ಕನ್ನಡಪ್ರಭ ವಾರ್ತೆ ಇಂಡಿ 1991ರಲ್ಲಿ ಚವಡಿಹಾಳ ಗ್ರಾಮ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಹೆಣ್ಮಕ್ಕಳ ಶಿಕ್ಷಣಕ್ಕಾಗಿ ಕಟ್ಟಿದ್ದ ಭಾಗ್ಯವಂತಿ ವಿದ್ಯಾವರ್ಧಕ ಸಂಘದ ಸಂಸ್ಥಾಪಕ, ಅಧ್ಯಕ್ಷರಾದ ಶಾಂತಪ್ಪ ದಶವಂತ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.

ಖಾಜಪ್ಪ ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

1991ರಲ್ಲಿ ಚವಡಿಹಾಳ ಗ್ರಾಮ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಹೆಣ್ಮಕ್ಕಳ ಶಿಕ್ಷಣಕ್ಕಾಗಿ ಕಟ್ಟಿದ್ದ ಭಾಗ್ಯವಂತಿ ವಿದ್ಯಾವರ್ಧಕ ಸಂಘದ ಸಂಸ್ಥಾಪಕ, ಅಧ್ಯಕ್ಷರಾದ ಶಾಂತಪ್ಪ ದಶವಂತ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.

ಶಾಂತಪ್ಪ ದಶವಂತ ಅವರು ಪ್ರೌಢಶಿಕ್ಷಣ ಕಲೆಯುವ ಸಮಯದಲ್ಲಿ ದೂರದ ಊರಿನಲ್ಲಿ ಕಲಿತು ಅನುಭವಿಸಿದ ಸಂಕಷ್ಟ ಯಾರಿಗೂ ಬರಬಾರದೆಂಬ ಉದ್ದೇಶದಿಂದ 1991ರ ಆ.26 ರಂದು ಪ್ರೌಢಶಾಲೆ ಪ್ರಾರಂಭಿಸಿದರು. ಸ್ವಂತ ಖರ್ಚಿನಲ್ಲಿ ಶಾಲೆ ನಡೆಸಿ ಮುಂದೆ 1994ರಲ್ಲಿ ಪ್ರೌಢಶಾಲಾ ಕಟ್ಟಡಕ್ಕಾಗಿ 3 ಎಕರೆ ಜಮೀನನ್ನು ಸಂಸ್ಥೆಗೆ ದಾನ ನೀಡಿದರು. ಮುಂದೆ ಪ್ರೌಢಶಾಲೆಯು ಶಾಶ್ವತ ಅನುದಾನರಹಿತವಿದ್ದ ಕಾರಣ ಇಲ್ಲಿ ದುಡಿಯುವ ಶಿಕ್ಷಕರು ಶಾಲೆ ಬಿಟ್ಟು ಹೋದರು. ನಂತರ ಗೌರವ ಶಿಕ್ಷಕರನ್ನು ಕರೆತಂದು ಜಾತ್ರೆ ಜಾತ್ರೆ ತಿರುಗಾಡಿ ವ್ಯಾಪಾರ ಮಾಡಿ ಬಂದ ಹಣದಿಂದ ಶಿಕ್ಷಕರಿಗೆ ವೇತನ ನೀಡುವ ಮೂಲಕ ಶಾಲೆ ಬೆಳೆಸಿದ್ದಾರೆ. ಸತತ 14 ವರ್ಷದ ಪ್ರಯತ್ನದಿಂದ 2005ರ ಏ.26ರಂದು ಶಾಲೆಯೂ ವೇತನ ಅನುದಾನಕ್ಕೆ ಒಳಪಟ್ಟಿತು.

ಪ್ರತಿಷ್ಠಿತ ವಸತಿ ಶಾಲೆ:

2018ರಲ್ಲಿ ಇಂಡಿ ತಾಲೂಕು ಅತೀ ಹಿಂದುಳಿದ ಹಾಗೂ ಗಡಿ ಪ್ರದೇಶವಾಗಿದ್ದು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಚಿವರಾದ ಎಚ್.ಆಂಜನೇಯ ಅವರು ಪ್ರತಿಷ್ಠಿತ ವಸತಿ ಶಾಲೆಯಂದು ಆಯ್ಕೆ ಮಾಡಿದ್ದಾರೆ. ಸದರಿ ಯೋಜನೆಯ ಅಡಿಯಲ್ಲು ಇಲ್ಲಿಯವರೆಗೆ 175ಬಡ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಕುಟುಂಬದ ಹಿನ್ನೆಲೆ:

