ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಬೆಳಗಾವಿಪ್ರಾಯೋಗಿಕ ಕಲಿಕೆ ಕೇವಲ ವಿಜ್ಞಾನ, ಗಣಿತ ವಿಷಯಕ್ಕೆ ಮಾತ್ರ. ಏಕೆಂದರೆ ಈ ವಿಷಯಗಳ ಪ್ರಯೋಗಕ್ಕೆ ಪ್ರಯೋಗಾಲಯ ಇರುವುದು. ಆದರೆ, ಸಮಾಜ ವಿಜ್ಞಾನ ವಿಷಯವನ್ನು ಕೂಡ ಪ್ರಾಯೋಗಿಕವಾಗಿ ಕಲಿಸಬಹುದು ಎನ್ನುವುದಕ್ಕೆ ಪ್ರಯೋಗಾಲಯ ನಿರ್ಮಿಸುವ ಮೂಲಕ ಜಿಲ್ಲೆಯಲ್ಲಿಯೇ ಪ್ರಪ್ರಥಮ ಸಮಾಜ ವಿಜ್ಞಾನ ಪ್ರಯೋಗಾಲಯ ಸೃಷ್ಟಿಸಿ ರಾಜ್ಯದ ಗಮನ ಸೆಳೆದಿದ್ದಾರೆ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ರಾಜಶೇಖರ ಕ.ರಗಟಿ ಅವರು. ಹೀಗಾಗಿ ಅವರಿಗೆ ಈ ಬಾರಿಯ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪುರಸ್ಕಾರ ಕೂಡ ಲಭಿಸಿದೆ.
ಶಿಕ್ಷಕ ರಗಟಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತ ಬಂದಿದ್ದು, ತಮ್ಮ ಶಾಲೆಯಲ್ಲಿಯೇ ಒಂದು ಕೊಠಡಿಯಲ್ಲಿ ಸ್ಥಾಪಿಸಿರುವ ಸಮಾಜ ವಿಜ್ಞಾನ ವಿಷಯದ ಪ್ರಯೋಗಾಲಯಕ್ಕೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಹಿಡಿದು ಜಿಲ್ಲೆಯ ಜನಪ್ರತಿನಿಧಿಗಳ, ಶಿಕ್ಷಣ ತಜ್ಞರು ಭೇಟಿ ನೀಡಿದ್ದು, ಪ್ರಶಂಸೆ ವ್ಯಕ್ತಪಡಿಸಿದ್ದರು. ಈ ಬಾರಿಯ ರಾಜ್ಯಮಟ್ಟದ ಶಿಕ್ಷಕ ಪುರಸ್ಕಾರ ಬಂದಿರುವುದರಿಂದ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ.ಶಾಲೆಯಲ್ಲಿ ಮಾತ್ರವಲ್ಲ ಯೂಟ್ಯೂಬ್‌ನಲ್ಲಿ ಪಾಠ ಬೋಧನೆ:
ಶಾಲಾ ತರಗತಿಯಲ್ಲಿ ಅಷ್ಟೇ ಅಲ್ಲದೇ, ಯೂಟ್ಯೂಬ್‌ನಲ್ಲಿಯೂ ವಿದ್ಯಾರ್ಥಿಗಳಿಗೆ ರಾಜಶೇಖರ ಅವರು ಬೋಧನೆ ಮಾಡುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ ಉತ್ತಮ ಅಂಕ ಗಳಿಸುವುದು ಹೇಗೆ? ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಕಲಿಕಾ ಆಸಕ್ತಿಯನ್ನು ಹೆಚ್ಚಿಸಿ ಪ್ರೋತ್ಸಾಹಿಸುತ್ತಿದ್ದಾರೆ.ತಾಲೂಕಿನಲ್ಲಿ ನಂ.1 ಶಾಲೆ:
ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿಯೂ ಕೆಲಸ ಮಾಡಿರುವ ರಾಜಶೇಖರ ಅವರು ಮರು ಸಿಂಚನ ಪಠ್ಯಪುಸ್ತಕದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಈ ಅನುಭವ ಬಳಸಿಕೊಂಡು ಶಾಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಉತ್ತೇಜಿಸಿದ ಪರಿಣಾಮ ವಿವಿಧ ಭಾಷಣ, ನಿಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಪ್ರಶಸ್ತಿ ಪಡೆಯುವ ಮೂಲಕ ಇಡೀ ತಾಲೂಕಿನಲ್ಲಿ ನಂ.1 ಶಾಲೆಯಾಗಿ ಮುನ್ನಡೆಯುತ್ತಿದೆ.ಪ್ರಯೋಗಾಲಯದಲ್ಲಿವೆ ಹಲವು ವಿಶೇಷ:
