ಬ್ಯಾಡಗಿಯಲ್ಲಿ ಹಿಂದೂಪರ ಸಂಘಟನೆಗಳಿಂದ ರಾಮನವಮಿ

| Published : Apr 18 2024, 02:25 AM IST

ಸಾರಾಂಶ

ಬ್ಯಾಡಗಿ ಪಟ್ಟಣದಲ್ಲಿ ಬುಧವಾರ ಶ್ರೀ ರಾಮನವಮಿಯನ್ನು ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.

ಬ್ಯಾಡಗಿ: ಪಟ್ಟಣದಲ್ಲಿ ಬುಧವಾರ ಶ್ರೀ ರಾಮನವಮಿಯನ್ನು ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.

ಪಟ್ಟಣದ ಚಾವಡಿ ರಸ್ತೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ಕದರಮಂಡಲಗಿ ಗ್ರಾಮದ ಶ್ರೀ ಕಾಂತೇಶ ದೇವಸ್ಥಾನ ಸಣ್ಣ ಆಂಜನೇಯ ದೇವಸ್ಥಾನ ಸೇರಿದಂತೆ ತಾಲೂಕಿನ ವಿವಿಧ ಆಂಜನೇಯ ದೇವಸ್ಥಾನಗಳಲ್ಲಿ ರಾಮನವಮಿ ಅಂಗವಾಗಿ ವಿಶೇಷ ಪೂಜೆ ಅಭಿಷೇಕ, ಸೇರಿದಂತೆ ವಿವಿಧ ಪೂಜಾ ಕೈಂಕರ‍್ಯಗಳನ್ನು ನಡೆಸಲಾಯಿತು.

ಪಟ್ಟಣದ ಚಾವಡಿ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಹಿಂದುಪರ ಸಂಘಟನೆಗಳು ಬೃಹತ್ ರಾಮನ ಮೂರ್ತಿ ನಿರ್ಮಿಸಿ ಅದಕ್ಕೆ ಪೂಜೆಯನ್ನು ನೇರವೇರಿಸಿದರು. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ದೇವರ ದರ್ಶನ ಪಡೆದರು, ಬಳಿಕ ಮಾತನಾಡಿದ ಅವರು, ಶ್ರೀರಾಮಚಂದ್ರ ದೇಶ ಮಾತ್ರವಲ್ಲದೇ ಇಡೀ ಮಾನವ ಕುಲಕ್ಕೆ ಆದರ್ಶ ಪುರುಷ. ಅಂತಹ ಮಹಾನ್ ಪುರುಷನ ಆದರ್ಶ ಜೀವನ ಎಲ್ಲರಿಗೂ ಮಾದರಿ ಎಂದರು. ಈ ವೇಳೆ ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ, ಗಣೇಶ ಅಚಕಲಕರ, ನಂದೀಶಗೌಡ್ರ, ಪ್ರದೀಪ ಜಾಧವ, ಮಂಜುನಾಥ ಜಾಧವ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಹಾವೇರಿಯಲ್ಲಿ ಶ್ರದ್ಧಾ ಭಕ್ತಿಯಿಂದ ರಾಮನವಮಿ ಆಚರಣೆ: ಶ್ರೀರಾಮ ನವಮಿ ನಿಮಿತ್ತ ಬುಧವಾರ ಹಾವೇರಿಯ ರಾಮ ಮಂದಿರದಲ್ಲಿ ತೊಟ್ಟಿಲೋತ್ಸವ, ಪಲ್ಲಕ್ಕಿ ಮೆರವಣಿಗೆ ಶ್ರದ್ಧಾ ಭಕ್ತಿಯೊಂದಿಗೆ ವೈಭವದಿಂದ ನಡೆಯಿತು.

ಬೆಳಗ್ಗೆಯಿಂದಲೇ ಶ್ರೀರಾಮ, ಸೀತೆ, ಲಕ್ಷ್ಮಣ, ಆಂಜನೇಯನ ಮೂರ್ತಿಗೆ ವಿಶೇಷ ಪೂಜೆ, ದರ್ಶನ, ಅಭಿಷೇಕ ನಡೆಯಿತು.ಹೂವುಗಳಿಂದ ವಿಶೇಷ ಅಲಂಕಾರ ಮಾಡಿದ್ದ ತೊಟ್ಟಿಲಲ್ಲಿ ರಾಮನ ಮೂರ್ತಿ ಇಟ್ಟು ಮಹಿಳೆಯರು ಜೋಗುಳ ಹಾಡಿ ತೊಟ್ಟಿಲೋತ್ಸವ ನೆರವೇರಿಸಿದರು.ಆಗಮಿಸಿದ್ದ ಭಕ್ತರು ತೊಟ್ಟಿಲು ತೂಗಿ ಭಕ್ತಿ ಸಮರ್ಪಿಸಿದರು. ರಾಮ ನವಮಿ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಕ್ತಾದಿಗಳು ಸರತಿಯಲ್ಲಿ ನಿಂತು ರಾಮನ ದರ್ಶನ ಪಡೆದರು. ವಿಶೇಷ ಪೂಜೆ ಸಲ್ಲಿಸಿದರು. ಬಂದ ಭಕ್ತರಿಗೆ ದೇವಸ್ಥಾನದ ವತಿಯಿಂದ ಪಾನಕ, ಕೋಸಂಬರಿ ವಿತರಿಸಲಾಯಿತು.