ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಈ ಬಾರಿ ಉಡುಪಿ ಜಿಲ್ಲೆಗೆ ಒಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು ಎರಡು ಸುವರ್ಣ ಕರ್ನಾಟಕ ಪ್ರಶಸ್ತಿಗಳು ಒಲಿದಿವೆ. ಸಾಹಿತ್ಯ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದರೆ, ಯಕ್ಷಗಾನ ಕಲಾವಿದ ಚೇರ್ಕಾಡಿ ಮಂಜುನಾಥ ಪ್ರಭು ಮತ್ತು ನೃತ್ಯ ಕಲಾವಿದೆ ಮಿನಾಲ್ ಪ್ರಭು ಸುವರ್ಣ ಕರ್ನಾಟಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಎಂ. ವೀರಪ್ಪ ಮೊಯ್ಲಿ: ಮೂಡುಬಿದಿರೆ ಸಮೀಪದ ಮಾರ್ಪಾಡಿಯಲ್ಲಿ ಜನಿಸಿದ ವೀರಪ್ಪ ಮೊಯ್ಲಿ ಕಾರ್ಕಳದಿಂದ ಶಾಸಕರಾಗಿ, ಮುಖ್ಯಮಂತ್ರಿಯಾದವರು. ಚಿಕ್ಕಬಳ್ಳಾಪುರದ ಸಂಸದರಾಗಿ ಕೇಂದ್ರ ಸಚಿವರೂ ಆಗಿದ್ದರು. ಕಾನೂನು ಪದವೀಧರರಾದ ಅವರು ರಾಜ್ಯ ಹೈಕೋರ್ಟ್‌ನಲ್ಲಿಯೂ ವಕೀಲರಾಗಿದ್ದವರು.
ರಾಜಕೀಯ ಜೊತೆಗೆ ಸಾಹಿತ್ಯದಲ್ಲಿಯೂ ಆಸಕ್ತರಾಗಿದ್ದ ಅವರು ಸುಳಿಗಾಳಿ, ಸಾಗರದೀಪ, ಕೊಟ್ಟ, ತೆಂಬರೆ ಮೊದಲಾದ ಕಾದಂಬರಿಗಳು, ಮಿಲನ, ಪ್ರೇಮವೆಂದರೆ, ಪರಾಜಿತ ಎಂಬ ನಾಟಕಗಳು, ಹಾಲು ಜೇನು, ಮತ್ತೆ ನಡೆಯಲಿ ಸಮರ, ಯಕ್ಷಪ್ರಶ್ನೆ, ಜೊತೆಯಾಗಿ ನಡೆಯೋಣ ಕವನ ಸಂಕಲನ ಪ್ರಕಟಿಸಿದ್ದಾರೆ.ಶ್ರೀರಾಮಾಯಣ ಮಹಾನ್ವೇಷಣಂ ಮತ್ತು ಶ್ರೀಬಾಹುಬಲಿ ಅಹಿಂಸಾ ದಿಗ್ವಿಜಯಂ ಅವರ ಮಹಾಕಾವ್ಯಗಳು. ಅವರಿಗೆ ೨೦೧೪ರಲ್ಲಿ ಸರಸ್ವತಿ ಸಂಮಾನ್ ಮತ್ತು ೨೦೨೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಮಂಜುನಾಥ ಪ್ರಭು: ಎಪ್ಪತ್ತರ ಹರೆಯದ ಮಂಜುನಾಥ ಪ್ರಭು ಯಕ್ಷಗಾನದಲ್ಲಿ ಮದ್ದಳೆ ವಾದಕರಾಗಿ ಪ್ರಸಿದ್ಧರು. ಉಡುಪಿ ಸಮೀಪದ ಕುಂಜಾಲಿನಲ್ಲಿ ಜನಿಸಿದ ಅವರು ಬೇಳಿಂಜೆ ತಿಮ್ಮಪ್ಪ ನಾಯ್ಕ, ಹಿರಿಯಡ್ಕ ಗೋಪಾಲ ರಾವ್, ಕೋಟ ಮಹಾಬಲ ಕಾರಂತ, ಹಾರಾಡಿ ಕುಷ್ಠ ಗಾಣಿಗರಿಂದ ಮದ್ದಳೆ ವಾದನ ಮತ್ತು ಯಕ್ಷಗಾನ ನೃತ್ಯ ಅಭ್ಯಾಸ ಮಾಡಿದರು. ಆರಂಭದಲ್ಲಿ ಬಾಲ ಗೋಪಾಲ ಮತ್ತು ಚಿಕ್ಕ ಪುಟ್ಟ ವೇಷ ಮಾಡಿದ ಪ್ರಭು, ಮುಂದೆ ಅತ್ಯುತ್ತಮ ಮದ್ದಳೆ ವಾದಕರಾಗಿ ಹೆಸರು ಮಾಡಿದರು.ಮಂದಾರ್ತಿ, ಪೆರ್ಡೂರು, ಅಮೃತೇಶ್ವರಿ, ಸುರತ್ಕಲ್ ಮೇಳಗಳಲ್ಲಿ ಕಲಾಸೇವೆ ಮಾಡಿದ್ದಾರೆ. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ನಿರಂತರ ಐದು ದಶಕಗಳಿಂದ ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಸಕ್ತ ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್‌ನ ತರಬೇತುದಾರರಾಗಿ ಪ್ರೌಢಶಾಲಾ ಮಕ್ಕಳಿಗೆ ಯಕ್ಷ ಶಿಕ್ಷಣ ನೀಡುತ್ತಿದ್ದಾರೆ.
ಪತ್ನಿ ಶಶಿಕಲಾ ಪ್ರಭು ಕೂಡ ಯಕ್ಷಗಾನ ಕಲಾವಿದೆಯಾಗಿದ್ದು, ವರ ಕುಟುಂಬವೇ ಯಕ್ಷಗಾನಕ್ಕೆ ಸಮರ್ಪಿಸಿಕೊಂಡಿದೆ.ಮಿನಾಲ್ ಪ್ರಭು: ಪ್ರಸ್ತುತ ಬೆಂಗಳೂರಿನಲ್ಲಿರುವ ಮಿನಾಲ್ ಪ್ರಭು ಮೂಲತಃ ಉಡುಪಿಯವರು. ನೃತ್ಯ ಗುರುವಾಗಿ ಪ್ರಸಿದ್ಧರಾಗಿದ್ದಾರೆ. ಭರತನಾಟ್ಯದ ಕಲಾಕ್ಷೇತ್ರ ಶೈಲಿಯನ್ನು ಕಲಿಸುವ ಉದ್ದೇಶದಿಂದ ೧೯೭೬ರಲ್ಲಿ ಮುದ್ರಿಕಾ ಫೌಂಡೇಶನ್ ಸ್ಥಾಪಿಸಿದರು. ಕಲಾನಿಧಿ ದಿ. ನಾರಾಯಣನ್ ಶಿಷ್ಯೆಯಾಗಿರುವ ಮಿನಾಲ್ ಅವರು ಪಂಚತಂತ್ರ, ತ್ರಿಕೋನ, ಪಂಚಕನ್ಯಾ, ಕೃಷ್ಣ ನವರಸ, ಮೋಕ್ಷ ಮುದ್ರೆ, ದಶಮಂಜರಿ, ಬದರಿನಾಥ ಮೊದಲಾದ ನೃತ್ಯ ರೂಪಕಗಳ ಸರಣಿಯ ನೃತ್ಯ ಸಂಯೋಜನೆ ಮಾಡಿದ್ದಾರೆ.
ದಕ್ಷಿಣ ಏಷ್ಯಾದ ಮತ್ತು ಯುರೋಪ್ ದೇಶಗಳಲ್ಲಿ ನೃತ್ಯ ಪ್ರಸ್ತುತಪಡಿಸಿದ್ದಾರೆ.