ಶ್ರಮದಾನದಿಂದ ಸ್ವಚ್ಛ, ಸುಂದರವಾದ ಊರು, ರಾಜೂರು!

| Published : Sep 24 2025, 01:00 AM IST

ಸಾರಾಂಶ

ರಾಜೂರು ಗ್ರಾಮದಲ್ಲಿ ಒಂದು ಸುತ್ತು ಹಾಕಿದರೆ, ಊರ ಪ್ರೀತಿ, ಒಗ್ಗಟ್ಟಿನ ಶ್ರಮದಾನ, ಸ್ವಚ್ಛತೆಯ ಜಾಗೃತಿಯ ದೊಡ್ಡ ನಿದರ್ಶನವೇ ದಿಗ್ದರ್ಶನವಾಗುತ್ತದೆ.

ಬಂದೇನವಾಜ್‌ ಮ್ಯಾಗೇರಿ

ಗಜೇಂದ್ರಗಡ: ಗ್ರಾಮದ ಬೀದಿ, ಚರಂಡಿಗಳನ್ನು ಸ್ವಚ್ಛಗೊಳಿಸಲು ಸ್ಥಳೀಯ ಸಂಸ್ಥೆಗಳ ಸ್ವಚ್ಛತಾ ಸಿಬ್ಬಂದಿಯೇ ಬೇಕಂತೇನಿಲ್ಲ. ಊರಿನ ಅಭಿಮಾನ ಮತ್ತು ಒಂದೊಳ್ಳೆ ಮನಸಿನಿಂದಲೂ ಇಂಥ ಕಾರ್ಯ ಮಾಡಿ ಊರನ್ನು ಸ್ವಚ್ಛ ಹಾಗೂ ಸುಂದರವಾಗಿ ಇಟ್ಟುಕೊಳ್ಳಬಹುದು ಎನ್ನುವುದನ್ನು ತಾಲೂಕಿನ ರಾಜೂರು ಗ್ರಾಮದ "ಸಮಾನ ಮನಸ್ಕರ ವೇದಿಕೆ "ಯ ಗೆಳೆಯರು ಸಾಧಿಸಿ ತೋರಿಸಿದ್ದಾರೆ.

ಹೌದು! ರಾಷ್ಟ್ರೀಯ ಹೆದ್ದಾರಿ 367ರಲ್ಲಿ ಬರುವ ತಾಲೂಕಿನ ರಾಜೂರು ಗ್ರಾಮದಲ್ಲಿ ಒಂದು ಸುತ್ತು ಹಾಕಿದರೆ, ಊರ ಪ್ರೀತಿ, ಒಗ್ಗಟ್ಟಿನ ಶ್ರಮದಾನ, ಸ್ವಚ್ಛತೆಯ ಜಾಗೃತಿಯ ದೊಡ್ಡ ನಿದರ್ಶನವೇ ದಿಗ್ದರ್ಶನವಾಗುತ್ತದೆ. ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದರಿಂದ ಇಡೀ ಊರಿಗೆ ಊರೆ ಕಂಗೊಳಿಸುತ್ತಿದೆ. ಹ್ಯಂಗಿದ್ದ ಊರು ಹ್ಯಂಗಾತು ಎನ್ನುವ ಉದ್ಘಾರ ತನ್ನಿಂದ ತಾನೇ ಹೊರಡುತ್ತದೆ.

