ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಹಗಲು ವೇಷ ಗಾರುಡಿಗ, ಕಲಾವಿದ ಮೀರಾಲಿ ಶಿವಲಿಂಗಪ್ಪ ರಾಮಣ್ಣ ಸಿದ್ದಾಪುರ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಎ.ಜಿ. ಕಾರಟಗಿ
ಕಾರಟಗಿ: ತಾಲೂಕಿನ ಸಿದ್ದಾಪುರ ಗ್ರಾಮದ ಹಗಲು ವೇಷ ಗಾರುಡಿಗ, ಕಲಾವಿದ ಮೀರಾಲಿ ಶಿವಲಿಂಗಪ್ಪ ರಾಮಣ್ಣ ಸಿದ್ದಾಪುರ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.ಕಲೆ ಉಳಿಸಿ ಬೆಳೆಸುವ ಜತೆಗೆ ತಮ್ಮ ಸಮುದಾಯದ ಹಕ್ಕು ಮೂಲ ಸೌಕರ್ಯಗಳಿಗಾಗಿ ಶಿವಲಿಂಗಪ್ಪ ಹೋರಾಟ ನಡೆಸುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆದಿದ್ದು, ಬುಡ್ಗ ಸಮುದಾಯದಲ್ಲಿ ಇವರೊಬ್ಬ ಹಗಲು ವೇಷ ಗಾರುಡಿಗ ಎಂದು ಖ್ಯಾತಿ ಪಡೆದಿದ್ದಾರೆ.
ಕೊಪ್ಪಳ ಜಿಲ್ಲೆಯ ಅಲೆಮಾರಿ ಬುಡ್ಗ, ಜಂಗಮ ಪರಿಶಿಷ್ಟ ಜಾತಿ ಸಮುದಾಯದ ಜಿಲ್ಲಾಧ್ಯಕ್ಷರಾಗಿ ಶಿವಲಿಂಗಪ್ಪ ರಾಮಣ್ಣ ಸಮುದಾಯದ ಅಸ್ತಿತ್ವಕ್ಕಾಗಿ, ಹಲವು ಸೌಲಭ್ಯಕ್ಕಾಗಿ, ಹಕ್ಕಿಗಾಗಿ ಸಮಾಜದ ಏಳ್ಗಿಗಾಗಿ ಹೋರಾಟ ನಡೆಸಿ ಜನಪರ ಕಾಳಜಿಗಾಗಿ ಹೋರಾಟ ನಡೆಸುತ್ತಿದ್ದಾರೆ.ಬಾಲ್ಯದ ೮ನೇ ವರ್ಷದಿಂದ ಕಲಾ ಸೇವೆ ಮಾಡಲು ಪದಾರ್ಪಣೆ ಮಾಡಿದ ಕಲಾವಿದ ಶಿವಲಿಂಗಪ್ಪ, ತಾಯಿ ಈರಮ್ಮ ಹಾಗೂ ಸಹೋದರ ಮಾವನಿಂದ ಕಲಿತು ಈಗ ಇಡೀ ಕುಟುಂಬವೇ ತಮ್ಮ ಸಮುದಾಯದ ಕಲೆಯನ್ನು ನಂಬಿ ಕಲೆಯನ್ನೇ ಉಸಿರಾಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ತೆಲುಗಿನಿಂದ ಕನ್ನಡ ಭಾಷೆಯಲ್ಲಿ ತನ್ನ ಎಲ್ಲ ನಾಟಕ, ಸಂಗೀತ, ಕಲೆಯನ್ನು ಕನ್ನಡೀಕರಿಸಿಕೊಂಡು ಜನಸಾಮಾನ್ಯರಿಗೆ ತಿಳಿಯುವ ಸಾರ್ವಜನಿಕವಾಗಿ ಪ್ರದರ್ಶನ ಮಾಡುತ್ತ ಬಂದಿದ್ದಾರೆ.
