ಸಾರಾಂಶ
ಟ್ಯಾಬ್ಲೋ, ೫೦ ಜನರಿಂದ ಕನ್ನಡ ನುಡಿ ಗೀತೆಗಳ ಗಾಯನ, ಸನ್ಮಾನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹಾವೇರಿಕರ್ನಾಟಕ ರಾಜ್ಯೋತ್ಸವ ಸಮಾರಂಭ ಹಾಗೂ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕಾರಣ ಮಾಡಿದ ೫೦ನೇ ವರ್ಷಾಚರಣೆ ಅಂಗವಾಗಿ ನ.೧ರಂದು ಜಿಲ್ಲಾಡಳಿತದಿಂದ ಅರ್ಥಪೂರ್ಣ ಹಾಗೂ ಸಂಭ್ರಮದಿಂದ ಕಾರ್ಯಕ್ರಮಗಳ ಆಯೋಜನೆಗೆ ಎಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ಸಿದ್ಧತೆ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಕೈಗೊಂಡಿರುವ ಸಿದ್ಧತೆಗಳ ಕುರಿತಂತೆ ಇಲಾಖಾವಾರು ಪರಿಶೀಲನೆ ನಡೆಸಿದ ಅವರು, ಎಲ್ಲ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಯಾವ ಅಧಿಕಾರಿಗಳು ರಾಜ್ಯೋತ್ಸವ ಸಮಾರಂಭಕ್ಕೆ ಗೈರು ಹಾಜರಾಗಬಾರದು. ಅತ್ಯಂತ ಶಿಸ್ತಿನಿಂದ ಕಾರ್ಯಕ್ರಮ ನಿರ್ವಹಣೆಯ ಮೂಲಕ ರಾಜ್ಯೋತ್ಸವವನ್ನು ಯಶಸ್ವಿಗೊಳಿಸುವಂತೆ ವಿವಿಧ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.ನ.೧ರಂದು ಬೆಳಗ್ಗೆ ೮ ಗಂಟೆಗೆ ಮೈಲಾರ ಮಹದೇವ ವೃತ್ತದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯ ಜೊತೆಗೆ ವಿವಿಧ ೧೧ ಇಲಾಖೆಗಳ ಸ್ಥಬ್ಧಚಿತ್ರಗಳ ಮೆರವಣಿಗೆ ಆರಂಭವಾಗಬೇಕು. ಸ್ಥಬ್ಧ ಚಿತ್ರಗಳನ್ನು ಅತ್ಯಂತ ಆಕರ್ಷಕವಾಗಿ ವಿನ್ಯಾಸಗೊಳಿಸಬೇಕು. ಎಲ್ಲ ಅಧಿಕಾರಿಗಳು ಸ್ಥಬ್ಧ ಚಿತ್ರಗಳ ಮೆರವಣಿಗೆಯಲ್ಲಿ ಭಾಗವಹಿಸಬೇಕು. ತಾಯಿ ಭುವನೇಶ್ವರಿ ರಥವನ್ನು ಹೂವಿನ ಅಲಂಕಾರಗೊಳಿಸಿ ಜಾನಪದ ಕಲಾತಂಡಗಳೊಂದಿಗೆ ಶಿಸ್ತಿನಿಂದ ಮೆರವಣಿಗೆಯಲ್ಲಿ ಸಾಗುವಂತೆ ವ್ಯವಸ್ಥೆಗೊಳಿಸಬೇಕು ಎಂದು ಸಲಹೆ ನೀಡಿದರು.
