ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭಾವನೆ ಇದ್ದಾಗ ಮಾತ್ರ ಬದುಕು ಇರಲು ಸಾಧ್ಯ. ಭಾವನೆ ಇದ್ದಿದ್ದಕ್ಕೆ ರಾಮಮಂದಿರ ನಿರ್ಮಾಣ ಆಯ್ತು. ಅದರಿಂದ ಬದುಕು ಕಟ್ಟುವ ಕೆಲಸ ಆಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಂಸದ ಬಿ.ವೈ.ರಾಘವೇಂದ್ರ ತಿರುಗೇಟು ನೀಡಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭಾವನೆ ಇದ್ದಿದ್ದಕ್ಕೆ ಆರ್ಟಿಕಲ್ 370 ರದ್ದಾಗಿದ್ದಕ್ಕೆ ತಾಯಂದಿರಿಗೆ ನಿಜವಾದ ಸ್ವಾತಂತ್ರ್ಯ ಕೊಡುವ ಕೆಲಸ ಆಗಿದೆ. ಭಾವನೆ ಇಲ್ಲ ಅಂದ್ರೆ ಮನುಷ್ಯನೇ ಅಲ್ಲ. ಭಾವನೆ ಇದ್ದಾಗ ಮಾತ್ರ ಮನುಷ್ಯನಾಗಲು ಸಾಧ್ಯ. ಭಾವನೆ ಇಲ್ಲದ ಕಾಂಗ್ರೆಸ್ ಪಕ್ಷ ಕೇವಲ ಬದುಕು ನೋಡುತ್ತಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‌ನವರಿಗೆ ಭಾವನೆ, ಬದುಕು ಎರಡೂ ಇಲ್ಲ. ಕಾಂಗ್ರೆಸ್ ನವರು ಬಡತನ ಪ್ರೀತಿ ಮಾಡಿದರು. ಬಡವರನ್ನು ಪ್ರೀತಿ ಮಾಡುವ ಕೆಲಸ ಮಾಡಲಿಲ್ಲ. ಬಡತನ ಪ್ರೀತಿ ಮಾಡಿದ್ದರೆ ಭಾವನೆ ಇದೆ ಅಂತಾ ಹೇಳಬಹುದಿತ್ತು. ಬಡವರು ಬಡವರಾಗಿಯೇ ಇರಬೇಕು. ನಾವು ಹೇಳಿದ ಜಾಗದಲ್ಲಿ ಹೆಬ್ಬೆಟ್ಟು ಹೊತ್ತಬೇಕು, ನಾವು ಆಡಳಿತ ಮಾಡಬೇಕು ಅಂಬೇಡ್ಕರ್ ಭಾವಚಿತ್ರ ಇಟ್ಟುಕೊಂಡು ದೇಶವನ್ನು ನಡೆಸಿಕೊಂಡು. ಭಾವನೆ ಇಲ್ಲದ, ಬದುಕಿನ ಬಗ್ಗೆ ಗೊತ್ತಿಲ್ಲದ ಕಾಂಗ್ರೆಸ್ ಪಕ್ಷಕ್ಕೆ, ಇಂದಿರಾಗಾಂಧಿ ಕಾಲದಲ್ಲಿ 2/3 ಮೆಜಾರಿಟಿ ಇದ್ದ ಕಾಂಗ್ರೆಸ್ ಪಕ್ಷಕ್ಕೆ ಈಗ ಲೋಕಸಭೆಯಲ್ಲಿ ವಿಪಕ್ಷ ಸ್ಥಾನ ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದಿದೆ ಎಂದು ಹರಿಹಾಯ್ದರು.ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಗೌರವ ಇದೆ. ಶಿವಮೊಗ್ಗದ ಸಮಸ್ಯೆ ಬಗ್ಗೆ ಅವರಿಗೆ ಗೊತ್ತಿಲ್ಲ. ಯಾರೋ ಪಕ್ಕದವರು ಹೇಳಿಕೊಟ್ಟಿದ್ದನ್ನು ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.
