ. ಈ ಬಾರಿ ಜಿಲ್ಲೆಯ ಅಭಿವೃದ್ಧಿಯ ಸೇವೆ ಮಾಡಲು ಒಂದು ಅವಕಾಶ ಮಾಡಿಕೊಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು.

ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಪಕ್ಷದ ಮುಖಂಡರಾದ ಯಂಕಣ್ಣ ಯರಾಶಿ, ವೀರನಗೌಡ ಬಳೋಟಗಿ, ರಾಘವೇಂದ್ರ ಜೋಷಿ, ಬಿ.ಎಂ. ಶಿರೂರು, ಹನುಮಂತಗೌಡ ಪಾಟೀಲ, ನಾರಾಯಣಪ್ಪ ಹರಪ್ಪನಹಳ್ಳಿ, ಎ.ಜಿ. ಭಾವಿಮನಿ, ಕೆರಿಬಸಪ್ಪ ನಿಡಗುಂದಿ, ಡಾ. ಶಿವನಗೌಡ ದಾನರಡ್ಡಿ, ಸುಧೀರ್ ಕೋರ್ಲಳ್ಳಿ ಇದ್ದರು.

೨೨ವೈಎಲ್‌ಬಿ೧: ಯಲಬುರ್ಗಾದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಪೂರ್ವಭಾವಿ ಸಭೆ ಜರುಗಿತು.