ಸಾರಾಂಶ
ಪೂಜ್ಯ ರಾಜೇಂದ್ರ ಶ್ರೀಗಳು ನಾಡಿಗೆ ಮತ್ತು ದೇಶಕ್ಕೆ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಕೆಸ್ತೂರು ಪಟ್ಟದ ಮಠದ ತೋಂಟದಾರ್ಯ ಸ್ವಾಮಿ ಹೇಳಿದರು.
ಕನ್ನಡಪ್ರಭ ವಾರ್ತೆ ಯಳಂದೂರು
ಪೂಜ್ಯ ರಾಜೇಂದ್ರ ಶ್ರೀಗಳು ನಾಡಿಗೆ ಮತ್ತು ದೇಶಕ್ಕೆ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಕೆಸ್ತೂರು ಪಟ್ಟದ ಮಠದ ತೋಂಟದಾರ್ಯ ಸ್ವಾಮಿ ಹೇಳಿದರು.ಪಟ್ಟಣದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ಹಾಗೂ ಅಕ್ಷರ ದಾಸೋಹ ಕೇಂದ್ರದ ವತಿಯಿಂದ ಆಯೋಜಿಸಿದ್ದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಶತೋತ್ತರ ದಶಮಾನೋತ್ಸವ ೧೧೦ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ಅನ್ನ ದಾಸೋಹವನ್ನು ಮಾಡಿದ್ದಾರೆ. ದೊಡ್ಡ ಸಂಸ್ಥೆಯನ್ನು ನಿರ್ಮಾಣ ಮಾಡಿದ್ದಾರೆ. ಇವರು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಇಂತಹ ಮಹಾನ್ ದಾರ್ಶನಿಕರು ಹಾಕಿಕೊಟ್ಟ ಹಾದಿಯಲ್ಲಿ ನಾವು ನಡೆಯಬೇಕು ಎಂದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಅಭಿವೃದ್ಧಿ ವಿಭಾಗದ ನಿರ್ದೇಶಕ ರೇವಣ್ಣ ಸ್ವಾಮಿ ಮಾತನಾಡಿ, ರಾಜೇಂದ್ರ ಶ್ರೀ ಹತ್ತಿರದಿಂದ ನೋಡಿದ ಸೌಭಾಗ್ಯ ನನ್ನದಾಗಿದೆ. ಇವರು ಸರಳ ಬದುಕು ಸವೆಸಿದರು. ತಮ್ಮ ಇಡೀ ಜೀವನವನ್ನು ಬಡವರಿಗೆ ಅನ್ನ, ಶಿಕ್ಷಣ ನೀಡಲು ಶ್ರಮಿಸಿದರು. ಬಸವಣ್ಣನವರ ಕಾಯಕ ತತ್ವದಲ್ಲಿ ನಂಬಿಕೆ ಇಟ್ಟು ಇವರು ಇದನ್ನು ತಮ್ಮ ಜೀವನದುದ್ದಕ್ಕೂ ಅನುಸರಿಸಿಕೊಂಡು ಬಂದಿದ್ದರು. ಇಂತಹ ಮಹಾತ್ಮರು ಸದಾ ಕಾಲ ನಮ್ಮೊಂದಿಗೆ ಇರುತ್ತಾರೆ ಎಂದರು.ಮೈಸೂರಿನ ಜೆಎಸ್‌ಎಸ್ ಮಹಿಳಾ ಕಾಲೇಜಿನ ಕನ್ನಡ ಅಧ್ಯಾಪಕ ಎಚ್.ಎಸ್. ಸಿದ್ದಮಲ್ಲಿಕಾರ್ಜುನ ಅವರು ನುಡಿನಮನವನ್ನು ಸಲ್ಲಿಸಿದರು. ಕಾರಾಪುರದ ವಿರಕ್ತ ಮಠದ ಬಸವರಾಜ ಸ್ವಾಮಿ ಒಡೆಯರ್, ಗೌಡಹಳ್ಳಿಯ ವಿರಕ್ತ ಮಠದ ಮರಿತೋಂಟದಾರ್ಯ ಸ್ವಾಮಿ, ಮಾತನಾಡಿದರು.
ಸಮಾಜ ಸೇವಕ ದುಗ್ಗಟ್ಟಿ ಪಿ. ವೀರಭದ್ರಪ್ಪ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿ. ಚಂದ್ರಕಲಾ, ಪ್ರಾಂಶುಪಾಲ ಎಚ್.ಎಸ್. ಚಂದ್ರಶೇಖರ, ಶಿಕ್ಷಕರಾದ ಎಲ್. ವಿಶ್ವನಾಥ್, ಸೇರಿದಂತೆ ಶಿಕ್ಷಕರು ಉಪನ್ಯಾಸಕರು, ವಿದ್ಯಾರ್ಥಿನಿಯರು, ಶ್ರೀಮಠದ ಭಕ್ತರು ಭಾಗವಹಿಸಿದ್ದರು.