ದಿನದಿಂದ ದಿನಕ್ಕೆ ಒಳ್ಳೆಯ ವಾತಾವರಣ ಸಿಗುತ್ತಿದೆ. ಏ.18 ರಂದು ನಾಮಪತ್ರ ಸಲ್ಲಿಕೆ ಮಾಡ್ತೇನೆ. ನಾಮಪತ್ರ ಸಲ್ಲಿಸುವ ದಿನ ರಾಘವೇಂದ್ರಸ್ವಾಮಿ ಮಠದಲ್ಲಿ ದರ್ಶನ ಮಾಡಿ, ರಾಮಣ್ಣಶ್ರೇಷ್ಠಿ ಪಾರ್ಕ್ ನಿಂದ ಮೆರವಣಿಗೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಸುವ ಮೊದಲು ಮುಗುಳಗೆರೆಯ ಬೀರಲಿಂಗೇಶ್ವರ ದೇವಸ್ಥಾನ ದಲ್ಲಿ ಪೂಜೆ ಸಲ್ಲಿಕೆ ನಮ್ಮ ಕುಟುಂಬದಲ್ಲಿ ಹಿಂದಿನಿಂದಲೂ ಈ ಪದ್ಧತಿ ಇದೆ. ಈಗಾಗಿ ನಾಳೆ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಎಂಪಿಎಂಗೆ ಕೊನೆಯ ಮೊಳೆ ಹೊಡೆದಿದ್ದು ಇದೇ ಕಾಂಗ್ರೆಸ್ಭದ್ರಾವತಿಯ ಎಂಪಿಎಂ ಕಾರ್ಖಾನೆಗೆ ಕೊನೆ ಮಳೆ ಹೊಡೆದದ್ದು ಕಾಂಗ್ರೆಸ್ ಪಕ್ಷ. ಈಗ ನನ್ನ ಕಡೆ ಬೆರಳು ಮಾಡಿ ತೋರಿಸುತ್ತಿದ್ದಾರೆ. ನನಗೆ ಒಂದು ಬೆರಳು ತೋರಿಸಿದರೆ ನಾಲ್ಕು ಬೆರಳು ಅವರಿಗೆ ತೋರಿಸುತ್ತದೆ. ಅರಣ್ಯ ಹಕ್ಕು ಸಮಿತಿ ಜಾರಿಗೆ ತಂದಿದ್ದು, ಕಾಂಗ್ರೆಸ್‌ನ ಪುಣ್ಯಾತ್ಮರು. ಮನಮೋಹನ್ ಸಿಂಗ್ ಪ್ರಧಾನ ಮಂತ್ರಿ ಆಗಿದ್ದಾಗ ಅರಣ್ಯ ಹಕ್ಕು ಸಮಸ್ಯೆ ಬಗೆಹರಿಸಬಹುದಿತ್ತು. ಶರಾವತಿ ಮುಳುಗಡೆ ಸಂತ್ರಸ್ತರಿಗೆ 1980ರವರೆಗೆ ಹಕ್ಕುಪತ್ರ ಕೊಡುವ ಅವಕಾಶ ಇದ್ದರೂ ಮಾಡುವ ಪ್ರಯತ್ನ ಮಾಡಲಿಲ್ಲ. ರಾಜ್ಯ ಸರ್ಕಾರಕ್ಕೆ ಈ ಸಮಸ್ಯೆ ಬಗೆಹರಿಸುವ ಅವಕಾಶ ಇತ್ತು. ಕಾಂಗ್ರೆಸ್ ನಾಯಕರೇ ರಾಜ್ಯದಲ್ಲಿ, ಶಿವಮೊಗ್ಗದಲ್ಲಿ ಅಧಿಕಾರದಲ್ಲಿ ಇದ್ದರು.
ಬಿ.ವೈ.ಆರ್ ಬೈಕ್ ರ‍್ಯಾಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಭದ್ರಾವತಿ ತಾಲೂಕಿನ ಬಿಆರ್‌ಪಿ ವ್ಯಾಪ್ತಿಯ ಹುಣಸೆಕಟ್ಟೆ ಜಂಕ್ಷನ್‌ನಿಂದ ಗ್ಯಾರೇಜ್ ಕ್ಯಾಂಪ್‌ವರೆಗೂ ಬೈಕ್ ರ‍್ಯಾಲಿ ನಡೆಸಲಾಯಿತು.ಸಂಜೆ ನಡೆದ ಬೈಕ್ ರ‍್ಯಾಲಿಯಲ್ಲಿ ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ ರಾಘವೇಂದ್ರ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ಸೇರಿದಂತೆ ಪ್ರಮುಖರು ಪಾಲ್ಗೊಂಡು ಗಮನ ಸೆಳೆದರು.ರ‍್ಯಾಲಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಹುಣಸೆಕಟ್ಟೆ ಜಂಕ್ಷನ್‌ನಲ್ಲಿ ಎರಡು ಪಕ್ಷಗಳ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸುವ ಮೂಲಕ ಬಿ.ವೈ ರಾಘವೇಂದ್ರ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು
ನಾಳೆ ರಾಘವೇಂದ್ರರಿಂದ ನಾಮಪತ್ರ: ಜೆಡಿಎಸ್ ಕಾರ್ಯಕರ್ತರ ಭಾಗಿಗೆ ಕರೆಶಿವಮೊಗ್ಗ: ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಏ.18ರಂದು ನಾಮಪತ್ರ ಸಲ್ಲಿಸಲಿದ್ದು, ಅಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ. ಜೆಡಿಎಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಹಾಗೂ ಕೋರ್ ಸಮಿಟಿ ಸದಸ್ಯ ಕೆ.ಬಿ.ಪ್ರಸನ್ನಕುಮಾರ್ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಎಚ್.ಡಿ.ಕುಮಾರಸ್ವಾಮಿಯವರು ಕೇವಲ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಮಾತ್ರ ಬಂದು ಹೋಗದೆ, ಚುನಾವಣೆಯ ಮತ ಪ್ರಚಾರದ ಸಮಯದಲ್ಲೂ ಕೂಡ ಇಡೀ ಜಿಲ್ಲೆಯಲ್ಲಿ ಭಾಗವಹಿಸಿ ಮತ ಯಾಚಿಸಿ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಲಿದ್ದಾರೆ ಎಂದರು.ಮಹಿಳೆಯರಿಗೆ ಕುಮಾರಸ್ವಾಮಿಯವರು ಅವಮಾನ ಮಾಡಿಲ್ಲ. ಅವರು ಹೇಳಿದ ಅರ್ಥವೇ ಬೇರೆ, ಈಗಾಗಲೇ ಅದಕ್ಕೆ ಕ್ಷಮೆ ಕೂಡ ಕೇಳಿದ್ದಾರೆ. ಇದು ಮುಗಿದ ಅಧ್ಯಾಯ, ಕಾಂಗ್ರೆಸ್‍ನವರೇ ಮಾತನಾಡಲು ಬೇರೆ ವಿಷಯವಿಲ್ಲ ಅಷ್ಟೇ ಇನ್ನೂ ಈಶ್ವರಪ್ಪನವರು ಸ್ಪರ್ಧೆ ಮಾಡುವುದರಿಂದ ಮೈತ್ರಿ ಪಕ್ಷಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಮತ್ತು ಇನ್ನೂ ಸಮಯವಿರುವುದರಿಂದ ಅವರು ನಾಮಪತ್ರವನ್ನು ವಾಪಾಸ್ಸು ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಪಕ್ಷದ ಜಿಲ್ಲೆಯ ಎಲ್ಲಾ ಮುಖಂಡರು, ಬೂತ್ ಮಟ್ಟದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ಹಿಂದೆ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಇದ್ದ ಜನ ಸಂಖ್ಯೆಗಿಂತಲೂ ಅತಿ ಹೆಚ್ಚಾಗಿ ನಮ್ಮ ಪಕ್ಷದ ಮತ್ತು ಮೈತ್ರಿ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದು, ಇದೊಂದು ಅಭೂತಪೂರ್ವ ಸನ್ನಿವೇಶಕ್ಕೆ ಕಾರಣವಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಮಕೃಷ್ಣ, ದೀಪಕ್ ಸಿಂಗ್, ಗೀತಾ ಸತೀಶ್, ಎಸ್.ವಿ.ರಾಜಮ್ಮ, ತ್ಯಾಗರಾಜ್, ನರಸಿಂಹಮೂರ್ತಿ ಗಂಧದಮನೆ, ಸಿದ್ದಪ್ಪ, ರಘು, ಸಂಗಯ್ಯ, ಅಬ್ದುಲ್ ವಾಜೀದ್, ವಿನಯ್, ರಾಚಯ್ಯ, ಪುಷ್ಪ, ಆಯನೂರು ಶಿವಾನಾಯಕ, ಸಂಜಯ್ ಕಶ್ಯಪ್, ಪ್ರಭು ಇನ್ನಿತರರು ಉಪಸ್ಥಿತರಿದ್ದರು.