ಧಾರವಾಡ ಜಿಲ್ಲೆಯ ನಾಲ್ವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

| Published : Nov 01 2023, 01:00 AM IST / Updated: Nov 01 2023, 01:01 AM IST

ಧಾರವಾಡ ಜಿಲ್ಲೆಯ ನಾಲ್ವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ಸಂಗೀತ ಸಾಧಕಿ ನೀಲಾ ಎಂ. ಕೊಡ್ಲಿ, ಕೃಷಿ ಮತ್ತು ಪರಿಸರ ಕ್ಷೇತ್ರದಲ್ಲಿ ಪ್ರಗತಿಪರ ರೈತ, ಕೃಷಿ ಸಾಧಕ ದ್ಯಾವನಗೌಡ ಟಿ. ಪಾಟೀಲ, ಕ್ರೀಡಾ ಕ್ಷೇತ್ರದಲ್ಲಿ ಕ್ರೀಡಾಪಟು ಅಶೋಕ ಗದಿಗೆಪ್ಪ ಏಣಗಿ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಹಿರಿಯ ಕಲಾವಿದೆ ಎಚ್.ಬಿ. ಸರೋಜಮ್ಮ ಆಯ್ಕೆ ಆಗಿದ್ದಾರೆ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

68ನೇ ಕನ್ನಡ ರಾಜ್ಯೋತ್ಸವ ಆಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಧಾರವಾಡ ಜಿಲ್ಲೆಯಿಂದ ನಾಲ್ವರು ಸಾಧಕರು ಆಯ್ಕೆ ಆಗಿದ್ದಾರೆ.

ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ಸಂಗೀತ ಸಾಧಕಿ ನೀಲಾ ಎಂ. ಕೊಡ್ಲಿ, ಕೃಷಿ ಮತ್ತು ಪರಿಸರ ಕ್ಷೇತ್ರದಲ್ಲಿ ಪ್ರಗತಿಪರ ರೈತ, ಕೃಷಿ ಸಾಧಕ ದ್ಯಾವನಗೌಡ ಟಿ. ಪಾಟೀಲ, ಕ್ರೀಡಾ ಕ್ಷೇತ್ರದಲ್ಲಿ ಕ್ರೀಡಾಪಟು ಅಶೋಕ ಗದಿಗೆಪ್ಪ ಏಣಗಿ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಹಿರಿಯ ಕಲಾವಿದೆ ಎಚ್.ಬಿ. ಸರೋಜಮ್ಮ ಆಯ್ಕೆ ಆಗಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯದ ವಿವಿಧ ಜಿಲ್ಲೆಗಳ 68 ಜನ ಗಣ್ಯರಿಗೆ ಹಾಗೂ 10 ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಈ ಪೈಕಿ ಜಿಲ್ಲೆಯ ನಾಲ್ವರೂ ಇದ್ದಾರೆ. ಪ್ರಶಸ್ತಿ ಪುರಸ್ಕೃತರಿಗೆ ನ.1ರಂದು ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ನೀಲಾ ಕೊಡ್ಲಿ

