ಸಾರಾಂಶ
ಫಕ್ರುದ್ದೀನ್ ಎಂ ಎನ್
ನವಲಗುಂದ: ಉತ್ತಮ ಮಳೆಯಾಗಿದೆ, ಬಿತ್ತನೆ ಕಾರ್ಯವೂ ಪೂರ್ಣಗೊಂಡಿದೆ. ಉತ್ತಮ ಇಳುವರಿ ಪಡೆಯುವ ನಿರೀಕ್ಷೆಯಲ್ಲಿರುವ ತಾಲೂಕಿನ ರೈತರಿಗೆ ರಸಗೊಬ್ಬರ ಸಿಗದೆ ಪರದಾಡುವ ಸ್ಥಿತಿ ಎದುರಾಗಿದೆ.ರೈತರು ಜಮೀನುಗಳಲ್ಲಿ ಉಳುಮೆ ಮಾಡುವುದರ ಬದಲು ಒಂದೊಂದು ಚೀಲ ಗೊಬ್ಬರಕ್ಕಾಗಿ ರಸಗೊಬ್ಬರ ಅಂಗಡಿಗಳ ಮುಂದೆ ದಿನವಿಡೀ ಸರದಿ ನಿಲ್ಲುವ ಸ್ಥಿತಿ ಬಂದೋದಗಿದ್ದು, ಮಾತ್ರವಲ್ಲದೆ ಸರ್ಕಾರದ ವಿರುದ್ಧ ಅನ್ನದಾತರು ಹಿಡಿಶಾಪ ಹಾಕುತ್ತಿದ್ದಾರೆ.
ತಾಲೂಕಿನಾದ್ಯಂತ ಯೂರಿಯಾ ಗೊಬ್ಬರಕ್ಕಾಗಿ ಸಾವಿರಾರು ರೈತರು ಪರದಾಡುತ್ತಿದ್ದಾರೆ. ಆದರೆ, ಅವರಿಗೆ ಸಕಾಲಕ್ಕೆ ರಸಗೊಬ್ಬರ ದೊರೆಯುತ್ತಿಲ್ಲ. ಕಾಳಸಂತೆಯಲ್ಲಿ ಬೆರಳೆಣಿಕೆಯ ರೈತರಿಗೆ ದುಬಾರಿ ಬೆಲೆಯಲ್ಲಿ ಯೂರಿಯಾ ಮಾರಾಟ ಮಾಡಲಾಗುತ್ತಿದೆ ಎನ್ನುವ ಆಪಾದನೆ ಎಲ್ಲೆಡೆ ಕೇಳಿ ಬಂದಿದೆ.ಮುಂಗಾರು ಹಂಗಾಮಿನ ಮಳೆ ಜಿಟಿಜಿಟಿ ಸುರಿಯುತ್ತಿದೆ. ರೈತರ ಬೆಳೆಗಳೂ ನಳನಳಿಸುತ್ತಿವೆ. ಈ ವೇಳೆಗೆ ಯೂರಿಯಾ ಅಗತ್ಯವಿದೆ. ಸಕಾಲದಲ್ಲಿ ಆ ಬೆಳೆಗೆ ಗೊಬ್ಬರ ಕೊಡಬೇಕು. ಆದರೆ ಎಲ್ಲಿಯೂ ಮಾರುಕಟ್ಟೆಯಲ್ಲಿ ದೊರೆಯುತ್ತಿಲ್ಲ.
