ದೇಶಕ್ಕಾಗಿ ರಾಜೀವ್‌ ಗಾಂಧಿ ಪ್ರಾಣ ತ್ಯಾಗ: ಡಿ.ಕೆ ಶಿವಕುಮಾರ್‌

| Published : May 22 2024, 12:53 AM IST

ದೇಶಕ್ಕಾಗಿ ರಾಜೀವ್‌ ಗಾಂಧಿ ಪ್ರಾಣ ತ್ಯಾಗ: ಡಿ.ಕೆ ಶಿವಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಪ್ರಾಣ ತ್ಯಾಗ ಮಾಡಿದ ಮಹಾನ್ ನಾಯಕರು ರಾಜೀವ್ ಗಾಂಧಿ. ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಿ ನಾಯಕತ್ವ ಬೆಳೆಯಲು ಕಾರಣೀಭೂತರಾದವರು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಮರಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ಮೂಲಕ ಸಾವಿರಾರು ಯುವ ನಾಯಕರನ್ನು ಸಮಾಜಕ್ಕೆ ಕೊಡುಗೆ ಕೊಟ್ಟವರು ರಾಜೀವ್‌ ಗಾಂಧಿ. ಯುವ, ವಿದ್ಯಾರ್ಥಿ ನಾಯಕತ್ವವನ್ನು ಬೆಳೆಸಿದರು. ದೇಶದ ಐಕ್ಯತೆ, ಸಮಗ್ರತೆಗಾಗಿ ಪ್ರಾಣತ್ಯಾಗ ಮಾಡಿದರು ಎಂದು ಬಣ್ಣಿಸಿದರು.

ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಕೆ.ಎಚ್.ಪಾಟೀಲರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆಗ ಸುಮಾರು 70 ಕ್ಕೂ ಅಧಿಕ ಯುವಕರಿಗೆ ವಿಧಾನ ಸಭಾ ಟಿಕೆಟ್ ನೀಡಲಾಗಿತ್ತು. ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲರು ಅನಾರೋಗ್ಯಕ್ಕೆ ಒಳಗಾದಾಗ ಬಂಗಾರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಲಾಯಿತು. ಸಚಿವ ಸಂಪುಟದಲ್ಲಿ ಎಲ್ಲಾ ಸಮುದಾಯಗಳ ಯುವ ನಾಯಕರಿಗೆ ಸ್ಥಾನ ನೀಡಿ ಎರಡನೇ ಸಾಲಿನ ನಾಯಕತ್ವ ತಯಾರು ಮಾಡಬೇಕು ಎಂದು ಬಂಗಾರಪ್ಪ ಅವರಿಗೆ ರಾಜೀವ್ ಗಾಂಧಿ ಸೂಚನೆ ನೀಡಿದ್ದರು. ಇದರಿಂದಾಗಿ ಆಗ ನಾನು ಮೊದಲ ಬಾರಿಗೆ ಸಚಿವನಾದೆ ಎಂದು ನೆನಪಿಸಿಕೊಂಡರು.

ಉಪ ಮುಖ್ಯಮಂತ್ರಿಯಾದ ತಕ್ಷಣ ರಾಜೀವ್ ಗಾಂಧಿ ಅವರ ಹಳೆಯ ಪ್ರತಿಮೆ ಬದಲಿಗೆ ಹೊಸ ಪ್ರತಿಮೆ ಸ್ಥಾಪನೆ ಮಾಡುವ ಕಡತಕ್ಕೆ ಮೊದಲು ಸಹಿ ಮಾಡಿದೆ. ರಾಜೀವ್ ಗಾಂಧಿ ಅವರ ಹೆಸರಿನಲ್ಲಿ ಯುವ ಶಕ್ತಿ ಕೇಂದ್ರಗಳನ್ನು ಈ ಹಿಂದೆ ಸ್ಥಾಪಿಸಲಾಗಿತ್ತು. ಕಾರಣಾಂತರಗಳಿಂದ ಅವು ಸೊರಗಿವೆ. ಈಗ ಪುನಃ ಅವುಗಳನ್ನು ಪುನರುಜ್ಜೀವನಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ರಾಜೀವ್‌ ಸ್ಮಾರಕಕ್ಕೆ ಕನಕಪುರದ ಕಲ್ಲು

ತಮಿಳುನಾಡಿನ ಪೆರಂಬದೂರಿನಲ್ಲಿ ರಾಜೀವ್ ಗಾಂಧಿ ಅವರ ಸ್ಮಾರಕ ನಿರ್ಮಾಣಕ್ಕೆ ಕನಕಪುರದ ನಮ್ಮ ಕಲ್ಲನ್ನು ಬಳಸಲಾಗಿದೆ. ನನಗೆ ಕನಕಪುರ ಬಂಡೆ ಎನ್ನುತ್ತಾರೆ. ನಮ್ಮೂರ ಬಂಡೆಯ ಕಲ್ಲು ಅಲ್ಲಿ ಹಾಕಿದ್ದೇನೆ. ಈ ಸೇವೆ ಮಾಡಲು ಸೋನಿಯಾ ಗಾಂಧಿ ಅವರು ನನಗೆ ಅವಕಾಶ ನೀಡಿದರು. ಭಕ್ತ ಹಾಗೂ ಭಗವಂತನಿಗೆ ಇರುವ ಸಂಬಂಧವೇ ನನಗೂ ಗಾಂಧಿ ಕುಟುಂಬಕ್ಕೂ ಇರುವುದು ಎಂದು ವಿವರಿಸಿದರು.

ಸಚಿವ ಈಶ್ವರ ಖಂಡ್ರೆ ಮಾತನಾಡಿ, ರಾಜೀವ್‌ ಗಾಂಧಿ ಅವರು ಯುವಕರಿಗೆ ರಾಜಕೀಯದಲ್ಲಿ ಶಕ್ತಿ ನೀಡಿದರು. ಪಂಚಾಯತ್‌ ರಾಜ್‌ ಕಾಯ್ದೆಗೆ ತಿದ್ದುಪಡಿ ತಂದು ಸಾಮಾಜಿಕ ನ್ಯಾಯ ಒದಗಿಸಿದರು. ಗಾಂಧಿ ಪರಿವಾರವು ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದೆ. ಬಿಜೆಪಿ ಕೋಮುವಾದಿ ಎಂದು ಜನರಿಗೆ ತಿಳಿದಿದ್ದು ಕೇಂದ್ರದಲ್ಲೂ ಕಾಂಗ್ರೆಸ್‌ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಮುಖ್ಯ ಸಚೇತಕ ಸಲೀಂ ಅಹ್ಮದ್‌, ಕೆಪಿಸಿಸಿ ಕಾರ್ಯಾರ್ಧಯಕ್ಷ ಜಿ.ಸಿ.ಚಂದ್ರಶೇಖರ್‌, ಮಾಜಿ ಸಚಿವರಾದ ಎಚ್‌.ಎಂ.ರೇವಣ್ಣ, ರಾಣಿ ಸತೀಶ್‌ ಉಪಸ್ಥಿತರಿದ್ದರು.