ಇವರು ಹಳ್ಳಿ ಹಳ್ಳಿಗಳಷ್ಟೇ ಅಲ್ಲದೇ, ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರು ದಸರಾ ಉತ್ಸವ, ಗಡಿನಾಡ ಉತ್ಸವ, ಹಂಪಿ ಉತ್ಸವ ಸೇರಿದಂತೆ ದೇಶಾದ್ಯಂತ ಸಂಚರಿಸಿ ಹಗಲು ವೇಷದ ಕಲೆ ಕುರಿತು ಬೆಳಕು ಚೆಲ್ಲಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಹಗಲು ವೇಷ ಕಲೆಯನ್ನು ಕಲಿತ ಶಿವಲಿಂಗಪ್ಪ, ಅವರ ಮಾವನವರ ಮಾರ್ಗದರ್ಶನದಲ್ಲಿ ಅನೇಕ ನಾಟಕ, ಜಾನಪದ ಸಂಗೀತ, ಸುಗಮ ಸಂಗೀತ, ತತ್ವಪದ, ಮೌಖಿಕ ಜಾನಪದ ಗೀತೆ, ದಾಸರಪದ, ಭಕ್ತಿ, ಭಾವಗೀತೆ ಮತ್ತು ವಚನ ಗಾಯನದ ಮೂಲಕ ಅನೇಕ ಪ್ರದರ್ಶನಗಳನ್ನು ನೀಡಿದ್ದಾರೆ. ತಮ್ಮದೇ ಸ್ವಂತ ತಂಡ ಕಟ್ಟಿಕೊಂಡು ಪುರಾಣ, ಕಾವ್ಯಗಳಾದ ರಾಮಾಯಣ, ಮಹಾಭಾರತ ಹಾಗೂ ಸಾಮಾಜಿಕ ಕಥನಗಳ ಹಗಲು ವೇಷ ರೂಪಕಗಳನ್ನು ಪ್ರದರ್ಶಿಸಿದ್ದಾರೆ.ಇವರು ಹಗಲು ವೇಷ ತೊಟ್ಟು ಪ್ರದರ್ಶಿಸುವ ಜನಪ್ರಿಯ ನಾಟಕಗಳೆಂದರೆ ಶೂರ್ಪಣನಿಯ ಗರ್ವಭಂಗ, ಭೀಮಾಂಜನೇಯ ಯುದ್ಧ, ಮೋಹಿನಿ - ಭಸ್ಮಾಸುರ, ಸುಂಧ - ಉಪಸಂಧನ ವಧೆ, ಸಿಂದೂರ ಲಕ್ಷ್ಮಣ, ಬ್ರಾಹ್ಮಣ ವೇಷ ವಡ್ಡರ ವೇಷ, ಜಂಗಮರ ವೇಷದಿಂದ ಸಾಮಾಜಿಕವಾಗಿ ನಾಟಕಗಳನ್ನು ಪ್ರದರ್ಶಸಿ ಜನರನ್ನು ರಂಜಿಸುತ್ತಿದ್ದಾರೆ. ಅವರ ಈ ಸೇವೆ ಪರಿಗಣಿಸಿ ರಾಜ್ಯ ಸರ್ಕಾರ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಬಾರಿ ಬತ್ತದ ಕಣಜ ಸಿದ್ದಾಪುರ ಗ್ರಾಮದ ಈ ಕಲಾವಿದರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಈ ಭಾಗದ ಜನರಲ್ಲಿ ಹರ್ಷ ಮೂಡಿಸಿದೆ.
ಶಿವಲಿಂಗಪ್ಪ ಅವರ ಕಲಾ ಸೇವೆ ಪರಿಗಣಿಸಿ ಕರ್ನಾಟಕ ಜಾನಪದ ಪರಿಷತ್ ೨೦೨೩ರಲ್ಲಿ ಜಾನಪದ ಲೋಕ ಪ್ರಶಸ್ತಿ, ೨೦೨೧ರ ಸಾಲಿನಲ್ಲಿ ಕರ್ನಾಟಕ ಜನಪದ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಇತರ ಸಂಘ-ಸಂಸ್ಥೆಗಳು ಅನೇಕ ಪ್ರಶಸ್ತಿ ನೀಡಿ ಗೌರವಿಸಿ ಪ್ರೋತ್ಸಾಹಿಸಿವೆ.ಅವಿಸ್ಮರಣೀಯ ದಿನ: ನಾನು 8ನೇ ವಯಸ್ಸಿನಿಂದಲೇ ಕಲಾಸೇವೆ ಮಾಡುತ್ತಿದ್ದೇನೆ. ಅನೇಕ ವರ್ಷಗಳ ನನ್ನ ಕಲಾ ಸೇವೆ ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಖುಷಿ ತಂದಿದೆ. ನನ್ನ ಈ ಸಾಧನೆಗೆ ಪತ್ನಿ ಶಿವಮ್ಮ ಸೇರಿ ಕುಟುಂಬ ಮತ್ತು ನಮ್ಮ ಸಮಯದಾಯದ ಜನ ಮತ್ತು ಸಿದ್ದಾಪುರ ಗ್ರಾಮದ ಜನರು ಪ್ರೋತ್ಸಾಹ ನೀಡಿದ್ದಾರೆ. ಇದು ನನ್ನ ಜೀವನದ ಅವಿಸ್ಮರಣೀಯವಾದ ದಿನ ಎಂದು ಸಿದ್ದಾಪುರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಲಿಂಗಪ್ಪ ಹೇಳಿದರು.