ಸಾರಾಂಶ
ಕನ್ನಡಪ್ರಭ ವಾರ್ತೆ ಗದಗ
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ವಿಜ್ಞಾನ, ತಂತ್ರಜ್ಞಾನ ಮತ್ತು ಪುನರ್ ಉತ್ಪಾದನೀಯ ಇಂಧನ ಕ್ಷೇತ್ರಕ್ಕೆ ನೀಡಿದ ದೂರದೃಷ್ಟಿ ಕೊಡುಗೆಗಳು ಇಂದು ಜೈವಿಕ ಇಂಧನ ಚಳುವಳಿಗೆ ಪ್ರೇರಕವಾಗಿವೆ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ. ಸುಧೀಂದ್ರ ಹೇಳಿದರು.ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸದ್ಭಾವನಾ ದಿವಸ್-ಊರ್ಜಾ ದಿವಸ್-ವಿಶ್ವ ಜೈವಿಕ ಇಂಧನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸದ್ಭಾವನಾ ದಿವಸ್ ಹಾಗೂ ಊರ್ಜಾ ದಿವಸ್ ಒಂದೇ ನಾಣ್ಯದ ಎರಡು ಮುಖಗಳಂತಿವೆ. ಈ ಮೂಲಕ ರಾಷ್ಟ್ರೀಯ ಏಕತೆ, ಸಾಮಾಜಿಕ ಸೌಹಾರ್ದತೆ ಮತ್ತು ಸಹಿಷ್ಣುತೆಯ ಸಂದೇಶವನ್ನು ಜನತೆಗೆ ತಲುಪಿಸುವುದರ ಜೊತೆಗೆ, ವಿದ್ಯಾರ್ಥಿಗಳಲ್ಲಿ ನವೀಕರಿಸಬಹುದಾದ ಇಂಧನಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.ಪ್ರತಿವರ್ಷ ಆ.10ರಂದು ಡೀಸೆಲ್ ಇಂಜಿನ್ ಆವಿಷ್ಕರಿಸಿದ ಸರ್ ರೂಡಾಲ್ಫ್ ಡೀಸೆಲ್ ಅವರ ಸ್ಮರಣಾರ್ಥವಾಗಿ ವಿಶ್ವ ಜೈವಿಕ ಇಂಧನ ದಿನ ಆಚರಿಸಲಾಗುತ್ತದೆ. 2004ರಲ್ಲಿ ಮೊದಲ ಬಾರಿಗೆ ರಾಜೀವ್ ಗಾಂಧಿ ಅಕ್ಷಯ್ ಊರ್ಜಾ ದಿವಸ್ ಆಚರಿಸಿದ ನೆನಪು ವಿಶೇಷ. ಮುಂದಿನ 5 ವರ್ಷಗಳಲ್ಲಿ ಕರ್ನಾಟಕದಲ್ಲಿ ಜೈವಿಕ ಇಂಧನ ಕ್ಷೇತ್ರವು ₹1 ಲಕ್ಷ ಕೋಟಿ ಹೂಡಿಕೆ ಆಕರ್ಷಿಸಿ, 3 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿ, ರೈತರ ಆದಾಯವರ್ಧನೆಗೆ ದಾರಿಯಾಗಲಿದೆ. ನೂತನ ಜೈವಿಕ ಇಂಧನ ನೀತಿ ಶೀಘ್ರದಲ್ಲೇ ರಾಜ್ಯ ಸರ್ಕಾರದಿಂದ ಪ್ರಕಟಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಈ ವೇಳೆ ನವೀಕರಿಸಬಹುದಾದ ಇಂಧನಗಳ ಉತ್ತೇಜನ ಯೋಜನೆಗಳಿಗೆ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಎಚ್.ಕೆ.ಪಾಟೀಲ ಅವರು ನೀಡುತ್ತಿರುವ ಪ್ರೋತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿವಿ ಕುಲಪತಿ ಪ್ರೊ.ಡಾ.ಸುರೇಶ್ ವಿ.ನಾಡಗೌಡರ, ವಿಶ್ವವಿದ್ಯಾಲಯವು ಗ್ರಾಮೀಣಾಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ಶಾಶ್ವತ ಶಕ್ತಿ ಸಂಪನ್ಮೂಲಗಳ ಅರಿವು ಮೂಡಿಸುವ ಕಾರ್ಯದಲ್ಲಿ ಸದಾ ಬದ್ಧವಾಗಿದೆ. ಜೈವಿಕ ಇಂಧನ ಕ್ಷೇತ್ರದಂತಹ ನವೀನ ಪ್ರಯತ್ನಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಭವಿಷ್ಯದ ಭಾರತದ ಶಕ್ತಿಸ್ವಾವಲಂಬನೆಗೆ ಬುನಾದಿಯಾಗುತ್ತದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸಂಶೋಧನೆ, ನವೋದ್ಯಮ ಮತ್ತು ಸಮಾಜಮುಖಿ ಚಿಂತನೆಗಳಿಗೆ ಪ್ರೇರಣೆಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.ಗದಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಕೆಂಚಪ್ಪನವರ್ ಮಾತನಾಡಿ, ಅರಣ್ಯ ಸಂಪತ್ತು, ಪರಿಸರ ಸಂರಕ್ಷಣೆ ಹಾಗೂ ನವೀಕರಿಸಬಹುದಾದ ಇಂಧನದ ಅಭಿವೃದ್ಧಿ ಪರಸ್ಪರ ಪೂರಕವಾಗಿದ್ದು, ಗ್ರಾಮೀಣಾಭಿವೃದ್ಧಿಗೆ ಹೊಸ ದಾರಿಯನ್ನು ತೋರಿಸುತ್ತವೆ ಎಂದು ಹೇಳಿದರು.ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ಎಲ್. ಮಾತನಾಡಿದರು. ವಿಶ್ವವಿದ್ಯಾಲಯದ ವಿತ್ತಾಧಿಕಾರಿ ಪ್ರಶಾಂತ್ ಜೆ.ಸಿ, ಜೈವಿಕ ಇಂಧನ ಸಂಶೋಧನೆ, ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದ ಸಂಯೋಜಕ ಡಾ.ರವಿ ಜಡಿ, ಸಹಾಯಕ ನಿರ್ದೇಶಕ ಗಿರೀಶ್ ದೀಕ್ಷಿತ್, ಅಧ್ಯಾಪಕರು, ವಿದ್ಯಾರ್ಥಿಗಳು, ವಿವಿ ಸಿಬ್ಬಂದಿ ಇದ್ದರು.