ಕೊಪ್ಪಳ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ರಾಜಶೇಖರ ಹಿಟ್ನಾಳ್

| Published : Mar 22 2024, 01:08 AM IST

ಕೊಪ್ಪಳ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ರಾಜಶೇಖರ ಹಿಟ್ನಾಳ್
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಶೇಖರ ಹಿಟ್ನಾಳ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ಮೂಲಕ ಇದುವರೆಗೂ ನಡೆಯುತ್ತಿದ್ದ ಎಲ್ಲ ಚರ್ಚೆಗಳಿಗೂ ಬ್ರೇಕ್ ಹಾಕಲಾಗಿದೆ.

- ಹಿಟ್ನಾಳ ಕುಟುಂಬಕ್ಕೆ ಮತ್ತೆ ಮಣೆ ಕನ್ನಡಪ್ರಭ ವಾರ್ತೆ ಕೊಪ್ಪಳ

ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಶೇಖರ ಹಿಟ್ನಾಳ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ಮೂಲಕ ಇದುವರೆಗೂ ನಡೆಯುತ್ತಿದ್ದ ಎಲ್ಲ ಚರ್ಚೆಗಳಿಗೂ ಬ್ರೇಕ್ ಹಾಕಲಾಗಿದೆ.

ಎರಡು ಬಾರಿ ಜಿಪಂ ಅಧ್ಯಕ್ಷನಾಗಿ ಸೇವೆ ಸಲ್ಲಿಸಿರುವ ಮತ್ತು ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಕೇವಲ 30 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದ ರಾಜಶೇಖರ ಹಿಟ್ನಾಳ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸತತ 3 ಬಾರಿ ಬಿಜೆಪಿಯೇ ಜಯ ಸಾಧಿಸಿದೆ. ಇದರಲ್ಲಿ ಕೆ. ಬಸವರಾಜ ಹಿಟ್ನಾಳ ಹಾಗೂ ರಾಜಶೇಖರ ಹಿಟ್ನಾಳ ಕಳೆದೆರಡು ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋಲುಂಡಿದ್ದಾರೆ. ಈಗ ಮತ್ತೊಮ್ಮೆ ಅಖಾಡಕ್ಕೆ ಇಳಿಯುವ ಮೂಲಕ ಸೆಡ್ಡು ಹೊಡೆದಿದ್ದಾರೆ.

ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಇದ್ದು, ಅದರಲ್ಲಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರೇ ಇದ್ದಾರೆ. ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಹಾಗೂ ಮತ್ತೊಂದರಲ್ಲಿ ಕೆಆರ್‌ಪಿಪಿ ಶಾಸಕರಿದ್ದಾರೆ.

ಹೀಗಾಗಿ, ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಬೆಂಬಲ ಇದೆ ಎನ್ನುವುದು ಕಾಂಗ್ರೆಸ್ ಅಭ್ಯರ್ಥಿಗೆ ಪ್ಲಸ್ ಆಗಲಿದೆ. ಈ ನಡುವೆ ಬಿಜೆಪಿಯಲ್ಲಿ ಎದ್ದಿರುವ ಗೊಂದಲವೂ ಸಹ ಹಾಗೆಯೇ ಇದ್ದು, ಇತ್ಯರ್ಥವಾಗುವ ಯಾವುದೇ ಲಕ್ಷಣಗಳು ಇಲ್ಲದಿರುವುದರಿಂದ ಕಾಂಗ್ರೆಸ್‌ಲ್ಲಿ ಆತ್ಮವಿಶ್ವಾಸ ಹೆಚ್ಚಿದೆ.

ಟಿಕೆಟ್ ವಂಚಿತ ಸಂಗಣ್ಣ ಕರಡಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆಗೆ ಸಂಪೂರ್ಣ ಬ್ರೇಕ್ ಬೀಳಲಿದೆ. ಇನ್ನು ಕರಡಿ ಅವರ ಮುಂದಿನ ನಡೆ ಕುತೂಹಲ ಹುಟ್ಟಿಸಿದೆ. ಬಿಜೆಪಿ ಟಿಕೆಟ್‌ಗೆ ಪ್ರಯತ್ನ ಮುಂದುವರಿಸಿರುವ ಅವರು ಟಿಕೆಟ್‌ ಸಿಗದಿದ್ದಲ್ಲಿ ಬಂಡೆದ್ದು ಪಕ್ಷೇತರರಾಗಿ ಸ್ಪರ್ಧಿಸುತ್ತಾರೆಯೇ ಎಂಬ ಕುತೂಹಲ ಉಳಿದಿದೆ.

ಹೀಗಾಗಿ, ಬಿಜೆಪಿ ಅಭ್ಯರ್ಥಿ ಡಾ. ಕೆ. ಬಸವರಾಜ ಹಾಗೂ ಕಾಂಗ್ರಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರ ನಡುವೆ ಫೈಟ್ ನಡೆಯಲಿದೆ.

ಪಕ್ಷದ ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ನಾಯಕರು ನನ್ನ ಮೇಲೆ ವಿಶ್ವಾಸವಿಟ್ಟು ಮತ್ತೆ ಟಿಕೆಟ್ ನೀಡಿದ್ದಾರೆ. ಅವರ ವಿಶ್ವಾಸವನ್ನು ಉಳಿಸಕೊಳ್ಳುವ ದಿಸೆಯಲ್ಲಿ ಈ ಬಾರಿ ಗೆಲುವು ಸಾಧಿಸುವುದಕ್ಕಾಗಿ ಶಕ್ತಿಮೀರಿ ಶ್ರಮಿಸುತ್ತೇನೆ ಎಂದು ರಾಜಶೇಖರ ಹಿಟ್ನಾಳ ತಿಳಿಸಿದ್ದಾರೆ.