ಸಾರಾಂಶ
ಮಂಗಳೂರಿನಲ್ಲಿ ಡಾ.ರಾಜ್‌ಕುಮಾರ್ ಜನ್ಮದಿನೋತ್ಸವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮಂಗಳೂರುಕನ್ನಡ ಚಿತ್ರ ನಟ ಡಾ. ರಾಜ್‍ಕುಮಾರ್ ಅವರು ತಾನು ನಟಿಸಿದ ಚಲನಚಿತ್ರಗಳಲ್ಲಿ ಅಥವಾ ವೈಯಕ್ತಿಕ ಬದುಕಿನಲ್ಲಿ ಸಮಾಜಕ್ಕೆ ಕೆಡುಕನ್ನುಂಟು ಮಾಡುವ ಯಾವುದೇ ಅಂಶಗಳನ್ನು ತೋರಿಸದೆ, ತನ್ನ ಬದುಕನ್ನೇ ಆದರ್ಶವನ್ನಾಗಿ ತೋರಿಸಿದ್ದಾರೆ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದ್ದಾರೆ.ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಡಾ.ಪಿ. ದಯಾನಂದ ಪೈ ಪಿ ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಕಾರದೊಂದಿಗೆ ಕನ್ನಡ ಚಿತ್ರನಟ ಡಾ. ರಾಜಕುಮಾರ್ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಪ್ರತಿಮ ನಟನಾಗಿ ಡಾ.ರಾಜ್ ಅವರು ಸಮಾಜಕ್ಕೆ ನೀಡಿದ ಸಂದೇಶ ಸ್ಮರಣೀಯ. ಅವರನ್ನು ಸಮಾಜದ ಮಾದರಿ ವ್ಯಕ್ತಿ ಎಂದರೆ ತಪ್ಪಾಗಲ್ಲ. ಅವರ ಜೀವನ ಚರಿತ್ರೆಯನ್ನು ಇಂದಿನ ಯುವ ಪೀಳಿಗೆ ಸ್ಮರಿಸುವುದು ಬಹಳ ಅತ್ಯಗತ್ಯ. ಅವರ ಆದರ್ಶ, ಜೀವನ ಮೌಲ್ಯಗಳನ್ನು ನಮ್ಮಲ್ಲಿ ಅಳವಡಿಸಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ, ಮಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ, ಡಾ. ರಾಜಕುಮಾರ್ ಕೇವಲ ನಟ, ಗಾಯಕನಾಗಿ ಮಾತ್ರ ಗುರುತಿಸಿಕೊಳ್ಳದೆ ಇಡೀ ನಾಡಿಗೆ ಮೌಲ್ಯಯುತ ಸಂದೇಶ ನೀಡಿದ ಮಹಾನ್ ಶಕ್ತಿ. ಅವರು ಕನ್ನಡ ನಾಡಿನ ಸಂಸ್ಕೃತಿಗೆ ಸಿನಿಮಾ ಮೂಲಕ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಮಾತನಾಡಿ, ಇಂದಿನ ಕನ್ನಡ ಚಿತ್ರರಂಗದ ನಟರ ತೆರೆಯ ಮೇಲಿನ ಪಾತ್ರಕ್ಕೂ ತೆರೆಯ ಹಿಂದಿನ ಪಾತ್ರಕ್ಕೂ ತುಂಬ ವ್ಯತ್ಯಾಸ ಇದೆ. ಆದರೆ ಕನ್ನಡದ ಮೇರು ನಟ ಎಂಬ ಖ್ಯಾತಿಯ ಡಾ ರಾಜಕುಮಾರ್ ತೆರೆಯ ಮುಂದೆ ಇದ್ದ ಹಾಗೆಯೇ ನಿಜ ಜೀವನದಲ್ಲಿಯೂ ಬದುಕಿದವರು ಎಂದು ಹೇಳಿದರು.ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿಪ್ರಿಯ ಇದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ ಸ್ವಾಗತಿಸಿದರು. ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಕೃಷ್ಣಪ್ರಭಾ ವಂದಿಸಿದರು. ಸ್ಶೆದುದ್ದೀನ್ ನಿರೂಪಿಸಿದರು.