ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವಂತೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘವು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಮೇ 30ರಂದು ಬೆಳಗ್ಗೆ 10.30 ಗಂಟೆಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಆವರಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಜಾಥಾ ಹಮ್ಮಿಕೊಂಡಿದೆ ಎಂದು ಸಂಚಾರಿ ಪೀಠ ಹೋರಾಟ ಸಮಿತಿಯ ಗೌರವಾಧ್ಯಕ್ಷ ಕೆ.ಬಸಪ್ಪ ಗೌಡ ತಿಳಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 11 ದಿನಗಳಿಂದ ಜಿಲ್ಲಾ ವಕೀಲರ ಸಂಘ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗಾಗಿ ಧರಣಿ ಸತ್ಯಾಗ್ರಹ ನಡೆಸುತ್ತ ಬಂದಿದ್ದು, ಈಗಾಗಲೇ ನಗರದ ವಿವಿಧ ಸಂಘಟನೆಗಳು, ಮಠಾಧೀಶರು ಸಕ್ರಿಯವಾಗಿ ಇದರಲ್ಲಿ ಪಾಲ್ಗೊಂಡು ಸಂಪೂರ್ಣ ಬೆಂಬಲ ಸೂಚಿಸುತ್ತ ಬಂದಿದ್ದಾರೆ. ಆದಾಗ್ಯೂ ಈ ಹೋರಾಟ ಇನ್ನಷ್ಟು ಪರಿಣಾಮಕಾರಿಯಾಗಿ ರಾಜ್ಯ ಸರ್ಕಾರ, ಹೈಕೋರ್ಟ್ ಮುಖ್ಯ ನ್ಯಾಯಾಧೀರಶರನ್ನು ತಲುಪಲು ಈ ಬೃಹತ್ ಕಾಲ್ನಡಿಗೆ ಜಾಥಾ ಸಂಘಟಿಸಲಾಗಿದೆ ಎಂದರು.
ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಎಲ್ಲ ರೀತಿಯಿಂದ ಸೌಲಭ್ಯಗಳನ್ನು ಹೊಂದಿರುವ ಮಧ್ಯ ಕರ್ನಾಟಕದ ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಹೆಚ್ಚು ಸಂಖ್ಯೆಯಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ, ವಕೀಲರ ಸಂಖ್ಯೆ, ಕಕ್ಷಿದಾರರ ಸಂಖ್ಯೆ ಗಮನಿಸಿದರೆ ಪೀಠ ಸ್ಥಾಪನೆಗೆ ಮಂಗಳೂರಿಗಿಂತ ಶಿವಮೊಗ್ಗವೇ ಪ್ರಶಸ್ತ ಸ್ಥಳವಾಗಿದೆ ಎಂದ ಅವರು, ಒಂದು ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸಲು ನಾಲ್ಕು ನ್ಯಾಯಾಧೀಶರಿಗೆ ಪ್ರತಿ ನಿತ್ಯ ಕಾರ್ಯ ನಿರ್ವಹಿಸಲು ಬೇಕಾದಷ್ಟು ಪ್ರಕರಣಗಳು ಇರಬೇಕು. ಕನಿಷ್ಟ 4-5 ಜಿಲ್ಲೆಗಳನ್ನೊಳಗೊಂಡಿರಬೇಕು ಎಂಬುದು ಸೇರಿದಂತೆ ನ್ಯಾ. ಜಸ್ವಂತ್ ಸಿಂಗ್ ವರದಿಯಲ್ಲಿ ಮೂರ್ನಾಲ್ಕು ಸೂತ್ರಗಳನ್ನು, ಮಾನದಂಡಗಳಲ್ಲಿ ಹೇಳಲಾಗಿದೆ. ಆ ವರದಿಯ ಪರೀಕ್ಷೆಯಲ್ಲಿ ಯಾರು ಉತ್ತೀರ್ಣರಾಗುತ್ತಾರೋ ಆ ಭಾಗದಲ್ಲಿ ಪೀಠ ಸ್ಥಾಪನೆಗೆ ತಮ್ಮ ಅಭ್ಯಂತರವಿಲ್ಲ ಎಂದರು.