ರಾಜ್ಯಸಭೆಗೆ 4 ಖಾತ್ರಿ, 1 ಸಸ್ಪೆನ್ಸ್‌!

| Published : Feb 27 2024, 01:30 AM IST / Updated: Feb 27 2024, 02:59 PM IST

Rajayasabha election

ಸಾರಾಂಶ

ರಾಜ್ಯಸಭೆಗೆ ಇಂದು ಚುನಾವಣೆ ನಡೆಯಲಿದ್ದು ಸಂಜೆ ಫಲಿತಾಂಶ ಹೊರಬೀಳಲಿದೆ. ಬಿಜೆಪಿಯಿಂದ 1 ಮತ್ತು ಕಾಂಗ್ರೆಸ್‌ನಿಂದ 3 ಅಭ್ಯರ್ಥಿಗಳು ಆಯ್ಕೆಯಾಗುವ ನಿರೀಕ್ಷೆಯಿದ್ದು, ಕುಪೇಂದ್ರ ರೆಡ್ಡಿ ವಿಚಾರದಲ್ಲಿ ಮ್ಯಾಜಿಕ್‌ ನಿರೀಕ್ಷೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಡ್ಡ ಮತದಾನದ ಭೀತಿಯಲ್ಲೇ ಮಂಗಳವಾರ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ತೀವ್ರ ಕುತೂಹಲ ಮೂಡಿಸಿದೆ.

ಈ ಅಡ್ಡಮತದಾನದಿಂದ ತಮ್ಮ ಶಾಸಕರನ್ನು ಕಾಪಾಡಿಕೊಳ್ಳುವ ಮುಂಜಾಗ್ರತೆ ಕ್ರಮವಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಪಂಚತಾರಾ ಹೋಟೆಲ್‌ವೊಂದಕ್ಕೆ ಸ್ಥಳಾಂತರಿಸಿದೆ.

 ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮಾತ್ರ ತಮ್ಮ ಶಾಸಕರೊಂದಿಗೆ ಸಂಪರ್ಕ ಇಟ್ಟುಕೊಂಡರೂ ಹೋಟೆಲ್‌ಗಳಿಗೆ ಸ್ಥಳಾಂತರಿಸುವುದಕ್ಕೆ ಮುಂದಾಗಿಲ್ಲ.

ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಸಿರ್‌ ಹುಸೇನ್, ಜಿ.ಸಿ.ಚಂದ್ರಶೇಖರ್, ಅಜಯ್ ಮಾಕನ್, ಬಿಜೆಪಿಯಿಂದ ನಾರಾಯಣಸಾ ಕೆ.ಭಾಂಡಗೆ ಮತ್ತು ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ. 

ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಐವರು ಅಭ್ಯರ್ಥಿಗಳು ಕಣದಲ್ಲಿದರುವುದರಿಂದ ಚುನಾವಣಾ ಕಣ ರಂಗೇರಿದೆ.

ಐದನೇ ಅಭ್ಯರ್ಥಿಯಾಗಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದ ಕುಪೇಂದ್ರರೆಡ್ಡಿ ಗೆಲುವಿಗೆ ಉಭಯ ಪಕ್ಷಗಳು ತೆರೆಮರೆಯಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ.

ಚುನಾವಣೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ನಾಲ್ಕು ಸ್ಥಾನಗಳಿಗೆ ಬಿಗಿ ಭದ್ರತೆಯಲ್ಲಿ ಮತದಾನ ನಡೆಯಲಿದೆ. ವಿಧಾನಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಮತದಾನಕ್ಕೆ ಸಿದ್ಧತೆ ಮಾಡಲಾಗಿದೆ. 

