ಐದು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಭಾಷೆ, ಸಾಹಿತ್ಯ, ನಾಡು-ನುಡಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಹಿರಿಯ ಸಾಹಿತಿ, ಕನ್ನಡಪರ ಹೋರಾಟಗಾರ ಹಾಗೂ ಸಮಾಜಸೇವಕ ವಾಸಪ್ಪ ಯಲ್ಲಪ್ಪ ಕುಸಗೂರ ಅವರ ಕನ್ನಡ ಸೇವೆಗೆ ಇದೀಗ ರಾಜ್ಯಮಟ್ಟದ ಮನ್ನಣೆ ದೊರೆತಿದೆ. ಅವರ ಸುದೀರ್ಘ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಬಸವರಾಜ ಸರೂರಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಐದು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಭಾಷೆ, ಸಾಹಿತ್ಯ, ನಾಡು-ನುಡಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಹಿರಿಯ ಸಾಹಿತಿ, ಕನ್ನಡಪರ ಹೋರಾಟಗಾರ ಹಾಗೂ ಸಮಾಜಸೇವಕ ವಾಸಪ್ಪ ಯಲ್ಲಪ್ಪ ಕುಸಗೂರ ಅವರ ಕನ್ನಡ ಸೇವೆಗೆ ಇದೀಗ ರಾಜ್ಯಮಟ್ಟದ ಮನ್ನಣೆ ದೊರೆತಿದೆ. ಅವರ ಸುದೀರ್ಘ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ತಾಲೂಕಿನ ಕುಪ್ಪೇಲೂರ ಗ್ರಾಮದವರಾದ ವಾಸಪ್ಪ ಯಲ್ಲಪ್ಪ ಕುಸಗೂರ ಅವರು 1941ರ ಜೂನ್ 1ರಂದು ಜನಿಸಿದ್ದು, 85ನೇ ವಯಸ್ಸಿನಲ್ಲಿಯೂ ಕನ್ನಡ ಭಾಷೆ, ಸಾಹಿತ್ಯ, ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಳೆದ 48 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ಅವರು, ರಾಣಿಬೆನ್ನೂರು ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ಕಸಾಪ ಅಧ್ಯಕ್ಷರಾಗಿ ಸೇವೆ:ಕನ್ನಡ ಸಾಹಿತ್ಯ ಪರಿಷತ್ತಿನ ರಾಣಿಬೆನ್ನೂರು ತಾಲೂಕು ಘಟಕದ ಅಧ್ಯಕ್ಷರಾಗಿ 2004ರಿಂದ 2011ರವರೆಗೆ ಎರಡು ಅವಧಿಗಳಲ್ಲಿ ಏಳು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಈ ಅವಧಿಯಲ್ಲಿ ತಾಲೂಕಿನಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ ಸಾಂಸ್ಥಿಕ ನೆಲೆ ಕಲ್ಪಿಸುವುದರ ಜತೆಗೆ, ದಾನಿಗಳ ಸಹಕಾರ ಪಡೆದು ರಾಜ್ಯದಲ್ಲೇ ಪ್ರಪ್ರಥಮ ತಾಲೂಕು ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಶ್ರಮಿಸಿರುವುದು ಅವರ ಸೇವೆಯ ಪ್ರಮುಖ ಮೈಲಿಗಲ್ಲಾಗಿದೆ.

ಶಾಲಾ ಹಂತದಿಂದಲೇ ಮಕ್ಕಳಲ್ಲಿ ಕನ್ನಡ ಸಾಹಿತ್ಯಾಭಿರುಚಿ ಬೆಳೆಸುವ ನಿಟ್ಟಿನಲ್ಲಿ ''''ಶಾಲೆಗೊಂದು ಸಾಹಿತ್ಯ'''' ಕಾರ್ಯಕ್ರಮ, ಮಕ್ಕಳ ಕವಿಗೋಷ್ಠಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮಹಿಳಾ ಗೋಷ್ಠಿ, ಜಾನಪದ ಗೀತೆ ಸ್ಪರ್ಧೆ ಸೇರಿದಂತೆ ಹತ್ತು ಹಲವು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು, ಗ್ರಾಮೀಣ ಭಾಗದ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವುದು ಅವರ ಕಾರ್ಯಶೈಲಿಯ ಪ್ರಮುಖ ಅಂಶಗಳಾಗಿದ್ದವು. ಅಲ್ಲದೆ, ಕಸಾಪಕ್ಕೆ 800ಕ್ಕೂ ಹೆಚ್ಚು ಆಜೀವ ಸದಸ್ಯತ್ವ ಮಾಡಿಸುವ ಮೂಲಕ ಸಂಘಟನೆಯ ಬಲವರ್ಧನೆಗೂ ಶ್ರಮಿಸಿದ್ದಾರೆ.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಗೌರವ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು, ಶರಣರ ವಚನ ಸಾಹಿತ್ಯ ಹಾಗೂ ವಿಚಾರಧಾರೆಗಳ ಪ್ರಸಾರಕ್ಕೆ ಕೊಡುಗೆ ನೀಡಿದ್ದಾರೆ.

ಕನ್ನಡ ಭಾಷೆ, ಸಾಹಿತ್ಯ ಹಾಗೂ ನಾಡು-ನುಡಿಯ ಸೇವೆಯನ್ನು ಯಾವುದೇ ಪ್ರಶಸ್ತಿಯ ನಿರೀಕ್ಷೆಯಿಲ್ಲದೆ ಮಾಡುತ್ತ ಬಂದಿದ್ದೇನೆ. ಐದು ದಶಕಗಳ ನನ್ನ ಸೇವೆಯನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಈ ಗೌರವ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಾಸಪ್ಪ ಕುಸಗೂರ ಹೇಳಿದರು.