ದುರ್ನಾತದ ತವರು: ಗ್ರಾಮದ ನಡುವೆಯೇ ಹೆದ್ದಾರಿ ಹಾದು ಹೋಗಿದೆ. ರಸ್ತೆಯ ಇಕ್ಕೆಲದಲ್ಲಿ ಹಸಿ ಕಸ, ಮುಳ್ಳಿನ ಕಂಠಿ ಬೆಳೆದು ಭೀತಿ ಹುಟ್ಟಿಸುವಂತಿತ್ತು. ಎಲ್ಲೆಡೆಯೂ ತ್ಯಾಜ್ಯದ ರಾಶಿಯೇ ಬಿದ್ದಿತ್ತು. ಇದು ಹುಳು-ಹುಪ್ಪಡಿ, ಹಂದಿ, ಹೆಗ್ಗಣಗಳ ಆವಾಸ ಸ್ಥಾನವಾಗಿತ್ತು. ಜತೆಗೆ ಪ್ಲಾಸ್ಟಿಕ್‌ ಸೇರಿದಂತೆ ಒಣಗಿದ ತೆಂಗಿನ ಗರಿ, ಕಸ-ಕಡ್ಡಿ ಹರಡಿಕೊಂಡು ಗಬ್ಬೆದ್ದು ನಾರುತ್ತಿತ್ತು. ಗ್ರಾಮಸ್ಥರೆಲ್ಲ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದರೇ ವಿನಃ ಒಂದು ಕಸದ ತುಂಡನ್ನೂ ಪಕ್ಕಕ್ಕೆ ಸರಿಸುತ್ತಿರಲಿಲ್ಲ. ಹಾಗಾಗಿ ರಾಜೂರು ದುರ್ನಾತದ ತವರು ಎನ್ನುವಂತಾಗಿತ್ತು.

ಊರ ಹೊಣೆಗಾರಿಕೆ: ನಿತ್ಯವೂ ಇದನ್ನು ನೋಡಿ ನೋಡಿ ಬೇಸತ್ತ ಗ್ರಾಮದ ಸಮಾನ ಮನಸ್ಕ ಗೆಳೆಯರು ಒಂದೆಡೆ ಸೇರಿ ಚರ್ಚಿಸಿದರು. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಗ್ರಾಮದ ಮರ್ಯಾದೆ ಮೂರುಪಾಲಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಶ್ರಮದಾನವೇ ಇದಕ್ಕೆ ಪರಿಹಾರವೆಂದು ತೀರ್ಮಾನಿಸಿ, ಸ್ವಚ್ಛತಾ ಕಾರ್ಯಕ್ಕೆ ಅಣಿಯಾದರು.

"ನಮ್ಮ ಗ್ರಾಮ ನಮ್ಮ ಹೊಣೆಗಾರಿಕೆ " ಧ್ಯೇಯದೊಂದಿಗೆ ಇಗ್ಗಟ್ಟಿನಿಂದ ಶ್ರಮದಾನ ಶುರು ಮಾಡಿ ಗ್ರಾಮದ ಮುಖ್ಯ ರಸ್ತೆಯಾದ ಹೆದ್ದಾರಿಯಲ್ಲಿನ ಎನ್‌.ಎಚ್‌. ಗೌಡರ ಹೊಲದಿಂದ ಸೇವಾಲಾಲ್ ವೃತ್ತದವರೆಗೆ ಸ್ವಚ್ಚ ಮಾಡಲಾಯಿತು. ರಸ್ತೆಯ ಇಕ್ಕೆಲದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌, ಒಣಗಿದ ತೆಂಗಿನ ಗರಿ, ಕಸ-ಕಡ್ಡಿ, ಹಸಿ ಗಿಡಗಳನ್ನು ಒಂದೆಡೆ ಕೂಡಿ ಹಾಕಲಾಯಿತು. ಮರಳು, ಕಲ್ಲುಗಳನ್ನು ತೆರವು ಮಾಡಿ, ಸ್ವಚ್ಛಗೊಳಿಸಿದರು. ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗಿದೆ.