ಏಜೆಂಟ್‌ಗಳಿಗೆ ಪ್ರತ್ಯೇಕವಾಗಿ ಆಸನ ವ್ಯವಸ್ಥೆ ಮಾಡಲಾಗಿದೆ. ಶಾಸಕರು ತಮ್ಮ ಪಕ್ಷದ ಏಜೆಂಟರಿಗೆ ತೋರಿಸಿ ಮತದಾನ ಮಾಡಬೇಕಾಗುತ್ತದೆ. ಬೆಳಗ್ಗೆ 9 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಸಂಜೆ 4 ಗಂಟೆವರೆಗೆ ನಡೆಯಲಿದೆ. 

ಸಂಜೆ 5ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ. ಮತದಾನ ಕೇಂದ್ರದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಪ್ರತಿ ಕಾರ್ಯವನ್ನು ವಿಡಿಯೋ ರೆಕಾರ್ಡಿಂಗ್‌ ಮಾಡಲಾಗುತ್ತದೆ.

ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲಾಬಲ 135 ಇತ್ತು. ಆದರೆ, ಇದೀಗ ರಾಜಾ ವೆಂಕಟಪ್ಪ ನಾಯಕ ಮೃತಪಟ್ಟ ಹಿನ್ನಲೆಯಲ್ಲಿ ಸದ್ಯ ಕಾಂಗ್ರೆಸ್ ಬಲ 134 ಆಗಿದೆ. ಇನ್ನು ಬಿಜೆಪಿ 66, ಜೆಡಿಎಸ್ 19 ಸ್ಥಾನಗಳನ್ನು ಹೊಂದಿದೆ. 

ಪಕ್ಷೇತರರರು ನಾಲ್ವರು ಇದ್ದಾರೆ. ಐದನೇ ಅಭ್ಯರ್ಥಿ ಕಣದಲ್ಲಿರುವ ಕಾರಣ ಆಡಳಿತ ಮತ್ತು ಪ್ರತಿಪಕ್ಷದಲ್ಲಿ ಅಡ್ಡಮತದಾನದ ಭೀತಿ ಶುರುವಾಗಿದೆ. ಈ ನಡುವೆ, ಶಾಸಕರ ಕುದುರೆ ವ್ಯಾಪಾರವು ತೆರೆಮರೆಯಲ್ಲಿ ಅಂತಿಮ ಹಂತದ ಕಸರತ್ತು ನಡೆಯುತ್ತಿದೆ. 

ಪ್ರಸ್ತುತ ಚುನಾವಣೆಯ ಬಲಾಬಲದಲ್ಲಿ ಕಾಂಗ್ರೆಸ್ ಮೂರು ಮತ್ತು ಬಿಜೆಪಿ ಒಂದು ಸ್ಥಾನವನ್ನು ಸುಲಭವಾಗಿ ಜಯಗಳಿಸಬಹುದಿತ್ತು. ಆದರೆ, ಐದನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರಿಂದ ನಾಮಪತ್ರ ಸಲ್ಲಿಕೆಯಾಗಿರುವ ಚುನಾವಣಾ ಕಣ ಕುತೂಹಲ ಕೆರಳಿಸಿದೆ.

ನ್ಯಾಯಸಮ್ಮತ ಮತದಾನಕ್ಕೆ ಕ್ರಮ: ಚುನಾವಣಾ ಸಿದ್ದತೆ ಕುರಿತು ಮಾಹಿತಿ ನೀಡಿದ ವಿಧಾನಸಭೆ ಕಾರ್ಯದರ್ಶಿ ಮತ್ತು ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ, ಪಾರದರ್ಶಕತೆ ಮತ್ತು ನ್ಯಾಯಸಮ್ಮತ ಮತದಾನ ನಡೆಯಲು ಎಲ್ಲಾ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. 

ಐದು ಪಕ್ಷಗಳಿದ್ದು, ಅವುಗಳಿಗೆ ಕೇಂದ್ರಗಳನ್ನು ಮಾಡಲಾಗಿದೆ. ಬೆಳಗ್ಗೆ 9ರಿಂದ ಸಂಜೆ 4ವರೆಗೆ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಯ ಬಳಿಕ ಮತ ಎಣಿಗೆ ನಡೆಯಲಿದೆ. 

