ಜಿ.ಬಿ.ಹಂಸನಂದಾಚಾರ್ಯ ತಮ್ಮ ಕಲೆಯ ನೈಪುಣ್ಯತೆ 1968 ರಿಂದ ಆರಂಭಿಸಿದ್ದಾರೆ. ಮೊದಲ ಬಾರಿಗೆ ಇಟ್ಟಿಗಿ ಗ್ರಾಮದ ಕಲ್ಯಾಣ ಬಸವೇಶ್ವರ ಕಾಷ್ಟ ಶಿಲ್ಪಿ ತಯಾರಿಸುವ ಮೂಲಕ ತಮ್ಮ ಶಿಲ್ಪಕಲೆಗಳ ಆಸಕ್ತಿ ತೋರಿಸಿದ್ದಾರೆ
ಚಂದ್ರು ಕೊಂಚಿಗೇರಿ ಹೂವಿನಹಡಗಲಿ
ಇಲ್ಲಿನ ಶಿಲಾ ಶಿಲ್ಪ, ಕಾಷ್ಟ ಶಿಲ್ಪ, ಲೋಹ ಶಿಲ್ಪ, ಲೋಹದ ಕವಚ, ಎರಕ ವಿಗ್ರಹಗಳು, ರಥ ಶಿಲ್ಪಿ, ದೇವಾಲಯಗಳ ವಿಮಾನ ಗೋಪುರ, ಮಹಾದ್ವಾರ ಮಣ್ಣಿನ ವಿಗ್ರಹಗಳು, ಪ್ಲಾಸ್ಟರ್ ಆಫ್ ಪ್ಯಾರೀಸ್ ವಿಗ್ರಹಗಳು, ಸಂಗೀತ ವಾದ್ಯಗಳ ತಯಾರಿಕೆ ಸೇರಿದಂತೆ ಹತ್ತಾರು ಬಗೆಯ ಶಿಲ್ಪಗಳ ತಯಾರಿಕೆಯಲ್ಲಿ ನೈಪುಣ್ಯತೆ ಹೊಂದಿರುವ ಕಲಾವಿದ ಜಿ.ಬಿ. ಹಂಸನಂದಾಚಾರ್ಯ ಇವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಇದು ಮಲ್ಲಿಗೆ ನಾಡಿಗೆ ಹೆಮ್ಮೆಯ ಕ್ಷಣವಾಗಿದೆ.ಹೌದು, ಹೂವಿನಹಡಗಲಿ ತಾಲೂಕಿನ ಮೂಲತಃ ಇಟ್ಟಿಗಿ ಗ್ರಾಮದವರಾದ, ಜಿ.ಬಿ.ಹಂಸನಂದಾಚಾರ್ಯ 1932 ರಲ್ಲಿ ಜನಿಸಿದ್ದು, 7ನೇ ತರಗತಿ ವರೆಗೆ ಮಾತ್ರ ಅಭ್ಯಾಸ ಮಾಡಿದ್ದಾರೆ. ಉಳಿದಂತೆ ಇವರ ಶಿಲ್ಪಕಲೆಗಳ ಆಸಕ್ತಿ ವಂಶಪಾರಂಪರ್ಯದಿಂದ ಒಲಿದು ಬಂದಿದೆ.
