ಸಾರಾಂಶ
ಶಿವಮೊಗ್ಗ: ‘ಫಸ್ಟ್ ರ್‍ಯಾಂಕ್’ ರಾಜು ಖ್ಯಾತಿಯ ನಟ ಗುರುನಂದನ್ ಅಭಿನಯದ ರಾಜು ಜೇಮ್ಸ್ ಬಾಂಡ್ ಚಿತ್ರ ಫೆ.14 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಚಿತ್ರದಲ್ಲಿ ಗುರುನಂದನ್ ಜೋಡಿಯಾಗಿ ಹುಬ್ಬಳ್ಳಿಯ ಚೆಲುವೆ ಮೃಧುಲಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಲಂಡನ್‌ನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಬರ್ತೂರು ಈ ಚಿತ್ರವನ್ನು ನಿರ್ಮಾಣ ಮಾಡಿ, ತೆರೆಗೆ ತರುತ್ತಿದ್ದಾರೆ.
ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ನಟ ಗುರುನಂದನ್, ರಾಜು ಜೇಮ್ಸ್ ಬಾಂಡ್’ ಚಿತ್ರವು ಫೆ.14 ರಂದು ಸತ್ಯ ಫಿಕ್ಷರ್ಸ್ ಮೂಲಕ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.ಹಳ್ಳಿಯ ಹುಡುಗ ರಾಜು, ಓದಿ ವಿದ್ಯಾವಂತನಾಗಿ ಬ್ಯಾಂಕ್ ಮ್ಯಾನೇಜರ್ ಆಗಬೇಕೆಂದು ಹೊರಡುತ್ತಾನೆ. ಹಾಗಂತ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡುವುದು ಆತ ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ, ಆತನ ಮುಂದೆ ಹಲವಾರು ಸಂದಿಗ್ಧ ಪರಿಸ್ಥಿತಿಗಳು ಎದುರಾಗುತ್ತವೆ. ಆತ ಅದನ್ನೆಲ್ಲ ಹೇಗೆ ನಿಭಾಯಿಸಿ ಹೇಗೆ ಹಳ್ಳಿ ಜನರ ಪಾಲಿಗೆ ಜೇಮ್ಸ್ ಬಾಂಡ್ ಆಗುತ್ತಾನೆನ್ನುವುದು ಚಿತ್ರದ ಒನ್ ಲೈನ್ ಸ್ಟೋರಿ ಎಂದು ಚಿತ್ರದ ನಿರ್ಮಾಪಕ ಕಿರಣ್ ಬರ್ತೂರು ವಿವರಿಸಿದರು.ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದೇವೆ. ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಲಂಡನ್‌ನ ಪ್ರಮುಖ ಸ್ಥಳಗಳಲ್ಲಿ ಹಾಡುಗಳ ಚಿತ್ರೀಕರಣ ನಡೆದಿದೆ. ವಿಶೇಷವಾಗಿ ಶಿವಮೊಗ್ಗದ ಹಳೆ ಜೈಲಿನಲ್ಲೂ ಕೆಲವು ಸನ್ನಿವೇಶಗಳನ್ನು ಚಿತ್ರೀಕರಿಸಿಕೊಂಡಿದ್ದೇವೆ. ಇಂತಿಷ್ಟೇ ಹಣ ಎನ್ನುವುದಕ್ಕಿಂತ ಕಥೆಯ ಬೇಡಿಕೆಗೆ ತಕ್ಕಂತೆ ಹಣ ಹೂಡಿಕೆ ಮಾಡಿದ್ದೇವೆ. ಕಥೆಯೊಳಗಿನ ಪಾತ್ರಗಳಿಗೆ ಇಂತಹದ್ದೇ ಕಲಾವಿದರು ಆಯ್ಕೆಯಾದರೆ ಸೂಕ್ತ ಎನ್ನುವ ನಮ್ಮಾಸೆಯ ಹಾಗೆಯೇ ಬಂಡವಾಳದ ಬಗ್ಗೆ ಯೋಚನೆ ಮಾಡದೆ, ಹೆಸರಾಂತ ಕಲಾವಿದರನ್ನೇ ಆಯ್ಕೆ ಮಾಡಿಕೊಂಡು ಚಿತ್ರ ನಿರ್ಮಾಣ ಮಾಡಿದ್ದೇವೆ ಎಂದು ತಿಳಿಸಿದರು.ನಾಯಕಿ ಮೃದುಲಾ ಪಟ್ಟಣಶೆಟ್ಟಿ ಮಾತನಾಡಿ, ನಾನು ಮೂಲತಃ ಹುಬ್ಬಳ್ಳಿಯ ಹುಡುಗಿ. ಇದೇ ಮೊದಲ ಬಾರಿಗೆ ರಾಜು ಜೇಮ್ಸ್ ಬಾಂಡ್ ಚಿತ್ರದ ಮೂಲಕ ನಾಯಕಿಯಾಗಿ ಕಾಣಿಸಿಕೊಂಡಿದ್ದೇನೆ. ಕಥೆಯಲ್ಲಿ ನನ್ನದು ಟೀಚರ್ ಪಾತ್ರ. ನಾಯಕನಿಗೆ ಬದುಕಿನ ಪಾಠ ಹೇಳಿಕೊಟ್ಟಿದ್ದೇನೆ ಎಂದು ಹೇಳಿದರು.
ನಿರ್ಮಾಪಕರ ಮಂಜುನಾಥ್ ವಿಶ್ವಕರ್ಮ ಮಾತನಾಡಿ, ರಾಜ್ಯಾದ್ಯಂತ ಸರಿ ಸುಮಾರು 20ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಜತೆಗೆ ಕೆನಡಾ, ಯುಎಸ್ ಎ, ಸಿಂಗಪುರ್ ಸೇರಿದಂತೆ ವಿವಿಧ ದೇಶಗಳಲ್ಲೂ ಚಿತ್ರ ಬಿಡುಗಡೆ ಆಗಲಿದೆ ಎಂದು ಹೇಳಿದರು.ಚಿತ್ರದಲ್ಲಿ ರವಿಶಂಕರ್, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಜೈಜಗದೀಶ್, ತಬಲಾನಾಣಿ, ಮಂಜುನಾಥ್ ಹೆಗಡೆ, ವಿಜಯ್ ಚೆಂಡೂರ್ ಮುಂತಾದವರು ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಉಳಿದಂತೆ ಇದು ಗುರುನಂದನ್ ಅಭಿನಯದ 6ನೇ ಚಿತ್ರ ಎಂದರು.ಪತ್ರಿಕಾಗೋಷ್ಠಿಯಲ್ಲಿ ಎಂ.ಎಲ್.ಕೆ. ನಾಯ್ಡು, ದರ್ಶನ್ ಇದ್ದರು.