ಇಬ್ಬರು ಪಕ್ಷೇತರರು ಯಾವುದೇ ಏಜೆಂಟ್‌ಗಳಿಗೆ ತೋರಿಸಿ ಮತ ಚಲಾಯಿಸಬೇಕು. ಉಳಿದವರ ಅವರ ಪಕ್ಷದ ಏಜೆಂಟ್‌ಗಳಿಗೆ ತೋರಿಸಿ ಮತವನ್ನು ಹಾಕಬೇಕು. ಏಜೆಂಟ್‌ಗಳಿಗೆ ತೋರಿಸದಿದ್ದರೆ ಅಸಿಂಧುಗೊಳ್ಳಲಿದೆ. 

ಒಟ್ಟು 223 ಮತದಾರರು ಇದ್ದಾರೆ ಎಂದು ಹೇಳಿದರು.ಗೆಲ್ಲಲು 45 ಮತಗಳು ಬೇಕು ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 134, ಬಿಜೆಪಿ 66, ಜೆಡಿಎಸ್ 19 ಹಾಗೂ ನಾಲ್ವರು ಪಕ್ಷೇತರ ಶಾಸಕರಿದ್ದಾರೆ. ರಾಜ್ಯಸಭೆಗೆ ಆಯ್ಕೆಯಾಗಬೇಕಾದರೆ ಓರ್ವ ಅಭ್ಯರ್ಥಿ ತಲಾ 45 ಮತಗಳನ್ನು ಪಡೆಯಬೇಕು.

ಬಿಜೆಪಿ ತನ್ನ ಅಧಿಕೃತ ಅಭ್ಯರ್ಥಿ ನಾರಾಯಣಸಾ ಬಾಂಡೆಗೆಗೆ ಮೊದಲ ಪ್ರಾಶಸ್ತ್ಯದಲ್ಲಿ 45 ಮತ್ತು ಹೆಚ್ಚುವರಿಯಾಗಿ ಒಂದು ಸೇರಿ ಒಟ್ಟು 46 ಮತಗಳನ್ನು ಹಾಕಿಸಲಿದೆ. ಹೆಚ್ಚುವರಿಯಾಗಿ ಉಳಿಯುವ 20 ಮತಗಳನ್ನು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ವರ್ಗಾಯಿಸಲಿದೆ. 

ಜೆಡಿಎಸ್ 19 ಸದಸ್ಯರನ್ನು ಹೊಂದಿದ್ದು, ಬಿಜೆಪಿಯ ಹೆಚ್ಚುವರಿ 20 ಮತಗಳು ಸೇರಿದರೆ 39 ಮತಗಳು ಕುಪೇಂದ್ರ ರೆಡ್ಡಿಗೆ ಬರಲಿದೆ. ಇನ್ನುಳಿದ ಆರು ಮತಗಳಿಗಾಗಿ ತೆರೆಮರೆಯಲ್ಲಿ ಕಸರತ್ತು ನಡೆದಿದೆ.

ಕಾಂಗ್ರೆಸ್ 134 ಮತಗಳಿದ್ದು, ಪಕ್ಷೇತರರ ಮತಗಳು ಬರಲಿವೆ ಎಂಬ ವಿಶ್ವಾಸದಲ್ಲಿದೆ. ಹೀಗಾಗಿ ತನ್ನ ಮೂವರು ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಬಹುದು ಎಂಬ ಆತ್ಮವಿಶ್ವಾಸದಲ್ಲಿದೆ.

ಪಕ್ಷ ಮತ್ತು ಅಭ್ಯರ್ಥಿಗಳುಕಾಂಗ್ರೆಸ್‌ -ನಾಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್, ಅಜಯ್ ಮಾಕನ್ಬಿಜೆಪಿ - ನಾರಾಯಣಸಾ ಕೆ.ಭಾಂಡಗೆಎನ್‌ಡಿಎ - ಕುಪೇಂದ್ರ ರೆಡ್ಡಿ