ಸಾರಾಂಶ
ಶಾಲಾ ಮುಂಭಾಗದಲ್ಲಿ ಬೃಹತ್ ಕರ್ನಾಟಕದ ನಕ್ಷೆಯನ್ನು ಚಿತ್ರಿಸಿ ಹಚ್ಚೇವು ಕನ್ನಡದ ದೀಪ ನೃತ್ಯದೊಂದಿಗೆ ಕರ್ನಾಟಕದ ನಕ್ಷೆಯ ಸುತ್ತಲೂ ಹಣತೆಯನ್ನು ಹಚ್ಚಲಾಯಿತು. ರಾಷ್ಟ್ರಧ್ವಜ ಮತ್ತು ಕರ್ನಾಟಕದ ಬಾವುಟ ಎರಡನ್ನು ಧ್ವಜರೋಹಣಗೊಳಿಸಿ, ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ನಾಡಗೀತೆ ಹಾಡಿದರು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಶಾಲಾ ಮುಂಭಾಗದಲ್ಲಿ ಬೃಹತ್ ಕರ್ನಾಟಕದ ನಕ್ಷೆಯನ್ನು ಚಿತ್ರಿಸಿ ಹಚ್ಚೇವು ಕನ್ನಡದ ದೀಪ ನೃತ್ಯದೊಂದಿಗೆ ಕರ್ನಾಟಕದ ನಕ್ಷೆಯ ಸುತ್ತಲೂ ಹಣತೆಯನ್ನು ಹಚ್ಚಲಾಯಿತು. ರಾಷ್ಟ್ರಧ್ವಜ ಮತ್ತು ಕರ್ನಾಟಕದ ಬಾವುಟ ಎರಡನ್ನು ಧ್ವಜರೋಹಣಗೊಳಿಸಿ, ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ನಾಡಗೀತೆ ಹಾಡಿದರು. ಶಾಲಾ ಆವರಣದ ಕರ್ನಾಟಕ ನಕ್ಷೆಯ ಸುತ್ತಲೂ ಹಳೆಗನ್ನಡ ಕವಿಗಳಿಂದ ಹಿಡಿದು ಇತ್ತೀಚಿನ ಉದಯೋನ್ಮುಖ ಕವಿಗಳ ವರೆಗೂ ಭಾವಚಿತ್ರವನ್ನು ಪ್ರದರ್ಶಿಸಿ ವಿದ್ಯಾರ್ಥಿಗಳಿಗೆ ಕವಿಗಳ ಮತ್ತು ಅವರ ಸಾಹಿತ್ಯದ ಪರಿಚಯ ಮಾಡಿಕೊಡಲಾಯಿತು. ಇಡೀ ಶಾಲಾ ವಾತಾವರಣವೇ ಹಳದಿ ಮತ್ತು ಕೆಂಪು ಬಾವುಟಗಳಿಂದ ತುಂಬಿ ಕನ್ನಡದ ಕಂಪನ್ನು ಬೀರುವಂತೆ ಸೃಷ್ಟಿಸಲಾಯಿತು.
ವಿದ್ಯಾರ್ಥಿಗಳು ಶಾಲಾ ಮುಂಭಾಗದಲ್ಲಿ ರೂಪುಗೊಂಡ ಸಾಹಿತ್ಯ ಕುಟೀರದೊಳಗೆ ವಿವಿಧ ಪ್ರಸಿದ್ಧ ಲೇಖಕರ ಕೃತಿಗಳನ್ನು ಮತ್ತು ವಿವಿಧ ಸರಳ ಕಥಾ ಪುಸ್ತಕಗಳನ್ನು ಓದುವ ಮೂಲಕ ಸಾಹಿತ್ಯದಲ್ಲಿನ ಅಭಿರುಚಿಯನ್ನು ಬೆಳೆಸಿಕೊಂಡರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ವಿಸ್ತೀರ್ಣ, ರಾಜ್ಯದ ಬೆಳವಣಿಗೆ, ಕರ್ನಾಟಕವನ್ನು ಆಳಿದ ರಾಜ ಮನೆತನದವರು, ಸಾಹಿತಿಗಳು, ಕವಿಗಳು, ಕರ್ನಾಟಕದ ವಿಶೇಷತೆ ಇನ್ನು ಮುಂತಾದವುಗಳ ಬಗ್ಗೆ ತಮ್ಮ ತಮ್ಮ ಭಾಷಣದ ಮೂಲಕ ತಿಳಿಸಿದರು.
ಶಾಲೆಯ ಕ್ರಿಯಾಶೀಲ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್ ಅವರ ನೇತೃತ್ವದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಹ ಶಿಕ್ಷಕರು, ಪೋಷಕ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.