ನಿರಂತರ ಮಳೆಗೆ ರಕ್ಕಸಕೊಪ್ಪ ಜಲಾಶಯ ಭರ್ತಿ

| Published : Jul 19 2024, 01:00 AM IST / Updated: Jul 19 2024, 01:01 AM IST

ಸಾರಾಂಶ

ಬೆಳಗಾವಿ ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಬೆಳಗಾವಿ ನಗರದಲ್ಲಿ ಎರಡು ದಿನಗಳಲ್ಲಿ ಬಿಟ್ಟುಬಿಡದೇ ಮಳೆಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಬೆಳಗಾವಿ ನಗರದಲ್ಲಿ ಎರಡು ದಿನಗಳಲ್ಲಿ ಬಿಟ್ಟುಬಿಡದೇ ಮಳೆಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ರಾಕಸಕೊಪ್ಪ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಎರಡು ಗೇಟ್‌ಗಳ ಮೂಲಕ ಮಾರ್ಕಂಡೇಯ ನದಿಗೆ ನೀರು ಬಿಡಲಾಗಿದೆ. ಇದರಿಂದ ನದಿ ತೀರದ ಗ್ರಾಮಸ್ಥರಿಗೆ ಪ್ರವಾಹ ಭೀತಿ ಎದುರಾಗಿದೆ.

ಪಶ್ಟಿಮ ಘಟ್ಟಗಳ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ- ಸಿಂಧದುರ್ಗ ಹೆದ್ದಾರಿ ಮೇಲೆ ಉರುಳಿ ಬಿದ್ದಿದ್ದ ಬೃಹತ್‌ ಬಂಡೆಗಲ್ಲನ್ನು ತೆರವುಗೊಳಿಸುವ ಕಾರ್ಯಾಚರಣೆ ಪೂರ್ಣಗೊಂಡಿದೆ. 50ಕ್ಕೂ ಹೆಚ್ಚುಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ರಸ್ತೆ ಮೇಲೆ ಬಿದ್ದಿದ್ದ ಬಂಡೆಗಲ್ಲನ್ನು ತೆರವುಗೊಳಿಸಿದರು. ಬಳಿಕ ಈ ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ.ತಪ್ಪಿದ ದುರಂತ:

ನಿರಂತರ ಮಳೆಯಿಂದ ಕರ್ನಾಟಕ - ಗೋವಾ ಗಡಿಯಲ್ಲಿ ಗುಡ್ಡ ಕುಸಿತವಾಗಿದ್ದು, ಸ್ವಲ್ಪದರಲ್ಲೇ ವಾಹನ ಸವಾರರು ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ಕರ್ನಾಟಕ - ಗೋವಾ ಮಧ್ಯದ ಅನಮೋಡ್ ಘಾಟ್‌ನಲ್ಲಿ ಕರ್ನಾಟಕ - ಗೋವಾ ರಸ್ತೆಯಲ್ಲಿ ಮಣ್ಣು ಬಿದ್ದಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ.