ಸಾರಾಂಶ
ಗುತ್ತಣ್ಣಗೌಡ ಘೋಷಣೆ । ಉಪಾಧ್ಯಕ್ಷರಾಗಿ ಮಲ್ಲೇಶ ಬಾವೂರ । ಬಿಜೆಪಿ ಮುಖಂಡರಿಗೆ ಆಡಳಿತ ಮಂಡಳಿ ಸದಸ್ಯರ ಸನ್ಮಾನ
ಕನ್ನಡಪ್ರಭ ವಾರ್ತೆ ಯಾದಗಿರಿತಾಲೂಕಿನ ವರ್ಕನಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಸಂಘದ ಅಧ್ಯಕ್ಷರಾಗಿ ರಾಜಶೇಖರಯ್ಯ ಸ್ವಾಮಿ ಮುಷ್ಟೂರು ಮತ್ತು ಉಪಾಧ್ಯಕ್ಷರಾಗಿ ಮಲ್ಲೇಶ ಬಾವೂರ ಪಗಲಾಪೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗುತ್ತಣ್ಣಗೌಡ ಘೋಷಣೆ ಮಾಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜಶೇಖರಯ್ಯ ಸ್ವಾಮಿ ಮುಷ್ಟೂರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಏಕೈಕ ಅಭ್ಯರ್ಥಿಗಳಾಗಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದರು. ತದನಂತರ ನಾಮಪತ್ರ ಪರಿಶೀಲನೆ ಮಾಡಿ ಈ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಸಭೆಯಲ್ಲಿ ಘೋಷಿಸಿದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ರಾಜಶೇಖರಯ್ಯ ಸ್ವಾಮಿ ಮಾತನಾಡಿ, ನಮ್ಮ ಸಂಘವು ಉತ್ತಮವಾಗಿ ಕೆಲಸ ಮಾಡುತ್ತ ಬಂದಿದೆ. ನಾನು ಕೂಡ ಎಲ್ಲಾ ಆಡಳಿತ ಮಂಡಳಿಯ ನಿರ್ದೇಶಕರ ಸಹಕಾರದಿಂದ ಸರ್ಕಾರದ ಯೋಜನೆಗಳ ಲಾಭ ರೈತರಿಗೆ ಹಾಗೂ ಮಹಿಳಾ ಸ್ವ-ಸಹಾಯ ಸಂಘಗಳಿಗೆ ತಲುಪಿಸುವ ಮೂಲಕ ಸಂಘವನ್ನು ಆರ್ಥಿಕವಾಗಿ ಸದೃಢವಾಗಿ ಬಲಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆ ನಂತರ ಬಿಜೆಪಿ ಹಿರಿಯ ಮುಖಂಡರಾದ ರಾಚಣಗೌಡ ಮುದ್ನಾಳ ಮತ್ತು ಮಹೇಶರೆಡ್ಡಿ ಗೌಡ ಮುದ್ನಾಳ ಅವರಿಗೆ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಸನ್ಮಾನಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಚಣಗೌಡ ಮುದ್ನಾಳ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಸದಸ್ಯರಿಗೆ ಅಭಿನಂದನೆ ತಿಳಿಸುತ್ತಾ ತಮ್ಮ ಸಂಘಕ್ಕೆ ಸರಕಾರದಿಂದ ಬರುವ ಯೋಜನೆಗಳು, ರೈತರಿಗೆ ಸಾಲ, ಮಹಿಳಾ ಸ್ವ ಸಹಾಯ ಸಂಘಗಳಿಗೆ ಸಾಲ ಕೊಡುವುದರ ಮೂಲಕ ಅವುಗಳು ಸದೃಢವಾಗಿ ಮಾಡಬೇಕು ಎಂದು ತಿಳಿಸಿದರು.
ಸಂಘದ ನಿರ್ದೇಶಕರಾದ ಮಲ್ಲಣ್ಣಗೌಡ ಎಂ.ಹೊಸಳ್ಳಿ, ಕಾಶಪ್ಪ ಮಸ್ಕನಳ್ಳಿ, ದೇವರಾಜ ಬಳಿಚಕ್ರ, ರವಿ ವರ್ಕನಳ್ಳಿ, ಶರಣಯ್ಯ ಕೂಯಿಲೂರು, ರಾಮಯ್ಯ ಕಲ್ಯಾಣಿ, ರಸೂಲಬಿ ಮುಷ್ಟೂರ, ಗ್ರಾಮದ ಮುಖಂಡರಾದ ಮರೆಪ್ಪ ವಡ್ಡರ, ವರ್ಕನಳ್ಳಿ ಗ್ರಾಪಂ ಮಾಜಿ ಅಧ್ಯಕ್ಷರಾದ ಶರಣಪ್ಪ ಬಳಿಚಕ್ರ, ಭೀಮರೆಡ್ಡಿ ಎಂ. ಹೊಸಳ್ಳಿ, ಯಂಕಪ್ಪ ಎಂ. ಹೊಸಳ್ಳಿ, ಬಾಪುಗೌಡ ಕೂಯಿಲೂರು, ಮೋನಪ್ಪ ಉಪ್ಪಾರ, ಬಾಲಪ್ಪ ಕೂಯಿಲೂರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ರಾಘವೇಂದ್ರ ಕಲಾಲ ಇತರರು ಇದ್ದರು.