ಸಾರಾಂಶ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಾವಿರಾರು ಸಹೋದರರಿಗೆ ರಾಖಿ ಕಟ್ಟಿ, ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಾವಿರಾರು ಸಹೋದರರಿಗೆ ರಾಖಿ ಕಟ್ಟಿ, ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಭ್ರಾತೃತ್ವದ ಬಂಧವನ್ನು ಗಟ್ಟಿಗೊಳಿಸುವ ರಕ್ಷಾ ಬಂಧನದ ಪವಿತ್ರ ಹಬ್ಬದ ನಿಮಿತ್ತ ಸಚಿವರ ಬೆಳಗಾವಿಯ ಗೃಹ ಕಚೇರಿಯಲ್ಲಿ ಸಂತಸ, ಸಂಭ್ರಮ ಇಮ್ಮಡಿಸಿತ್ತು. ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ ಅಸಂಖ್ಯಾತ ಜನರಿಗೆ ಸಚಿವರು ಸ್ವಾಗತಿಸಿ, ತಾವೇ ರಾಖಿ ಕಟ್ಟಿ ಶುಭಾಶಯ ಕೋರಿದರು.
ಬೆಳಗ್ಗೆಯಿಂದಲೇ ಬೆಳಗಾವಿ ಗ್ರಾಮೀಣ ಕ್ಷೇತ್ರ, ಜಿಲ್ಲೆ, ರಾಜ್ಯದ ವಿವಿಧೆಡೆಯಿಂದ ಜನರು ಸಚಿವರ ನಿವಾಸಕ್ಕೆ ಆಗಮಿಸಿದ್ದರು. ಸರತಿ ಸಾಲಿನಲ್ಲಿ ಆಗಮಿಸಿದ ಎಲ್ಲರಿಗೂ ಖುಷಿಯಿಂದ ರಾಖಿ ಕಟ್ಟಿ ಸಿಹಿ ತಿನಿಸಿದರು. ಈ ಕಾರ್ಯಕ್ರಮ ಮಧ್ಯಾಹ್ನದವರೆಗೂ ನಿರಂತರವಾಗಿ ನಡೆಯಿತು. ಬಂದವರಿಗೆಲ್ಲ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.ಮೃಣಾಲ್ ಹೆಬ್ಬಾಳಕರ, ಡಾ. ಹಿತಾ ಕೂಡ ಸಾಥ್ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದ ಸಹೋದರರಿಗಾಗಿ ರಕ್ಷಾ ಬಂಧನವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಕೊರೊನಾ ವರ್ಷ ಬಿಟ್ಟರೆ, ಇನ್ನುಳಿದ ಎಲ್ಲ ವರ್ಷಗಳಲ್ಲೂ ಕ್ಷೇತ್ರದ ನನ್ನೆಲ್ಲ ಸಹೋದರರಿಗೆ ರಾಖಿ ಕಟ್ಟಿ ಹಬ್ಬ ಆಚರಿಸಲಾಗುತ್ತಿದೆ ಎಂದರು.
ಸಚಿವರಾದ ಬಳಿಕ ಇದು ಎರಡನೇ ಬಾರಿಗೆ ಕ್ಷೇತ್ರದಲ್ಲಿ ರಕ್ಷಾ ಬಂಧನ ಆಚರಿಸಲಾಗುತ್ತಿದೆ. ಬಿಡುವಿಲ್ಲದ ಸಂದರ್ಭವಾದರೂ ಇಂತಹ ವಿಶೇಷತೆ, ಜನರ ಪ್ರೀತಿ-ವಿಶ್ವಾಸ ಮರೆಯಲಾಗದು. ಇದರಿಂದ ಜನತೆಯೊಂದಿ ನಮ್ಮ ಸಂಬಂಧಗಳೂ ಮತ್ತಷ್ಟು ವೃದ್ಧಿಯಾಗುತ್ತದೆ ಎಂದು ಸಚಿವೆ ಹೆಬ್ಬಾಳಕರ ಹೇಳಿದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಇದ್ದರು.ರಕ್ಷಾ ಬಂಧನದಂತಹ ಹಬ್ಬ ಹರಿದಿನಗಳು ಸಂಸ್ಕಾರ, ಸಂಸ್ಕೃತಿಯನ್ನು ಇನ್ನು ಮುಂದೆಯೂ ತೆಗೆದುಕೊಂಡು ಹೋಗುವುದಕ್ಕೆ ಇದೊಂದು ಸುದೈವ. ನಾಡಿಗೆ ಒಳ್ಳೆಯ ಮಳೆ, ಬೆಳೆ ಬಂದು ಎಲ್ಲೆಡೆ ಸುಖ, ಸಮೃದ್ಧಿ ತುಂಬಿ ತುಳಕಲಿ. ನನ್ನೆಲ್ಲ ಸಹೋದರರಿಗೆ ದೇವರು ಒಳ್ಳೆಯ ಆಯಸ್ಸು, ಆರೋಗ್ಯ ಕರುಣಿಸಲಿ- ಲಕ್ಷ್ಮೀ ಹೆಬ್ಬಾಳಕರ, ಸಚಿವೆ