ಸಾಮಾನ್ಯವಾಗಿ ರಾಜ್ಯಕ್ಕೆ ಎರಡೇ ನ್ಯಾಯ ಪೀಠ ಕೊಡಬೇಕೆಂದಿದೆ. ಸಂಚಾರಿ ಪೀಠದ ಸ್ಥಾಪನೆಯಲ್ಲಿ ಕೇಂದ್ರ ಸರ್ಕಾರದ ಪಾತ್ರ ಏನೂ ಇಲ್ಲ. ಆದರೆ ನೆರೆಯ ಮಹಾರಾಷ್ಟ್ರದಲ್ಲಿ ಮೂರು ಸಂಚಾರಿ ಪೀಠಗಳನ್ನು ಸ್ಥಾಪಿಸಲಾಗಿದೆ. ಜನರಿಗೆ ಹತ್ತಿರವಾಗುವಂತೆ ನ್ಯಾಯಾಲಯ ಸ್ಥಾಪನೆ ಅಗತ್ಯ ಮನಗಂಡು 2008ರಲ್ಲಿ ಧಾರವಾಡಕ್ಕೆ ಒಂದು ನ್ಯಾಯ ಪೀಠ ಮಂಜೂರು ಮಾಡಲಾಯಿತು. ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಮಂತ್ರಿಗಳಾಗಿದ್ದರ ಪರಿಣಾಮ ಅವರ ಪ್ರಭಾವದಿಂದ ಕಲ್ಯಾಣ ಕರ್ನಾಟಕ್ಕೆ ಅನುಕೂಲವಾಗಲೆಂದು ಕಲಬುರ್ಗಿಯಲ್ಲಿ ಇನ್ನೊಂದು ನ್ಯಾಯ ಪೀಠ ಸ್ಥಾಪನೆಯಾಯಿತು ಎಂದು ವಿವರಿಸಿದರು.
ಮಂಗಳೂರಿನಲ್ಲಿ ಪೀಠ ಸ್ಥಾಪನೆ ಪ್ರಸ್ತಾಪದ ಸಂದರ್ಭದಲ್ಲಿ ಶಿವಮೊಗ್ಗದವರ ಅಭಿಪ್ರಾಯ ಕೇಳಲೇ ಇಲ್ಲ. ಅಲ್ಲಿನ ರಾಜಕೀಯ ಪ್ರಭಾವದಿಂದಾಗಿ ಮುಖ್ಯಮಂತ್ರಿಗಳು ಮಂಗಳೂರಿನಲ್ಲಿ ಪೀಠ ಸ್ಥಾಪನೆಗೆ ಶಿಪಾರಸು ಶಿವಮೊಗ್ಗವನ್ನೂ ಅದರಲ್ಲಿ ಸೇರಿಸಿದ್ದಾರೆ. ಒಂದು ವೇಳೆ ಶಿಮೊಗ್ಗವನ್ನು ಅಲ್ಲಿಂದ ಕೈಬಿಟ್ಟರೆ ಕೇವಲ ಉಡುಪಿ ಮತ್ತು ದಕ್ಷಿಣ ಕನ್ನಡ ಈ ಎರಡೇ ಜಿಲ್ಲೆಗಳಿಗೆ ಸಂಚಾರಿ ಪೀಠ ಸ್ಥಾಪನೆಯಾದಂತಾಗುತ್ತದೆ. ಹೀಗಾದರೆ ರಾಜ್ಯದಲ್ಲಿ ೧೫ ಸಂಚಾರಿ ಪೀಠ ಸ್ಥಾಪಿಸಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಪೀಠ ಸ್ಥಾಪನೆಗೂ ಮುನ್ನ ಸಾರ್ವಜನಿಕರ ಅಹವಾಲು ಸ್ವೀಕರಿಸಬೆಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಬಿ.ಗೋಪಿನಾಥ್, ಕೆ.ವಿ.ವಸಂತಕುಮಾರ್, ಹಾಲಸ್ವಾಮಿ, ಕೆ.ಪಿ.ಶ್ರೀಪಾಲ್, ಎಂ.ಗುರುಮೂರ್ತಿ, ಶಿವಬಸಪ್ಪ, ಸ್ವಾತಿ, ಲಕ್ಷ್ಮ್ಛೀಕಾಂತ್ ಚಿಮಣೂರು, ರಾಜಪ್ಪ, ಶಿವಮೂರ್ತಿ, ಪ್ರದೀಪ್ ಮತ್ತಿತರರು ಇದ್ದರು.
