ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು: ಡಾ.ಸಿ.ಕೆ.ಸುಬ್ಬರಾಯ

| Published : Nov 19 2024, 12:46 AM IST

ಸಾರಾಂಶ

ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಸೀಮಿತವಾಗದೆ ನಿತ್ಯೋತ್ಸವವಾಗಿ ನಮ್ಮಲ್ಲಿ ರೂಢಿಯಾಗಬೇಕು ಎಂದು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ.ಸಿ.ಕೆ .ಸುಬ್ಬರಾಯ ಆಶಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಸೀಮಿತವಾಗದೆ ನಿತ್ಯೋತ್ಸವವಾಗಿ ನಮ್ಮಲ್ಲಿ ರೂಢಿಯಾಗಬೇಕು ಎಂದು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ.ಸಿ.ಕೆ .ಸುಬ್ಬರಾಯ ಆಶಯ ವ್ಯಕ್ತಪಡಿಸಿದರು. ನಗರದ ಕುವೆಂಪು ಕಲಾಮಂದಿರದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ‘ನಮ್ಮ ನಾಡು-ನಮ್ಮ ಹಾಡು’ ಕಾರ್ಯಕ್ರಮದಡಿ ಆಯೋಜಿಸಿದ್ದ ನಾಡಿನ ಖ್ಯಾತ ಕವಿಗಳ ಕಾವ್ಯ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಬಗ್ಗೆ ನಮ್ಮಲ್ಲಿ ಅಭಿಮಾನವಿರಬೇಕು. ಹಾಗೆಯೇ ನಮ್ಮ ಸಂಸ್ಕೃತಿ, ನಾಡು - ನುಡಿಯ ಬಗ್ಗೆ ಹೆಮ್ಮೆ ಪಡಬೇಕು ಎಂದರು.ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ ಇದೇ ಪ್ರಥಮ ಬಾರಿಗೆ ಕೊಡ ಮಾಡಿರುವ ಪೂರ್ವಿ ಕನ್ನಡ ಸಿರಿ ಪ್ರಶಸ್ತಿಯನ್ನು ಸ್ವೀಕರಿಸಿದ ಸುಗಮ ಸಂಗೀತ ಗಂಗಾದ ಅಧ್ಯಕ್ಷ, ಮಕ್ಕಳ ತಜ್ಞ ಡಾ. ಜೆ.ಪಿ. ಕೃಷ್ಣೇಗೌಡ ಮಾತನಾಡಿ, ಕನ್ನಡಕ್ಕಾಗಿ ಕೈ ಎತ್ತು ಕಲ್ಪವೃಕ್ಷವಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತು ಅಲ್ಲಿ ಪಾಂಚಜನ್ಯ ಮೊಳಗುತ್ತದೆ. ಕನ್ನಡಕ್ಕಾಗಿ ಕಿರುಬೆರಳ ತೋರು ಅದು ಗೋವರ್ಧನಗಿರಿಯಾಗುತ್ತದೆ ಎಂದು ಹೇಳಿದವರು ರಾಷ್ಟ್ರಕವಿ ಕುವೆಂಪು ಎಂದು ಹೇಳಿದರು.

ಕನ್ನಡಕ್ಕೆ ಒಟ್ಟು ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿದ್ದು, ಪ್ರಪ್ರಥಮವಾಗಿ ಈ ಪ್ರಶಸ್ತಿ ಕುವೆಂಪು ಅವರಿಗೆ ಬಂದಿದೆ. ದೇಶದಲ್ಲಿ 1623 ಭಾಷೆಗಳಿವೆ. 400 ಕ್ಕಿಂತ ಹೆಚ್ಚು ಆಡುಭಾಷೆಗಳಿವೆ. 13 ರಾಷ್ಟ್ರೀಯ ಭಾಷೆಗಳಿವೆ. ಜಗತ್ತಿನ ಯಾವ ದೇಶದಲ್ಲೂ ಕನ್ನಡದ ಈ ವಿಶೇಷತೆ ಇಲ್ಲ ಎಂದು ಹೇಳಿದರು. ಸಂಗೀತ ಶಿಕ್ಷಕಿ ವೀಣಾ ಅರವಿಂದ್ ಮಾತನಾಡಿದರು. ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್‌ ದೊಡ್ಡಯ್ಯ, ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಜಿ.ರಮೇಶ್, ಸಂಗೀತ ಶಿಕ್ಷಕರುಗಳಾದ ಸುಮಾ ಪ್ರಸಾದ್, ಪ್ರಸನ್ನಲಕ್ಷ್ಮೀ, ಗೀತಾ ಸತೀಶ್, ಮಾಲಿನಿ ರಮೇಶ್, ಪದ್ಮಾ ಚಂದ್ರಶೇಖರ್, ಪವಿತ್ರ ದೀಪಕ್, ನಳಿನಾ ವೆಂಕಟೇಶ್, ಪಂಕಜ ಕಶ್ಯಪ್ ವೇದಿಕೆಯಲ್ಲಿದ್ದರು.

------

18 ಕೆಸಿಕೆಎಂ 1ಪೂರ್ವಿ ಗಾನಯಾನ - 101 ರ ಪ್ರಯುಕ್ತ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಲಾಗಿದ್ದ ನಮ್ಮ ನಾಡು-ನಮ್ಮ ಹಾಡು ಕಾರ್ಯಕ್ರಮವನ್ನು ಡಾ.ಸಿ.ಕೆ. ಸುಬ್ಬರಾಯ ಉದ್ಘಾಟಿಸಿದರು. ಡಾ. ಜೆ.ಪಿ. ಕೃಷ್ಣೇಗೌಡ, ಎಂ.ಎಸ್‌. ಸುಧೀರ್‌ ಇದ್ದರು.