ಜಿ.ಬಿ.ಹಂಸನಂದಾಚಾರ್ಯ ತಮ್ಮ ಕಲೆಯ ನೈಪುಣ್ಯತೆ 1968 ರಿಂದ ಆರಂಭಿಸಿದ್ದಾರೆ. ಮೊದಲ ಬಾರಿಗೆ ಇಟ್ಟಿಗಿ ಗ್ರಾಮದ ಕಲ್ಯಾಣ ಬಸವೇಶ್ವರ ಕಾಷ್ಟ ಶಿಲ್ಪಿ ತಯಾರಿಸುವ ಮೂಲಕ ತಮ್ಮ ಶಿಲ್ಪಕಲೆಗಳ ಆಸಕ್ತಿ ತೋರಿಸಿದ್ದಾರೆ. ಎಲ್ಲ ಬಗೆಯ ದೇವತೆಗಳ ಮೂರ್ತಿಗಳು, ಗಣೇಶ, ಶಿವ, ಆಂಜನೇಯ, ಗೌರಿ ಶಂಕರ, ಶಿವ ಪಾರ್ವತಿ, ಗಣಪತಿ, ದೇವಿ ಮೂರ್ತಿಗಳು, ಲಿಂಗು ಬಸವಣ್ಣ, ಕನ್ನಿಕಾ ಪರಮೇಶ್ವರಿ, ಆದಿಶಕ್ತಿ, ರಾಮ, ಲಕ್ಷ್ಮಣ, ಸೀತೆ, ಕಾಳಿಕಾ ಮೂರ್ತಿ ಹೀಗೆ ನೂರಾರು ಬಗೆಯ ಕಾಷ್ಟ ಶಿಲ್ಪಗಳು, ಪಂಚಲೋಹ ಶಿಲ್ಪಗಳು, ಶಿಲೆಯ ಶಿಲ್ಪಗಳು, ಸಿಮೆಂಟ್ ಶಿಲ್ಪಗಳು, ಅಮೃತ ಶಿಲೆ ಶಿಲ್ಪಗಳು, ಚಿನ್ನದ ಶಿಲ್ಪಗಳನ್ನು ಕೆತ್ತನೆ ಮತ್ತು ತಯಾರಿಕೆ ಮಾಡುವ ಮೂಲಕ ಶಿಲ್ಪಕಲೆ ಶ್ರೀಮಂತಗೊಳಿಸಿದ್ದಾರೆ.ಇವರು ಶಿಲ್ಪಕಲೆಗಳು, ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆ ಹಾಗೂ ಅಂತರ್ ರಾಜ್ಯಗಳಿಗೂ ರವಾನೆಯಾಗಿವೆ, ಇವರ ಕಾಷ್ಟ ಶಿಲ್ಪಗಳ ತಯಾರಿಕೆಯಂತೂ ಬಹಳಷ್ಟು ಸುಂದರವಾಗಿವೆ. ತಾಲೂಕಿನ ಬಹುತೇಕ ತೇರು ತಯಾರಿಸುವ ಇವರು ಬಹುಮುಖ ಪ್ರತಿಭೆಯಾಗಿ ಹೊರ ಹೊಮ್ಮಿದ್ದಾರೆ.
ಇವರ ಕಲೆಗೆ ಮೆಚ್ಚಿ 2012 ರಲ್ಲಿ ಕರ್ನಾಟಕ ಸರ್ಕಾರ ನೀಡುವ ಜಕಣಾಚಾರಿ ಪ್ರಶಸ್ತಿ, ವಿಶ್ವ ವೀರಶೈವ ಪ್ರತಿಷ್ಠಾನ ಕರ್ನಾಟಕ ರತ್ನಶ್ರೀ ಪ್ರಶಸ್ತಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿ, ಪಂಚಕಲಾ ವೈಭವದಿಂದ ಶಿಲ್ಪ ಕೌಸ್ತುಭ ಪ್ರಶಸ್ತಿ ಹೀಗೆ ನಾನಾ ಸಂಘ ಸಂಸ್ಥೆಗಳು ಹಾಗೂ ಸಂಘಟನೆಗಳಿಂದ ಹತ್ತಾರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.ಶಿಲಾ ಶಿಲ್ಪ, ಕಾಷ್ಟ ಶಿಲ್ಪ ಸೇರಿದಂತೆ ಹತ್ತಾರು ಬಗೆಯ ಶಿಲ್ಪಕಲೆಗಳ ತಯಾರಿಕೆಯಲ್ಲಿ ತೊಡಗಿರುವ ನನ್ನನ್ನು ಸರ್ಕಾರ ಗುರುತಿಸಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಮಾಡಿರುವುದು ಮಲ್ಲಿಗೆ ನಾಡಿನ ಕೀರ್ತಿ ಹೆಚ್ಚಿಸಿದೆ ಎಂದು ಹೂವಿನಹಡಗಲಿ ಶಿಲಾಶಿಲ್ಪಿ ಜಿ.ಬಿ. ಹಂಸನಂದಾಚಾರ್ಯ ತಿಳಿಸಿದ್ದಾರೆ.