ಬಳಿಕ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣಕ್ಕೆ ಮೆರವಣಿಗೆ ತಲುಪಬೇಕು. ರಾಷ್ಟ್ರಗೀತೆ, ಧ್ವಜಾರೋಹಣ, ಧ್ವಜವಂದನೆ, ಸಚಿವರ ಸಂದೇಶ, ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡ ಹಿನ್ನೆಲೆ ಜಿಲ್ಲಾಡಳಿತದಿಂದ ಕರ್ನಾಟಕ ಸಂಭ್ರಮ ೫೦ ಕಾರ್ಯಕ್ರಮ ಆಯೋಜಿಸಬೇಕು. ಈ ಕಾರ್ಯಕ್ರಮದಲ್ಲಿ ಕನ್ನಡಾಂಬೆಗೆ ನುಡಿ ನಮನ ಕಾರ್ಯಕ್ರಮ ಅಂಗವಾಗಿ ಕನಿಷ್ಠ ೫೦ ಶಾಲಾ ಮಕ್ಕಳು ಹಾಗೂ ನುರಿತ ಸಂಗಿತ ಕಲಾತಂಡಗಳಿಂದ ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪು ಅವರ ಎಲ್ಲಾದರು ಎಂತಾದರು ಇರು.., ದ.ರಾ.ಬೇಂದ್ರ ಅವರ ಒಂದೇ ಒಂದೇ ಕರ್ನಾಟಕ ಒಂದೇ..., ಸಿದ್ದಯ್ಯ ಪುರಾಣಿಕ ಅವರ ಹೊತ್ತಿತ್ತೋ ಹೊತ್ತಿತು ಕನ್ನಡ ದೀಪ... ಹಾಗೂ ಚನ್ನವೀರ ಕಣವಿ ಅವರ ಹೆಸರಾಯಿ ಕರ್ನಾಟಕ ಉಸಿರಾಯಿತು ಕನ್ನಡ...ಗೀತಗಾಯನ ಕಾರ್ಯಕ್ರಮ ಪ್ರದರ್ಶನಕ್ಕೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಿರೀಶ ಪದಕಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.ಪಥಸಂಚಲನ ಹಾಗೂ ಸಮೂಹ ಗೀತ ಗಾಯನದಲ್ಲಿ ಕಡ್ಡಾಯವಾಗಿ ಸರ್ಕಾರಿ ಶಾಲಾ ಮಕ್ಕಳಿಗೂ ಅವಕಾಶ ಕಲ್ಪಿಸಬೇಕು ಎಂದು ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಕೃಷಿ, ಪರಿಸರ, ಪತ್ರಿಕೋದ್ಯಮ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಸಮಾಜ ಸೇವೆ, ವಾಣಿಜ್ಯೋದ್ಯಮ, ಪೌರಕಾರ್ಮಿಕ, ಸಾಹಿತ್ಯ, ಸಂಗೀತ, ಜಾನಪದ, ರಂಗಭೂಮಿ, ನಾಟ್ಯ, ನೃತ್ಯ, ಚಿತ್ರಕಲೆ, ಶಿಲ್ಪಕಲೆ, ಶಿಕ್ಷಣ, ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಹಾಗೂ ಅಪಘಾತ ರಹಿತವಾಗಿ ಚಾಲನೆ ಮಾಡಿದ ೫೦ ಜನ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೃತ್ಯ ಕಾರ್ಯಕ್ರಮ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಅತ್ಯಂತ ಅರ್ಥಪೂರ್ಣವಾಗಿ ಸಮಾರಂಭವನ್ನು ಆಯೋಜಿಸಲು, ಕ್ರೀಡಾಂಗಣ ಸ್ವಚ್ಛತೆ, ಮಹನೀಯರ ವೃತ್ತಗಳಿಗೆ ದೀಪಾಲಂಕಾರ ಸೇರಿದಂತೆ ಅಚ್ಚುಕಟ್ಟಾಗಿ ಸಿದ್ಧತೆ ಕೈಗೊಳ್ಳಲು ವಿವಿಧ ಇಲಾಖಾ ಅಧಿಕಾರಿಗಳ ತಂಡ ರಚಿಸಿ ಸಮನ್ವಯದಿಂದ ಕಾರ್ಯನಿರ್ವಹಿಸಲು ಸೂಚನೆ ನೀಡಿದರು.ಸಭೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಕೈಗೊಂಡಿರುವ ಸಿದ್ಧತೆಗಳ ಕುರಿತಂತೆ ಮಾಹಿತಿ ನೀಡಿದರು.