ಸಾರಾಂಶ
ತಾಲೂಕಿನಾದ್ಯಾಂತ ಶ್ರೀರಾಮನವಮಿ ಹಬ್ಬದ ಪ್ರಯುಕ್ತ ರಾಮ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭಕ್ತರ ದಂಡು ಆಗಮಿಸಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶ್ರೀರಾಮನವಮಿ ಹಬ್ಬ ಸಂತಸದಿಂದ ಆಚರಣೆ ಮಾಡಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ತಾಲೂಕಿನಾದ್ಯಾಂತ ಶ್ರೀರಾಮನವಮಿ ಹಬ್ಬದ ಪ್ರಯುಕ್ತ ರಾಮ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭಕ್ತರ ದಂಡು ಆಗಮಿಸಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶ್ರೀರಾಮನವಮಿ ಹಬ್ಬ ಸಂತಸದಿಂದ ಆಚರಣೆ ಮಾಡಿದರು.ಪಟ್ಟಣದ ಗುಂಡಾಂಜನೇಯ ಸ್ವಾಮಿ, ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ, ಕರಂಕೋಟೆಯ ದೊಡ್ಡಕಾಯಪ್ಪ ಸೇರಿದಂತೆ ಎಲ್ಲ ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ಪ್ರತಿವರ್ಷದಂತೆ ಶ್ರೀರಾಮನವಮಿ ಹಬ್ಬದ ಪ್ರಯುಕ್ತ ಗಂಗಾಪೂಜೆ, ಕ್ಷೀರಾಭೀಷೇಕ ಆಂಜನೇಯ ಸ್ವಾಮಿಗೆ ಮತ್ತು ಶ್ರೀರಾಮನ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.ಆಂಜನೇಯ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಧಾರ್ಮಿಕ ಪೂಜಾ ಕೈಕಾರ್ಯಗಳು ಸೇರಿದಂತೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪಾನಕ, ಮಜ್ಜಿಗೆ, ಹೆಸರುಬೆಳೆ ಅನ್ನ ಸಂತರ್ಪಣೆ ಕೂಡ ನಡೆದವು. ಕೊರಟಗೆರೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಾಮನ ಭಕ್ತರು ರಸ್ತೆ ಬದಿ ಹಾಗೂ ಅರಳಿಕಟ್ಟೆಗಳ ಮುಂದೆ ಪ್ರಭು ಶ್ರೀರಾಮನ ಪೋಟೋ ಇಟ್ಟು ಪೂಜೆ ಸಲ್ಲಿಸಿ ರಸ್ತೆಯಲ್ಲಿ ಸಂಚಾರ ಮಾಡುವವರಿಗೆ ಪಾನಕ, ಮಜ್ಜಿಗೆ, ಹೆಸರುಬೆಳೆ ನೀಡುತ್ತಿರುವುದು ಸಾಮಾನ್ಯವಾಗಿತ್ತು.ಗುಂಡಾಜನೇಯ ಸ್ವಾಮಿಯ ಪ್ರಧಾನ ಅರ್ಚಕ ಕಸ್ತೂರಿ ಹಾಗೂ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ಪ್ರಧಾನ ಆರ್ಚಕ ರಾಮಾಚಾರ್ ಮಾತನಾಡಿ, ಶ್ರೀರಾಮನವಮಿ ಹಬ್ಬವು ಶ್ರೀಗುಂಡಾಂಜನೇಯ ಸ್ವಾಮಿ ದೇವಾಲಯದಲ್ಲಿ ನೂರಾರು ಭಕ್ತರ ಸಹಕಾರದಿಂದ ಯಶಸ್ಸು ಕಂಡಿದೆ. ಪಟ್ಟಣದ ಪ್ರಮುಖ ರಾಜ ಬೀದಿಗಳಲ್ಲಿ ಶ್ರೀರಾಮನ ಉತ್ಸವ ಕಾರ್ಯಕ್ರಮ ನಡೆಯಿತು ಎಂದು ಹೇಳಿದರು.