ಭಾರತದ ಸುಪ್ರಸಿದ್ಧ ಸಂಗೀತ ಮನೆತನದಲ್ಲಿ 1945, ಡಿಸೆಂಬರ್‌ 30ರಂದು ಧಾರವಾಡದಲ್ಲಿ ಜನಿಸಿದ ನೀಲಾ ಎಂ. ಕೊಡ್ಲಿ ತಂದೆ ಪಂ. ಮಲ್ಲಿಕಾರ್ಜುನ ಮನಸೂರ ಅವರ ಗರಡಿಯಲ್ಲಿ ಸಂಗೀತ ಕಲಿತರು. ಕವಿವಿ ಸಂಗೀತ ವಿಭಾಗದಲ್ಲೂ ಸಂಗೀತ ಕಲಿತ ಅವರು, ನಂತರ ನಾಲ್ಕು ದಶಕಗಳ ಕಾಲ ಧಾರವಾಡದ ಆಕಾಶವಾಣಿಯಲ್ಲಿ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕಾರ್ಯಕ್ರಮಗಳನ್ನು ಕೊಡುತ್ತಿದ್ದಾರೆ. ಜೊತೆಗೆ ತಂದೆ ಮಲ್ಲಿಕಾರ್ಜುನ ಮನಸೂರ ಅವರ ರಾಷ್ಟ್ರೀಯ ಸಂಗೀತೋತ್ಸವದಲ್ಲೂ ಗಾಯನ ಪ್ರಸ್ತುತಪಡಿಸಿದ್ದಾರೆ. ಎ ಗ್ರೇಡ್‌ ಕಲಾವಿದರಾಗಿರುವ ಅವರು, ಮಂಗಳೂರು, ಕಲಬುರ್ಗಿ, ಮೈಸೂರು ಬೆಂಗಳೂರು ಆಕಾಶವಾಣಿ ಕೇಂದ್ರಗಳಿಂದಲೂ ಕಾರ್ಯಕ್ರಮ ನೀಡಿದ್ದಾರೆ. ಇವರು ಜೈಪುರ ಘರಾಣೆಯ ಅಪ್ರತಿಮ ಕಲಾವಿದರು. ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ ಪ್ರಶಸ್ತಿ, ಸ್ತ್ರಿಕುಲ ಕಣ್ಮಣಿ ಪ್ರಶಸ್ತಿ, ಮಹಾದೇವಿ ಅಕ್ಕ ಪ್ರಶಸ್ತಿಗಳು ಸಂದಿವೆ.

ಡಿ.ಟಿ. ಪಾಟೀಲ

ಮೂಲತಃ ಕೃಷಿ ಕುಟುಂಬದವರಾದ ದ್ಯಾವನಗೌಡ ತಮ್ಮನಗೌಡ ಪಾಟೀಲ (ಡಿ.ಟಿ. ಪಾಟೀಲ) ಹುಬ್ಬಳ್ಳಿ ಶಹರದವರು. 60 ವರ್ಷಗಳಿಂದ ಪ್ರಗತಿಪರ ಕೃಷಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತೋಟಗಾರಿಕೆ ಬೆಳೆಗಳಾದ ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಬೆಳೆಯುವಲ್ಲಿ ಪ್ರಗತಿ ಸಾಧಿಸಿದ್ದು, ಮಾವಿನ ಬೆಳೆಯಲ್ಲಿ ಅಂತರ ಬೆಳೆಯಾಗಿ ಪಪ್ಪಾಯ, ಅಡಿಕೆ ಬೆಳೆಯಲ್ಲಿ ಅಂತರ ಬೆಳೆಯಾಗಿ ಬಾಳೆ ಮತ್ತು ಗೋಡಂಬಿ, ಸೀತಾಫಲ ಹಣ್ಣು ಬೆಳೆದಿದ್ದಾರೆ. ಕಲ್ಲಂಗಡಿ, ಬೆಂಡೆ, ಎಲೆಕೋಸು, ಕರಿಬೇವು ಸೇರಿ ಇನ್ನಿತರೆ ತರಕಾರಿಯನ್ನು ಸಾವಯವ ರೀತಿಯಲ್ಲಿ ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ. ಜೊತೆಗೆ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಧಾರವಾಡ ಕೃಷಿ ವಿವಿಯಿಂದ ಶ್ರೇಷ್ಠ ಕೃಷಿ ಪ್ರಶಸ್ತಿ, ರಾಜ್ಯ ಕೃಷಿ ಪಂಡಿತ ಪ್ರಶಸ್ತಿ, ಕೃಷಿ ಕಾಮಧೇನು ಪ್ರಶಸ್ತಿ, ತೋಟಗಾರಿಕೆ ವಿವಿಯ ತೋಟಗಾರಿಕೆ ರೈತ ಪ್ರಶಸ್ತಿ ಸಂದಿವೆ.

ಅಶೋಕ ಏಣಗಿ

ಅಶೋಕ ಗದಿಗೆಪ್ಪ ಏಣಗಿ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದವರು. 1982ರಲ್ಲಿ ಜನಿಸಿದ ಅಶೋಕ ಬಿ.ಎ. ಪದವೀಧರರು. ಕನ್ನಡ, ಹಿಂದಿ ಮತ್ತು ಆಂಗ್ಲಭಾಷೆ ಬಲ್ಲ 41ರ ಯುವಕ. ಹೆಸರಾಂತ ಕುಸ್ತಿಪಟು. ಧಾರವಾಡ ಜಿಲ್ಲೆ, ಅನ್ಯ ಜಿಲ್ಲೆಗಳು, ವಿವಿಧ ರಾಜ್ಯದಲ್ಲಿ ನಡೆದಿರುವ ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಅವರದು. 2004-05ರಲ್ಲಿ ಹರಿಯಾಣದಲ್ಲಿ ನಡೆದ ಆಲ್ ಇಂಡಿಯಾ ಇಂಟರ್ ಯುನಿರ್ವಸಿಟಿ ಸ್ಪರ್ಧೆಯಲ್ಲಿ (66 ಕೆಜಿ) ತೃತೀಯ ಸ್ಥಾನ ಪಡೆದಿದ್ದಾರೆ. ಮೈಸೂರು ದಸರಾ ಉತ್ಸವದಲ್ಲಿ ಆಲ್ ಇಂಡಿಯಾ ಇನ್ವಿಟೇಷನ್ ಸ್ಪರ್ಧೆಯಲ್ಲಿ ದ್ವಿತೀಯ, ಮಧ್ಯಪ್ರದೇಶ ಭೂಪಾಲ್, 1996ರಲ್ಲಿ ಉದಯಪೂರ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಜಿಲ್ಲೆಗೆ ಕೀರ್ತಿ ತಂದಿದ್ದು, ಅವರ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಸರೋಜಮ್ಮ

ಎಚ್.ಬಿ. ಸರೋಜಮ್ಮ ರಂಗಭೂಮಿ ಕಲಾವಿದೆ. 1995ರಲ್ಲಿ ಜನಿಸಿದ ಸರೋಜಮ್ಮ ಓದಿದ್ದು 5ನೇ ತರಗತಿ. ಕೇವಲ 10ನೇ ವಯಸ್ಸಿನಲ್ಲಿ ''''''''ಸತ್ಯ ಹರಿಶ್ಚಂದ್ರ'''''''' ನಾಟಕದಲ್ಲಿ ''''''''ಸಖಿ'''''''' ಪಾತ್ರದ ಮೂಲಕ ರಂಗಭೂಮಿ ಪ್ರವೇಶಿಸಿದ ಹೆಗ್ಗಳಿಕೆ ಅವರದ್ದು. ಮೈಸೂರಿನ ಮಹಾದೇವ ಸ್ವಾಮಿ ಕಂಪನಿ, ಬಳ್ಳಾರಿ ಲಲಿತಮ್ಮ ಕಂಪನಿ, ನರೇಗಲ್ಲ ಚನ್ನಬಸಪ್ಪರ ಕಂಪನಿ, ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯ ಸಂಘ, ಚಿಂದೋಡಿ ಲೀಲಾ ಕಂಪನಿ, ಹೊಳೆಹುಚ್ಚೇಶ್ವರ ನಾಟ್ಯಸಂಘ ಹೀಗೆ ನಾಟಕ ಕಂಪನಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಯಲಿವಾಳ ಸಿದ್ದಯಸ್ವಾಮಿ, ದುರ್ಗಾದಾಸ, ಗುಡಗೇರಿ ಬಸವರಾಜ, ಎಚ್.ಎನ್. ಹೂಗಾರ, ಎ.ಟಿ.ಮಹಾಂತೇಶ ಶಾಸ್ತ್ರ ಅನೇಕರ ನಿರ್ದೇಶನದಲ್ಲಿ ಅಭಿನಯಿಸಿ, ಸೈ ಎನಿಸಿಕೊಂಡ ಎಚ್.ಬಿ.ಸರೋಜಮ್ಮಗೆ 2023ರ ರಾಜ್ಯೋತ್ಸವದ ಪ್ರಶಸ್ತಿ ಒಲಿದಿದೆ.

