ಸಾರಾಂಶ
ಕಾರಟಗಿ: ಒಬ್ಬ ಸಂಘಟಕ, ಹೋರಾಟಗಾರ ಕನ್ನಡ ಪ್ರೇಮಿಯಾಗಿದ್ದ ರಾಜಶೇಖರ ಅಂಗಡಗಿ ಅವರನ್ನು ಕಳೆದುಕೊಂಡ ಕೊಪ್ಪಳ ಜಲ್ಲೆ ಸಾಹಿತ್ಯ ಲೋಕ ಬಡವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣಪ್ಪ ಕೋಟ್ಯಾಳ ಹೇಳಿದರು.
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಸಭಾಭವನದಲ್ಲಿ ತಾಲೂಕು ಕಸಾಪ ಗುರುವಾರ ರಾತ್ರಿ ಆಯೋಜಿಸಿದ್ದ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ರಾಜಶೇಖರ ಅಂಗಡಿ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಂಗಡಿ ಕಸಾಪ ಜಿಲ್ಲಾಧ್ಯಕ್ಷರಾಗಿದ್ದಾಗ ಪರಿಷತ್ ಅನ್ನು ಜನರ ಪರಿಷತ್‌ನ್ನಾಗಿ ಪರಿವರ್ತಿಸಿದರು. ಅವರ ಅಗಲಿಕೆಯಿಂದ ಜಿಲ್ಲೆಯ ಸಾಹಿತ್ಯ, ಕಲಾ ವಲಯದ ಪ್ರೇಮಿಗಳಲ್ಲಿನ ಆತ್ಮೀಯ ಸಂಪರ್ಕದ ಒಂದು ಕೊಂಡಿ ಕಳಚಿದಂತಾಗಿದೆ. ಅದು ಎಂದೆಂದೂ ತುಂಬಲಾರದ ನಷ್ಟ ಎಂದರು. ಅಂಗಡಿ, ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದರೂ ಕನ್ನಡ ಸಾಹಿತ್ಯ, ಭಾಷೆ, ನಾಡು, ನೆಲ, ಜಲ ಸಂರಕ್ಷಣೆ, ಹೋರಾಟದಲ್ಲಿ ಸದಾ ತೊಡಗಿಸಿಕೊಂಡಿದ್ದರು ಈಗ ಜಿಲ್ಲೆ ಇಂಥ ಸಂಘಟಕನನ್ನು ಕಳೆದುಕೊಂಡಿದೆ ಎಂದು ದುಃಖ ವ್ಯಕ್ತಪಡಿಸಿದರು
ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ್, ಪರಿಷತ್‌ನ ಕನಕಗಿರಿ ವಿಧಾನಸಭಾ ಘಟಕದ ಮಾಜಿ ಅಧ್ಯಕ್ಷ ಬಸವರಾಜ ರ್‍ಯಾವಳದ ಮಾತನಾಡಿ ಕಳೆದ ಮೂರು ದಶಕಗಳಿಂದ ನಿರಂತರವಾಗಿ ಕನ್ನಡ ಸಾಹಿತ್ಯ, ಜನಪದ, ಕಲೆ, ಸಂಸ್ಕೃತಿ ರಕ್ಷಣೆ, ಬೆಳವಣಿಗೆಯಲ್ಲಿ ತೊಡಗಿಸಿಕೊಂಡ ಕಾರಣಕ್ಕೆ ರಾಜಶೇಖರ ಅಂಗಡಿಯವರ ಆರೋಗ್ಯ ಇತ್ತೀಚಿನ ವರ್ಷಗಳಲ್ಲಿ ಕ್ಷೀಣಿಸಿತ್ತು. ಕನ್ನಡಪರವಾಗಿರುವ ಸದಾ ಕಾಳಜಿ ಹೊಂದಿದ್ದ ಒಂದು ಹಿರಿಯ ಜೀವ ಇಲ್ಲವಾಗಿರುವುದು ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂದು ಸ್ಮರಿಸಿದರು.ಉಪನ್ಯಾಸಕ ವಿರೂಪಾಕ್ಷೇಶ್ವರ ಕಾರಟಗಿ, ಖಜಾನೆ ಇಲಾಖೆ ಅಧಿಕಾರಿ ಹನುಮಂತಪ್ಪ ತೊಂಡಿಹಾಳ, ಭೀಮಣ್ಣ ಕರಡಿ, ಎಂ. ಅಮರೇಶಗೌಡ ಮತ್ತು ಮೆಹಬೂಬ್ ಕಿಲ್ಲೇದಾರ ಮಾತನಾಡಿದರು. ಕಸಾಪ ಪದಾಧಿಕಾರಿಗಳು, ಶಿಕ್ಷಕರು, ಸಾಹಿತ್ಯಾಸಕ್ತರು ದಿವಂಗತ ರಾಜಶೇಖರ ಅಂಗಡಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಈ ವೇಳೆ ಪ್ರಭು ಉಪನಾಳ, ಶಿಕ್ಷಕರಾದ ದ್ಯಾಮಣ್ಣ ಬೆನಕಟ್ಟಿ, ಶ್ಯಾಮಸುಂದರ್ ಇಂಜಿನಿ, ಜಟಿಂಗರಾಯ ದಳವಾಯಿ, ಸುರೇಶ್ ಬೆಟಗೇರಿ, ಗುರಪ್ಪ, ಜಂಬುನಾಥ್, ಬಸವರಾಜ ಕಲ್ಮಂಗಿ, ಹೋಮಣ್ಣ, ಭೀಮರಾಯ ಬಂಗಾರಿ, ಮಹಾಂತೇಶ್ ಗದ್ದಿ, ಜಗದೀಶ್ ಭಜಂತ್ರಿ, ಅಮರೇಶ್ ಪಾಟೀಲ್, ಮಹೇಶ್ ಮಡಿವಾಳ, ಅಯ್ಯಪ್ಪ ಮೈಲಾಪುರ ಉಮೇಶ ಮರ್ಲಾನಹಳ್ಳಿ ಸೇರಿ ಇನ್ನಿತರರು ಇದ್ದರು. ಮಂಜುನಾಥ್ ಚಿಕೇನಕೊಪ್ಪ ಮತ್ತು ರುದ್ರಗೌಡ ಪಾಟೀಲ್ ಮೈಲಾಪುರ ಕಾರ್ಯಕ್ರಮ ನಿರ್ವಹಿಸಿದರು.