ಅಳಲು, ಆತಂಕ, ಆಕ್ರೋಶ: ಪ್ರತಿ ರೈತನಿಂದಲೂ ಆಧಾರ್ ಕಾರ್ಡ್ ಪಡೆದು ಬಯೋಮೆಟ್ರಿಕ್ ಮಷಿನ್‌ನಲ್ಲಿ ಹೆಬ್ಬೆಟ್ಟು ಗುರುತು ಪಡೆದು ಒಬ್ಬರಿಗೆ ಕೇವಲ 45 ಕೇಜಿಯ ಎರಡು ಬ್ಯಾಗ್ ಯೂರಿಯಾ ಮಾತ್ರ ವಿತರಣೆ ಮಾಡಲಾಗುತ್ತಿದೆ. ಒಂದು ಸಲ ಎರಡು ಬ್ಯಾಗ್ ಪಡೆದರೆ, ಅದೇ ರೈತ ಮತ್ತೆ ಯೂರಿಯಾ ಪಡೆಯಲು ಅಸಾಧ್ಯ ಎಂಬಂತಾಗಿದೆ.ರೈತರೊಂದಿಗೆ ಬೀದಿಗಿಳಿದು ಹೋರಾಟಕ್ಕೆ ಧ್ವನಿಗೂಡಿಸಬೇಕಾಗಿರುವ ಬಿಜೆಪಿಯವರು ಪತ್ರಿಕಾ ಪ್ರಕಟಣೆಗೆ ಮೀಸಲಾದಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
2447 ಟನ್ ಬೇಡಿಕೆ ಇತ್ತು. ಈವರೆಗೂ 2720 ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಿದೆ. ತಾಲೂಕಿನಲ್ಲಿ ಮಳೆಯಿಂದ ಹೆಸರು ಬೆಳೆ ಹಾನಿಯಾಗಿದ್ದರಿಂದ 15 ಸಾವಿರ ಹೆಕ್ಟರ್ ಮೆಕ್ಕೆಜೋಳ ಪ್ರತಿ ಬಾರಿಗಿಂತ ಹೆಚ್ಚಿಗೆ ಬಿತ್ತನೆಯಾಗಿದ್ದು ಈ ಸಮಸ್ಯೆಯಾಗಿದೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಿದ್ದಾರೆ.ತಾಲೂಕಿಗೆ ಸದ್ಯದಲ್ಲೇ 200 ಟನ್ ಯೂರಿಯಾ ಗೊಬ್ಬರ ಬರುವ ನಿರೀಕ್ಷೆ ಇದೆ. ಅದನ್ನು ಸೊಸೈಟಿ ಮುಖಾಂತರ ರೈತರಿಗೆ ನೀಡಲಾಗುವುದು. ರೈತರು ನ್ಯಾನೋ ಯೂರಿಯಾ ಗೊಬ್ಬರವನ್ನು ತಾವು ಬೆಳೆದಂತಹ ಬೆಳೆಗಳಿಗೆ ಸಿಂಪರಣೆ ಮಾಡುವುದರಿಂದ ಉತ್ತಮ ಇಳುವರಿ ತೆಗೆಯಬಹುದು ಎಂದು ನವಲಗುಂದದ ಸಹಾಯಕ ಕೃಷಿ ನಿರ್ದೇಶಕ ರವೀಂದ್ರಗೌಡ ಪಾಟೀಲ ಹೇಳಿದರು.ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಬಿತ್ತನೆ ಬೀಜ, ರಸಗೊಬ್ಬರಕ್ಕೂ ಕೃತಕ ಅಭಾವ ಸೃಷ್ಟಿಸುತ್ತಾರೆ. ರಸಗೊಬ್ಬರ ಸಂಗ್ರಹಕ್ಕೆ ಕ್ಷೇತ್ರದ ಜನಸೇವಕರಾಗಲಿ, ಅಧಿಕಾರಿಗಳಾಗಲಿ ಪೂರ್ವಸಿದ್ಧತೆ ಮಾಡಿಕೊಂಡಿಲ್ಲ. ಎಷ್ಟು ಗೊಬ್ಬರದ ಅಗತ್ಯವಿದೆ ಎಂಬ ಮಾಹಿತಿಯೇ ಇಲ್ಲ. ಲೆಕ್ಕಾಚಾರ ಇಲ್ಲದೇ ರೈತರಿಗೆ ಆತಂಕದ ಸ್ಥಿತಿ ಉಂಟಾಗಿದೆ ಎಂದು ಬಿಜೆಪಿ ಮುಖಂಡ ದೇವರಾಜ ದಾಡಿಭಾವಿ ಹೇಳಿದರು.