ತಂದೆಯವರಿಗೆ ಚಿರರುಣಿ

ತಂದೆಯವರಾದ ಮಲ್ಲಿಕಾರ್ಜುನ ಮನಸೂರ ಅವರ ಆಶೀರ್ವಾದದಿಂದ ಈ ಪ್ರಶಸ್ತಿ ಬಂದಿದ್ದು ಅವರಿಗೆ ಎಂದಿಗೂ ಚಿರರುಣಿ. ಧಾರವಾಡದಲ್ಲಿ ಸಂಗೀತದ ಕಣಜವೇ ಇದ್ದು ಈ ಪೈಕಿ ನನ್ನನ್ನು ರಾಜ್ಯೋತ್ಸವಕ್ಕೆ ಆಯ್ಕೆ ಮಾಡಿದ್ದು ಸರ್ಕಾರಕ್ಕೆ ಧನ್ಯವಾದಗಳು ಎನ್ನುತ್ತಾರೆ ನೀಲಾ ಕೊಡ್ಲಿ.

ಭೂಮಿ ತಾಯಿ ಕೈ ಬಿಡೋದಿಲ್ಲ

ಕೃಷಿ ನಂಬಿದ ರೈತನಿಗೆ ಭೂಮಿ ತಾಯಿ ಎಂದಿಗೂ ಕೈ ಬಿಡೋದಿಲ್ಲ. ಕೃಷಿ ಕ್ಷೇತ್ರದ ಸಾಧನೆಗೆ ತಮಗೆ ಪ್ರಶಸ್ತಿ ನೀಡುತ್ತಿರುವುದು ಖುಷಿ ತಂದಿದೆ. ಈ ಪ್ರಶಸ್ತಿ ಮೂಲಕ ಮತ್ತಷ್ಟು ರೈತರಿಗೆ ತಾವು ಮಾದರಿಯಾಗುತ್ತಿದ್ದೇವೆ ಎಂದ ಸಂತಸ ವ್ಯಕ್ತಪಡಿಸುತ್ತಾರೆ ಡಿ.ಟಿ. ಪಾಟೀಲ.

ಸಾಧನೆಗೆ ಸಂದ ಗೌರವ

ಪ್ರಶಸ್ತಿಗೆ ಅರ್ಜಿ ಹಾಕಿದ್ದೆ. ಬರುವ ನಿರೀಕ್ಷೆ ಇರಲಿಲ್ಲ. ನನಗೆ ಪ್ರಶಸ್ತಿ ಬಂದಿದ್ದು ಶಾಕ್ ಜೊತೆ ಖುಷಿ ತಂದಿದೆ. ಸಾಧನೆಗೆ ಸಂದ ಗೌರವ ಇದು. ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತಾರೆ ಕುಸ್ತಿ ಪಟುಅಶೋಕ ಏಣಗಿ.

ಖುಷಿ ತಂದ ಪ್ರಶಸ್ತಿ

ರಾಜ್ಯೋತ್ಸವ ಪ್ರಶಸ್ತಿ ಖುಷಿ ತಂದಿದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಬಣ್ಣ ಹಚ್ಚಿ, ಕಡಿಮೆ ಸಂಬಳದಲ್ಲಿ ದುಡಿದ್ದೇನೆ. ೭೩ ವಯಸ್ಸಿನ ನನಗೆ ಅನ್ನ ಹಾಕವ್ಯಾರಿಲ್ಲ. ಸರ್ಕಾರ ಕಲಾಸೇವೆ ಗುರುತಿಸಿ, ಅನ್ನ-ಗೌರವ ನೀಡಿದೆ. ರಂಗಭೂಮಿ ಸೇವೆ ಸಾರ್ಥಕವಾಗಿದೆ ಎನ್ನುತ್ತಾರೆ ಕಲಾವಿದೆ ಎಚ್.ಬಿ.ಸರೋಜಮ್ಮ.