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಶಾಂತಪ್ಪ ದಶವಂತ ಚವಡಿಹಾಳದ ಪಂಚಪ್ಪ ದಶವಂತ ಹಾಗೂ ಭಾಗಮ್ಮ ದಂಪತಿಯ ಪುತ್ರರಾಗಿ 1947ರ ಫೆಬ್ರವರಿ 2 ರಂದು ಜನಿಸಿದರು. ಚವಡಿಹಾಳ ಗ್ರಾಮದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಶಾಂತಪ್ಪ ದಶವಂತ ಅವರು ಬಿಎ ಪದವಿ ಪಡೆದಿದ್ದಾರೆ. ಇವರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರು. ಓರ್ವ ಪುತ್ರ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು, ಇನ್ನೋರ್ವ ಪ್ರೌಢ ಶಾಲೆಯ ಎಫ್‌ಡಿಎ ಹಾಗೂ ಮತ್ತೊಬ್ಬ ಬಿಎ, ಬಿಪಿಇಡಿ ಪದವಿ ಪಡೆದಿದ್ದಾರೆ.

ಶಾಂತಪ್ಪ ದಶವಂತ ಪ್ರಾಥಮಿಕ ಶಾಲೆ ಶಿಕ್ಷಣ ಮುಗಿಸಿ ಪ್ರೌಢಶಾಲೆಗೆ ದೂರದ ಲಚ್ಯಾಣ ಗ್ರಾಮಕ್ಕೆ ನಡೆದುಕೊಂಡು ಹೋಗಬೇಕಿತ್ತು. ಶಾಲೆಗೆ ಹೋಗಿ ಬರುವುದು ಕಷ್ಟವಾಗುತ್ತಿತ್ತು. ಹೀಗಾಗಿ, ಚವಡಿಹಾಳದಲ್ಲಿ ಪ್ರೌಢಶಾಲೆ ಇಲ್ಲದ ಕಾರಣ ಹೆಣ್ಮಕ್ಕಳು 7ನೇ ತರಗತಿ ಮುಗಿಸಿ ಮುಂದಿನ ವಿದ್ಯಾಭಾಸ ಮೊಟಕುಗೊಳಿಸುತ್ತಿದ್ದರು. ಇದನ್ನು ಮನಗಂಡು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಚವಡಿಹಾಳದಲ್ಲಿ 1989ರಲ್ಲಿ ಪ್ರೌಢಶಾಲೆ ತೆರೆಯಲು ಬಯಸಿದರು.

ಕರ್ನಾಟಕ ರತ್ನಶ್ರೀ ಪ್ರಶಸ್ತಿ ಪ್ರದಾನ:

ಶಾಂತಪ್ಪ ದಶವಂತ ಅವರ ಶೈಕ್ಷಣಿಕ ಸೇವೆಯನ್ನು ಗುರುತಿಸಿ 2011ರಲ್ಲಿ ಬೆಂಗಳೂರಿನ ಕರ್ನಾಟಕ ಸಂಸ್ಕೃತ ಅಕಾಡೆಮಿಯಿಂದ ನೀಡುವ ಕರ್ನಾಟಕ ರತ್ನಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.-----------

ಕೋಟ್‌.....

ನಮ್ಮ ಸಂಸ್ಥೆಯಡಿ ವೃತ್ತಿ ಶಿಕ್ಷಣ, ಡಿ.ಇಡಿ, ಬಿ.ಇಡಿ, ನರ್ಸಿಂಗ್‌ ಕಾಲೇಜುಗಳನ್ನು ಸ್ಥಾಪಿಸುವ ಯೋಜನೆಯಿದೆ. ಬಾಲ ಕಾರ್ಮಿಕರ ಏಳಿಗೆಗಾಗಿ ಶ್ರಮಿಸುವುದು, ಹೆಣ್ಮಕ್ಕಳಿಗೆ ಶಿಕ್ಷಣ ನೀಡಲು ವಿಶೇಷ ಕಾಳಜಿ ವಹಿಸುವುದು, ಅನಾಥ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಶಿಕ್ಷಣ ನೀಡಲು ಒತ್ತು ನೀಡುಲಾಗುವುದು. ವಿಧವೆಯರಿಗೆ ಹಾಗೂ ಅಬಲೆ ಹೆಣ್ಮಕ್ಕಳಿಗೆ ಸಹಾಯ ಮಾಡುವುದು, ಸಹಕಾರ ರಂಗದಲ್ಲಿ ಬ್ಯಾಂಕ್‌ ಸ್ಥಾಪನೆ ಮಾಡುವ ಯೋಜನೆಯಿದೆ.

-ಶಾಂತಪ್ಪ ದಶವಂತ, ಅಧ್ಯಕ್ಷರು, ಭಾಗ್ಯವಂತಿ ವಿದ್ಯಾವರ್ಧಕ ಸಂಘ