ರಾಜ್ಯೋತ್ಸವ ಬರೀ ಡಂಗೂರ, ಕೃತಿಯಲ್ಲಿ ಯಾವುದು ಆಗಲ್ಲ

| Published : Nov 01 2024, 12:35 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ರಾಜ್ಯೋತ್ಸವ ಬರೀ ಡಂಗೂರ ಇರತ್ತೆ. ಆದರೆ ಕೃತಿಯಲ್ಲಿ ಯಾವುದೂ ಆಗಲ್ಲ. ಸಿಎಂ ಸಿದ್ದರಾಮಯ್ಯ ಕನ್ನಡದ ಭಾಷೆ ಹಾಗೂ ಶಿಕ್ಷಣದ ಬಗ್ಗೆ ಗಟ್ಟಿ ನಿಲುವು ತೆಗೆದುಕೊಳ್ಳಬೇಕು. ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಯಲ್ಲಿ ಕನ್ನಡ ಕಡ್ಡಾಯ ಮಾಡಬೇಕು ಎಂದು ಮಾಜಿ ಸಚಿವ ಎಚ್.ವಿಶ್ವನಾಥ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯೋತ್ಸವ ಬರೀ ಡಂಗೂರ ಇರತ್ತೆ. ಆದರೆ ಕೃತಿಯಲ್ಲಿ ಯಾವುದೂ ಆಗಲ್ಲ. ಸಿಎಂ ಸಿದ್ದರಾಮಯ್ಯ ಕನ್ನಡದ ಭಾಷೆ ಹಾಗೂ ಶಿಕ್ಷಣದ ಬಗ್ಗೆ ಗಟ್ಟಿ ನಿಲುವು ತೆಗೆದುಕೊಳ್ಳಬೇಕು. ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಯಲ್ಲಿ ಕನ್ನಡ ಕಡ್ಡಾಯ ಮಾಡಬೇಕು ಎಂದು ಮಾಜಿ ಸಚಿವ ಎಚ್.ವಿಶ್ವನಾಥ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಪರ ಚಳವಳಿಗಾರರು, ಹೋರಾಟಗಾರ, ಸಲಹೆ ಪಡೆದುಕೊಳ್ಳಿ. ವಿಧಾನಸೌಧದ ಮುಂದೆ ₹೨೭ ಕೋಟಿ ಖರ್ಚು ಮಾಡಿ ಕನ್ನಡಾಂಬೆಯ ಕಂಚಿನ ಪ್ರತಿಮೆ ಹಾಕುತ್ತಾರೆ. ಗಡಿನಾಡು ಭಾಗದಲ್ಲಿ ಕನ್ನಡ ಶಿಕ್ಷಕರೇ ಇಲ್ಲ. ₹೧೦ ಸಾವಿರ ಕೊಟ್ಟು ಅತಿಥಿ ಶಿಕ್ಷಕರನ್ನು ತಗೆದುಕೊಳ್ಳುತ್ತಿದ್ದಾರೆ. ಗಡಿನಾಡು ಭಾಗದಲ್ಲಿ ಕನ್ನಡ ಸತ್ತು ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ರಾಜ್ಯೋತ್ಸವವನ್ನು ಸರ್ಕಾರ ೫೦ ವರ್ಷದ ಸುವರ್ಣ ಮಹೋತ್ಸವ ಎಂದು ಕಾರ್ಯಕ್ರಮ ಮಾಡಲು ಹೊರಟಿರುವುದು ಸಂತೋಷ. ಕನ್ನಡ ವಿಚಾರವಾಗಿ ಬರೀ ಭಾಷಣ ಮಾಡಿಕೊಂಡು ಹೊರಟಿದ್ದಾಗಿದೆ. ಕನ್ನಡದ ಬಗೆಗಿನ ಸಾರ್ಥಕತೆ, ಅದರ ಬಗ್ಗೆ ಧೈರ್ಯವಾಗಿ ಹೇಳುವುದು ಆಗಲಿಲ್ಲ. ರಾಜ್ಯ ಸರ್ಕಾರ ಕನ್ನಡದ ಆಡಳಿತ ಭಾಷೆ ಮಾಡುತ್ತೇವೆ ಎಂದು ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಮಾಡಿ ರಾಷ್ಟ್ರಾಧ್ಯಕ್ಷರಿಗೆ ಕಳಿಸಿದರು. ಆದರೆ, ಅವರು ಸ್ಪಷ್ಟೀಕರಣ ಕೇಳಿದರು. ಈ ವಿಚಾರವಾಗಿ ಏನಾಯಿತು ಎಂದು ತಿಳಿಸಲಿಲ್ಲ ಎಂದರು.

ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಯಲ್ಲಿ ಕನ್ನಡ ಕಡ್ಡಾಯ ಮಾಡಬೇಕು. ಆದಿಲ್ ಶಾಹಿ ಆಡಳಿತ ಮಾಡಿದ ಇಲ್ಲಿ ಮುಸ್ಲಿಮರು ಸಹಿತ ಕನ್ನಡ ಚೆನ್ನಾಗಿ ಮಾತನಾಡುತ್ತಿದ್ದರು. ಕನ್ನಡದ ವಿಚಾರವಾಗಿ ಸುಮ್ಮನೆ ಮಾತನಾಡುತ್ತಾರೆ. ರಾಜ್ಯೋತ್ಸವ ಬರೀ ಡಂಗೂರ ಇರತ್ತೆ, ಆದರೆ, ಕೃತಿಯಲ್ಲಿ ಯಾವುದೂ ಆಗಲ್ಲ ಎಂದು ಬೇಸರ ಹೊರಹಾಕಿದರು.

ಕನ್ನಡ ಚಿತ್ರಗಳು ಸಹಿತ ಈಗ ಇಂಗ್ಲಿಷ್ ಹೆಸರಲ್ಲಿ ರಾರಾಜಿಸುತ್ತಿವೆ. ಕನ್ನಡದ ಉಳಿವಿಗಾಗಿ ಮೊದಲು ಸರ್ಕಾರ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಉಪ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಉಪ ಚುನಾವಣೆ ಎಂದರೆ ಮಾಧ್ಯಮದವರು, ರಾಜಕಾರಣಿಗಳು ಅದಕ್ಕೆ ಬೇರೆ ಬೇರೆ ಬಣ್ಣ ಕೊಡುತ್ತಾರೆ. ಉಪ ಚುನಾವಣೆಯಲ್ಲಿ ೧೩೫ ಆಗಲ್ಲ, ೧೩೭ ಆಗಲ್ಲ ಎಂದರು.------------------

ಬಾಕ್ಸ್‌

ಗ್ಯಾರಂಟಿಗಳನ್ನು ನಿಮಗೆ ಯಾರು ಕೇಳಿದ್ದರು..?

ನಿಮ್ಮನ್ನು ಗ್ಯಾರಂಟಿ ಕೇಳಿದ್ದು ಯಾರು? ಡಿ.ದೇವರಾಜು ಅರಸು ಅಕ್ಕಿ ಕೊಡಲಿಲ್ಲ, ಅಕ್ಕಿ ಬೆಳೆಯುವ ಭೂಮಿ ಕೊಟ್ಟರು. ಸಿದ್ದರಾಮಯ್ಯನವರ ಈ ಗ್ಯಾರಂಟಿ ಯೋಜನೆ ನಿರ್ಣಯ ಒಳ್ಳೆಯದಲ್ಲ ಎಂದು ವಿಪ ಸದಸ್ಯ ಎಚ್‌.ವಿಶ್ವನಾಥ ಬೇಸರಿಸಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾತ್ರಿ ೧೧.೩೦ರವರೆಗೂ ಸಿದ್ದರಾಮಯ್ಯನವರಿಗೆ ಕಾದು ನಾನು ಗ್ಯಾರಂಟಿ ಯೋಜನೆಯಿಂದ ಆಗುವ ಸಮಸ್ಯೆಗಳನ್ನು ವಿವರಿಸಿದ್ದೆ. ಒಂದು ಸಂಸಾರಕ್ಕೆ ಏನು ಸಮಸ್ಯೆ ಇದೆ ಅದನ್ನು ಮೊದಲು ಬಗೆಹರಿಸಿ. ಗ್ಯಾರಂಟಿ ಬದಲು ಉಚಿತ ಆರೋಗ್ಯ ಚಿಕಿತ್ಸೆ ಕೊಡಬಹುದಿತ್ತು. ಇಂದು ಆಸ್ಪತ್ರೆಗೆ ಹೋದರೆ ಲಕ್ಷಾಂತರ ರೂಪಾಯಿ ಬಿಲ್ ಆಗುತ್ತದೆ. ಗ್ಯಾರಂಟಿ ಬದಲು ಇದನ್ನು ತಪ್ಪಿಸಬೇಕಿತ್ತು. ಆದರೆ, ಸಿದ್ದರಾಮಯ್ಯನವರು ತಮಗೆ ತೋಚಿದ್ದನ್ನು ಮಾಡಿದ್ದಾರೆ. ಅದು ಜನರಿಗೆ ಬೇಕಾ ಬೇಡವಾ ಎಂಬುದನ್ನು ತಿಳಿದುಕೊಳ್ಳಬೇಕಿತ್ತು. ಒಂದು ಬಿಯರ್ ₹ ೧೩೦ ಇದ್ದದ್ದು ₹ ೨೭೦ ಆಗಿದೆ. ಗಂಡನಿಗೆ ಹೆಂಡ ಕುಡಿಸಿ, ಹೆಂಡತಿಗೆ ₹ ೨೦೦೦ ಕೊಟ್ಟರೆ ಏನಾಗುವುದು ಎಂದು ವಿಶ್ವನಾಥ ಪ್ರಶ್ನಿಸಿದರು.