ಮಂಗಳೂರು ಪೀಠಕ್ಕೆ ಸೇರಿಸುವುದು ಅನ್ಯಾಯ: ರಾಘವೇಂದ್ರಸ್ವಾಮಿಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರಸ್ವಾಮಿ ಮಾತನಾಡಿ, ಮೇ 30 ರಂದು ಜಾಥಾಕ್ಕೆ ಆಗಮಿಸುವ ಸಂಘಟನೆಗಳು ತಮ್ಮ ಸಂಘದ ಹೆಸರಿನ ಲೆಟರ್ ಹೆಡ್‌ನಲ್ಲಿ ಹೋರಾಟಕ್ಕೆ ಬೆಂಬಲಿಸುತ್ತೇವೆ ಎಂದು ಮೂರು ಪ್ರತಿಯಲ್ಲಿ ಮನವಿ ತಯಾರಿಸಿಕೊಂಡು ಬಂದು ತಮಗೆ ನೀಡಬೇಕು. ಒಂದು ಮುಖ್ಯಮಂತ್ರಿಗಳ ಹೆಸರಿನಲ್ಲಿ, ಇನ್ನೊಂದು ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಹೆಸರಿನಲ್ಲಿ ಮತ್ತೊಂದು ರಾಜ್ಯಪಾಲರ ಹೆಸರಿನಲ್ಲಿರಬೇಕು. ಅಲ್ಲದೆ ತಮ್ಮ ತಮ್ಮ ಸಂಘಟನೆಗಳ ಬ್ಯಾನರ್‌ಗಳನ್ನೂ ತರಬೇಕು. ಸಂಚಾರಿ ಪೀಠ ಸ್ಥಾಪನೆಗೆ ರಾಜಕೀಯ ಇಚ್ಚಾಶಕ್ತಿಯೂ ಬೇಕು. ಮಂಗಳೂರು ಪೀಠಕ್ಕೆ ಸೇರಿಸುವಂತೆ ನಾವು ಒಂದು ಮನವಿಯನ್ನೂ ಕೊಟ್ಟಿರಲಿಲ್ಲ. ಆದರೂ ಶಿವಮೊಗ್ಗವನ್ನು ಸೇರಿಸಿಕೊಳ್ಳಲಾಗಿದೆ. ಇದು ಅನ್ಯಾಯ ಎಂದು ದೂರಿದರು.
ಶಿವಮೊಗ್ಗದಲ್ಲಿ ಪೀಠ ಸ್ಥಾಪನೆಗೆ ಈಗಾಗಲೇ ಚಿಕ್ಕಮಗಳೂರು ಬಾರ್ ಅಸೋಸಿಯೇಷನ್ ತನ್ನ ಒಪ್ಪಿಗೆ ನೀಡಿದೆ. ಕೋರ್ಟ್‌ಗೆ ಈಗ ರಜಾ ಕಾಲ ಆಗಿದ್ದರಿಂದ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಬಾರ್ ಅಸೋಸಿಯೇಷನ್ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಮುಂದಿನ ವಾರ ಅವರನ್ನು ಭೇಟಿ ಮಾಡಿ ವಿಷಯ ಮನವರಿಕೆ ಮಾಡಿಕೊಡುತ್ತೇವೆ. ಅವರು ನಮಗೆ ಬೆಂಬಲ ನೀಡುತ್ತಾರೆಂಬ ವಿಶ್ವಾಸವಿದೆ ಎಂದರು.