ಈ ಮೊದಲು ಇಲ್ಲಿನ ಸರ್ಕಾರಿ ಶಾಲಾ ಮಕ್ಕಳು ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ಸಂಚರಿಸುವ ವಾಹನಗಳ ಮಧ್ಯೆಯೇ ನಡೆದು ಹೋಗುತ್ತಿದ್ದರು. ಹೆದ್ದಾರಿ ಪಕ್ಕ ಗ್ರಾಮಸ್ಥರು ಕಟ್ಟಿಗೆ, ಕುಳ್ಳು, ಕಲ್ಲು, ಮಣ್ಣು ಹಾಕಿದ್ದರು. ಇದನ್ನು ತಪ್ಪಿಸಲೆಂದು ಸಾರ್ವಜನಿಕರ ಸಹಭಾಗಿತ್ವದಲ್ಲಿ ವೇದಿಕೆಯು ಎಲ್ಲವನ್ನೂ ತೆರವುಗೊಳಿಸಿ, ಮಕ್ಕಳಿಗೆ ಪಾದಚಾರಿ ಮಾರ್ಗದಲ್ಲಿ ತೆರಳುವಂತೆ ಸುಗಮಗೊಳಿಸಲಾಯಿತು.

ಮಾದರಿ ಗ್ರಾಮವಾಗಲಿ: ಗ್ರಾಮಸ್ಥರೆಲ್ಲ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಎಲ್ಲರೂ ತಮ್ಮ ಮನೆ ಮುಂದಿನ ಕಸ ತೆರವು ಮಾಡಿ ಸ್ವಚ್ಛಗೊಳಿಸಿದರೆ ಇಡೀ ಗ್ರಾಮವೇ ಸ್ವಚ್ಛಂದವಾಗಿ ನಳನಳಿಸುತ್ತದೆ. ಸಮಸ್ತ ನಾಗರಿಕರು ಈ ಕಾರ್ಯಕ್ಕೆ ಕೈಜೋಡಿಸಿದರೆ ಇಡೀ ತಾಲೂಕಿಗೆ ಗ್ರಾಮ ಮಾದರಿಯಾಗಲಿದೆ ಎನ್ನುವುದು ವೇದಿಕೆಯ ನಿಲುವು.

ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲದಲ್ಲಿ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ 350 ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಮುಂದಿನ ಆರು ತಿಂಗಳಲ್ಲಿ ಈ ಗಿಡಗಳ ಸಂಖ್ಯೆ ಹೆಚ್ಚಲಿದೆ. ಪರಿಸರ ಸ್ವಚ್ಛ, ಸುಂದರರವಾಗಿದ್ದರೆ ನಮ್ಮ ಜೀವನವೂ ನೆಮ್ಮದಿಯಿಂದ ಇರುತ್ತದೆ ಎನ್ನುವುದು ವೇದಿಕೆಯ ನಂಬಿಕೆ.

ರಾಜೂರು ಸಮಾನ ಮನಸ್ಕರ ವೇದಿಕೆಯಲ್ಲಿ 50ಕ್ಕೂ ಅಧಿಕ ಸದಸ್ಯರಿದ್ದಾರೆ. ಇದರಲ್ಲಿ ತಾಲೂಕು ಪಂಚಾಯತ್ ಸಹಾಯಕ ಅಧಿಕಾರಿ, ಪಿಡಿಒ ಸೇರಿದಂತೆ ಯುವಕರು, ನಿವೃತ್ತ ಅಧಿಕಾರಿಗಳು ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ 15 ದಿನಕ್ಕೊಮ್ಮೆ 2-3 ಗಂಟೆ ಶ್ರಮದಾನ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಶಿಕ್ಷಣ, ನೀರಿನ ಸ್ವಚ್ಛತೆ ಹೀಗೆ ವಿವಿಧ ಕ್ಷೇತ್ರದಲ್ಲಿ ಸೇವೆಗೆ ಸಿದ್ಧವಾಗಿದ್ದೇವೆ ಎನ್ನುತ್ತಾರೆ ರಾಜೂರು ಸಮಾನ ಮನಸ್ಕರ ವೇದಿಕೆ ಎಫ್‌.ಡಿ. ಕಟ್ಟಿಮನಿ.