ಸಾರಾಂಶ
ಹೊಸಪೇಟೆ: ನಗರದ ಕಾರಿಗನೂರಿನ ತೊಗಲುಗೊಂಬೆ ಕಲಾವಿದ ನಾರಾಯಣಪ್ಪ ಶಿಳ್ಳೇಕ್ಯಾತ ಅವರ ಐದು ದಶಕಗಳ ಕಲಾಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ.
1930ರಲ್ಲಿ ಜನಿಸಿದ ನಾರಾಯಣಪ್ಪ ತಮ್ಮ ಬಾಲ್ಯದಲ್ಲಿ 12ನೇ ವಯಸ್ಸಿನಿಂದಲೇ ತಂದೆ ಹನುಮಂತಪ್ಪ ಹಾಗೂ ತಾಯಿ ಹನುಮಕ್ಕ ಅವರ ಪ್ರೇರಣೆಯಿಂದ ತೊಗಲುಗೊಂಬೆ ಕಲಾಸೇವೆ ಆರಂಭಿಸಿದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲದೇ ವಿವಿಧ ರಾಜ್ಯಗಳಲ್ಲಿಯೂ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿರುವ ಇವರಿಗೆ ಹಲವಾರು ಪ್ರಶಸ್ತಿಗಳ ಮುಡಿಗೆ ರಾಜ್ಯೋತ್ಸವದ ಕಿರೀಟ ಲಭಿಸಿದೆ.1986ರಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಅಪ್ನಾ ಉತ್ಸವ, 2010ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯಿಂದ ನಡೆದ ಗೊಂಬೆ ಪರಂಪರೆ, 2017ರಲ್ಲಿ ಸಂಡೂರಿನಲ್ಲಿ ರಾಷ್ಟ್ರೀಯ ಜಾನಪದ ರಂಗೋತ್ಸವ, ಹಂಪಿ ಉತ್ಸವ, ವಿಜಯನಗರ ದಸರಾ ಉತ್ಸವ, ಜಾನಪದ ಉತ್ಸವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಡೆ 200ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ.
ನಾರಾಯಣಪ್ಪ ಅವರಿಗೆ 2013ರಲ್ಲಿ ಕರ್ನಾಟಕ ಬಯಲಾಟ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 2016ರಲ್ಲಿ ಟಿ.ಪಿ.ಕೈಲಾಸಂ ಪ್ರಶಸ್ತಿ, ಜಾನಪದ ಉತ್ಸವ ಗೌರವ, ಹಂಪಿ ಉತ್ಸವದಲ್ಲಿ ಸನ್ಮಾನ, ಕೃಷ್ಣದೇವರಾಯ ಪ್ರಶಸ್ತಿ ಸೇರಿ ವಿವಿಧ ಪ್ರಶಸ್ತಿಗಳು ಲಭಿಸಿವೆ.ನಾರಾಯಣಪ್ಪ ಅವರ ಕುರಿತು ಹಲವು ಅಧ್ಯಯನಗಳು ನಡೆದಿವೆ. ಬೆಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಅಧ್ಯಯನ ನಡೆಸಿದ್ದಾರೆ. ಇಳಿ ವಯಸ್ಸಿನಲ್ಲೂ ತೊಗಲುಗೊಂಬೆ ಕಲಾ ಪ್ರದರ್ಶನ ನೀಡುತ್ತಿರುವ ಇವರು, ಯುವ ಕಲಾವಿದರಿಗೂ ಕಲೆಯನ್ನು ಕಲಿಸುತ್ತಿದ್ದಾರೆ.ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ಸಂತಸ ತಂದಿದೆ. ಈ ವಯಸ್ಸಿನಲ್ಲಿ ಸರ್ಕಾರ ಗುರುತಿಸಿಕೊಟ್ಟಿದೆ. ಕಲೆ, ಕಲಾವಿದರನ್ನು ಪ್ರೋತ್ಸಾಹಿಸಿದೆ ಎನ್ನುತ್ತಾರೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ನಾರಾಯಣಪ್ಪ ಶಿಳ್ಳೇಕ್ಯಾತ.