ಸಮಾಜ ವಿಜ್ಞಾನ ಪ್ರಯೋಗಾಲಯದಲ್ಲಿ ಜಿಯಾಗ್ರಫಿ, ಗೋಲ್‌ಗುಮ್ಮಟ, ಪ್ರಾಯೋಗಿಕ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಲಾಗಿದೆ. ಶಿಲಾಯುಗದಿಂದ ಬ್ರಿಟಿಷ ಯುಗದವರೆಗೆ ಕಾಲ ರೇಖೆ (ಟೈಮ್‌ಲೈನ್) ನಿರ್ಮಿಸಲಾಗಿದೆ. ಕಾಲ ರೇಖೆ 80 ಅಡಿ ಉದ್ದ 8 ಅಡಿ ಅಗಲದ ಅಳತೆಯಲ್ಲಿದೆ. ರಾಜಕೀಯ ನಕ್ಷೆ, ಭೌಗೋಳಿಕ ನಕ್ಷೆ, ವ್ಯಕ್ತಿಗಳ ಭಾವಚಿತ್ರ ಮತ್ತು ಅವರ ಸಾಧನೆಗಳ ಬಗ್ಗೆ ವಿವರಿಸಲಾಗಿದೆ. ವಿದ್ಯಾರ್ಥಿಗಳಿಂದ ಥರ್ಮಾಕೋಲ್‌ನಿಂದ ಮಾದರಿ ಸುವರ್ಣಸೌಧ ಮತ್ತು ಅಯೋಧ್ಯಾ ರಾಮಮಂದಿರವನ್ನು ನಿರ್ಮಿಸಿರುವುದು ವಿಶೇಷ. ವಾರದಲ್ಲಿ 2 ಬಾರಿ ಈ ಪ್ರಯೋಗಾಲಯದಲ್ಲಿ ಪಾಠ ಬೋಧನೆ ಮಾಡಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿರುವುದರಿಂದ ಶಿಕ್ಷಣ ಇಲಾಖೆಯ ಆಯುಕ್ತರಿಂದ, ಹಿರಿಯ ಅಧಿಕಾರಿಗಳಿಂದ ಅಭಿನಂದನೆ ಪತ್ರ ಬಂದಿವೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ತಾಲೂಕಿನಲ್ಲಿಯೇ ನಮ್ಮ ಶಾಲೆ ಉನ್ನತ ಸ್ಥಾನದಲ್ಲಿದೆ. ಪಾಲಕರ, ಎಸ್‌ಡಿಎಂಸಿ ಸದಸ್ಯರ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಸಹಕಾರ ಹಾಗೂ ಪ್ರೋತ್ಸಾಹದಿಂದ ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ. ಇದೇ ವೇಳೆ ನಮ್ಮ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದ ರಾಜಶೇಖರ ರಗಟಿ ಅವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವುದು ಶಾಲೆಯ ಕೀರ್ತಿ ರಾಜ್ಯಮಟ್ಟಕ್ಕೆ ಹೆಚ್ಚಿಸಿದಂತಾಗಿದೆ. ಶಾಲೆಯ ಪರವಾಗಿ ಪುರಸ್ಕೃತ ಶಿಕ್ಷಕರಿಗೆ ಅಭಿನಂದನೆಗಳು.-ಬಸವರಾಜ ಬಿದರಿ,
ಮುಖ್ಯೋಪಾಧ್ಯಯರು, ಸರ್ಕಾರಿ ಪ್ರೌಢಶಾಲೆ ಹಿರೇನಂದಿಹಳ್ಳಿ.ಕಿತ್ತೂರು ತಾಲೂಕು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಲೆದ 3 ವರ್ಷಗಳಿಂದ ಉತ್ತಮ ಸಾಧನೆ ಮಾಡುತ್ತ ಬಂದಿದೆ. ನೂರರಷ್ಟು ಫಲಿತಾಂಶ ಬಂದಿದೆ. ನನಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಈ ಪ್ರಶಸ್ತಿಯನ್ನು ನಮ್ಮ ಶಿಕ್ಷಕ ವೃಂದಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಸಮರ್ಪಿಸುತ್ತೇನೆ.-ರಾಜಶೇಖರ ರಗಟಿ,
ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು.