ಸಾರಾಂಶ
ಕೊಪ್ಪಳ: ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕೆಆರ್‌ಪಿಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ್ ರೆಡ್ಡಿ ಅವರು ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು ಎನ್ನುತ್ತಲೇ ಈಗ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದತ್ತ ಒಲವು ತೋರುತ್ತಿರುವುದು ಅಚ್ಚರಿ ಮೂಡಿಸಿದೆ.
ಬಿಜೆಪಿ ಸೇರ್ಪಡೆಯಾಗಲು ನಡೆಸಿದ ಯತ್ನ ಮತ್ತು ಮೈತ್ರಿ ಮಾಡಿಕೊಳ್ಳಲು ಮಾಡಿದ ಕಸರತ್ತಿಗೆ ಬಿಜೆಪಿ ಹೈಕಮಾಂಡ್ ಸೊಪ್ಪು ಹಾಕದೇ ಇರುವುದರಿಂದ ಮುನಿಸಿಕೊಂಡು ಕಾಂಗ್ರೆಸ್ ಪಾಳೆಯದತ್ತ ಮುಖ ಮಾಡಿದಂತೆ ಕಾಣುತ್ತಿದೆ.
ಈ ಹಿನ್ನೆಲೆಯಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿದ್ದಾರೆ. ಇದಕ್ಕೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸಾಥ್ ನೀಡಿದ್ದಾರೆ ಎನ್ನಲಾಗಿದೆ.
ಗುಸು ಗುಸು ಚರ್ಚೆ: ಶಾಸಕ ಜನಾರ್ದನ ರೆಡ್ಡಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ವಿಧಾನಸೌಧ ಅಧಿವೇಶನದಲ್ಲಿಯೇ ಮಾತುಕತೆಯಾಡಿದ್ದು ಭಾರಿ ಸದ್ದು ಮಾಡಿತ್ತು.
ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗ ಅದಕ್ಕೆ ಮೂರ್ತಸ್ವರೂಪ ಬಂದಂತೆ ಕಾಣುತ್ತಿದೆ. ನಂತರವೂ ರೆಡ್ಡಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಅದಕ್ಕಾಗಿ ಬಿಜೆಪಿಗೆ ನನ್ನ ಬೆಂಬಲ ಎಂದಿದ್ದರು.
ಬಳಿಕ ರಾಜ್ಯ ಬಿಜೆಪಿ ವಿರುದ್ಧವೂ ಕೆಂಡಕಾರಿದ್ದರು. ನಾನು ಎಂದೆಂದಿಗೂ ಬಿಜೆಪಿ, ಕಾಂಗ್ರೆಸ್ ಸೇರ್ಪಡೆ ಆಗುವುದಿಲ್ಲವೆಂದೂ ಖಡಾಖಂಡಿತವಾಗಿ ಹೇಳಿದ್ದರು.
ಈ ಎಲ್ಲ ಹೇಳಿಕೆಯ ನಡುವೆಯೂ ಈಗ ಸಿಎಂ, ಡಿಸಿಎಂ ಭೇಟಿಯಾಗಿರುವುದು ಹಾಗೂ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲು ಮುಂದಾಗಿರುವುದರಿಂದ ರೆಡ್ಡಿ ಬಿಜೆಪಿಯಿಂದ ಮುನಿಸಿಕೊಂಡು ಕಾಂಗ್ರೆಸ್ ನತ್ತ ಮುಖ ಮಾಡಿದರೆ ಎನ್ನುವುದು ಸದ್ಯದ ಕುತೂಹಲ.