ರಾಜಾಸ್ತಾನ ಚಿನ್ನದ ವ್ಯಾಪಾರಿ ಲೂಟಿ: ಇಬ್ಬರು ಆರೋಪಿಗಳ ಸೆರೆ

| Published : Mar 05 2024, 01:38 AM IST

ರಾಜಾಸ್ತಾನ ಚಿನ್ನದ ವ್ಯಾಪಾರಿ ಲೂಟಿ: ಇಬ್ಬರು ಆರೋಪಿಗಳ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಸ್ಥಾನ ಮೂಲದ ರಾಮ್‌ ರಾಯ್‌ (21) ಹಾಗೂ ಪ್ರವೀಣ್‌ ಕುಮಾರ್‌ (25) ಬಂಧಿತರು. ಅವರಿಂದ ಸುಮಾರು 10 ಲಕ್ಷ ರು. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಕುಂದಾಪುರಇಲ್ಲಿನ ಲಾಡ್ಜೊಂದರಲ್ಲಿ 8 ತಿಂಗಳ ಹಿಂದೆ ವ್ಯಾಪಾರಿಯಿಂದ 22.56 ಲಕ್ಷ ರು. ಮೌಲ್ಯದ 420 ಗ್ರಾಂ. ತೂಕದ ಚಿನ್ನಾಭರಣ ಕಳವು ಮಾಡಿದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಕುಂದಾಪುರ ಪೊಲೀಸರು ಇಬ್ಬರು ಆರೋಪಿಯನ್ನು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ರಾಮ್‌ ರಾಯ್‌ (21) ಹಾಗೂ ಪ್ರವೀಣ್‌ ಕುಮಾರ್‌ (25) ಬಂಧಿತರು. ಅವರಿಂದ ಸುಮಾರು 10 ಲಕ್ಷ ರು. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಲಲಾಗಿದೆ ರಾಜಸ್ಥಾನದ ಮೂಲದ ಹಾಜಿ ಗೋಲ್ಡ್‌ ಆ್ಯಂಡ್‌ ಡೈಮಂಡ್‌ ಜುವೆಲರಿಯ ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್‌ ರಮೇಶ್‌ ಕುಮಾರ್‌ ಅವರು ಸ್ನೇಹಿತ ರಾಮ್ ಎಂಬಾತನೊಂದಿಗೆ ಸಿದ್ದ ಚಿನ್ನಾಭರಣ ಮಾರಾಟಕ್ಕೆಂದು 2023ರ ಜೂ. 10ರಂದು ಕುಂದಾಪುರಕ್ಕೆ ಬಂದಿದ್ದರು. ರಾತ್ರಿ ಇಲ್ಲಿನ ಖಾಸಗಿ ಹೊಟೇಲೊಂದರಲ್ಲಿ ಇಬ್ಬರು ಉಳಿದುಕೊಂಡಿದ್ದರು. ರಮೇಶ್ ತನ್ನ ಬಳಿ ಇದ್ದ ಸುಮಾರು 421 ಗ್ರಾಂ. ತೂಕದ ಚಿನ್ನಾಭರಣವನ್ನು ಮಂಚದ ಕೆಳಗಿಟ್ಟು ಮಲಗಿದ್ದರು. ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಎದ್ದು ನೋಡಿದಾಗ ರಾಮ್‌ ನಾಪತ್ತೆಯಾಗಿದ್ದು, ಚಿನ್ನಾಭರಣದ ಬ್ಯಾಗ್‌ ಕೂಡ ಇರಲಿಲ್ಲ. ಹೊರಗಿನಿಂದ ರೂಮಿನ ಬಾಗಿಲು ಹಾಕಲಾಗಿತ್ತು. ನಂತರ ರಮೇಶ್ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ ನಿರ್ದೇಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಯು. ಬಿ. ನಂದಕುಮಾರ್‌ ಮಾರ್ಗದರ್ಶನದಲ್ಲಿ ಎಸ್‌ಐಗಳಾದ ವಿನಯ ಎಂ. ಕೊರ್ಲಹಳ್ಳಿ, ಪ್ರಸಾದ ಕುಮಾರ್‌ ಕೆ., ಸಿಬಂದಿ ವರ್ಗದ ಸಂತೋಷ ಕುಮಾರ್‌, ಶ್ರೀಧರ್‌, ರಾಮ ಪೂಜಾರಿ ತಂಡ ಕಳೆದ 9 ತಿಂಗಳಿಂದ ನಿರಂತರ ಶ್ರಮಿಸಿ, ತಾಂತ್ರಿಕ ಮಾಹಿತಿ ಕಲೆ ಹಾಕಿ ಆರೋಪಿಗಳು ಮುಂಬಯಿಯಲ್ಲಿ ಇರುವುದಾಗಿ ಪತ್ತೆ ಹಚ್ಚಿದ್ದರು. ನಂತರ ಅಲ್ಲಿಗೆ ತೆರಳಿ ಇಬ್ಬರನ್ನು 175 ಗ್ರಾಂ. ಚಿನ್ನಾಭರಣಗಳೊಂದಿಗೆ ಬಂಧಿಸಿ ಕರೆ ತಂದಿದ್ದಾರೆ.