ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ: ಜನಸೇವಾ ಮಕ್ಕಳ ಸಂಭ್ರಮ

| Published : Jan 23 2024, 01:49 AM IST

ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ: ಜನಸೇವಾ ಮಕ್ಕಳ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆ ರಾಮ ಮಂದಿರದ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಜನಸೇವಾ ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ರಾಮ, ಲಕ್ಷ್ಮಣ, ಸೀತೆ ಹಾಗೂ ಆಂಜನೇಯ ವೇಷಧಾರಿ ಮಕ್ಕಳಿಂದ ನಗರದಲ್ಲಿ ಸೋಮವಾರ ಭವ್ಯ ಮೆರವಣಿಗೆ ನಡೆಯಿತು.

ಬೀದರ್‌: ಅಯೋಧ್ಯೆ ರಾಮ ಮಂದಿರದ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಜನಸೇವಾ ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ರಾಮ, ಲಕ್ಷ್ಮಣ, ಸೀತೆ ಹಾಗೂ ಆಂಜನೇಯ ವೇಷಧಾರಿ ಮಕ್ಕಳಿಂದ ನಗರದಲ್ಲಿ ಸೋಮವಾರ ಭವ್ಯ ಮೆರವಣಿಗೆ ನಡೆಯಿತು.

ನೂರಾರು ಮಕ್ಕಳು ವೇಷ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ವಿಶೇಷವಾಗಿತ್ತು. ತಲೆ ಮೇಲೆ ಕಿರೀಟ, ಭುಜಕ್ಕೆ ಬಾಣ ಹಾಕಿಕೊಂಡು ಕೈಯಲ್ಲಿ ಬಿಲ್ಲು ಹಿಡಿದಿದ್ದ ರಾಮ ಲಕ್ಷ್ಮಣ, ಗಧೆ ಹಿಡಿದುಕೊಂಡಿದ್ದ ಹನುಮಂತ ಹಾಗೂ ಸೀತಾ ಮಾತೆಯ ಪಾತ್ರಧಾರಿಗಳು ಸಾರ್ವಜನಿಕರ ಗಮನ ಸೆಳೆದರು.

ಅಲಂಕೃತ ವಾಹನದ ಮೇಲೆ ಶ್ರೀರಾಮನ ಭಾವಚಿತ್ರ ಅಳವಡಿಸಲಾಗಿತ್ತು. ಮೆರವಣಿಗೆಯುದ್ದಕ್ಕೂ ಧ್ವನಿವರ್ಧಕದಲ್ಲಿ ರಾಮ ಗುಣಗಾನದ ಗೀತೆಗಳು ಕೇಳಿ ಬಂದವು. ಜೈ ಶ್ರೀರಾಮ, ಸೀತಾಪತಿ ರಾಮ ಭಗವಾನ ಕಿ ಜೈ, ಭಾರತ ಮಾತಾ ಕಿ ಜೈ ಎನ್ನುವ ಘೋಷಣೆಗಳು ಮೊಳಗಿದವು.

ಸಾರ್ವಜನಿಕರು ಪಾತ್ರಧಾರಿಗಳಿಗೆ ಹೂಮಾಲೆ ಹಾಕಿದರು. ಭುಜದ ಮೇಲೆ ಎತ್ತುಕೊಂಡು ಕುಣಿದು, ಸಂಭ್ರಮಿಸಿದರು. ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಮಾಧವನಗರದ ಹನುಮಾನ ಮಂದಿರದಿಂದ ಆರಂಭಗೊಂಡ ಮೆರವಣಿಗೆ ಪ್ರತಾಪನಗರ ಮಾರ್ಗವಾಗಿ ಜನಸೇವಾ ಶಾಲೆಗೆ ತಲುಪಿ ಸಮಾರೋಪಗೊಂಡಿತು.

ಪ್ರಮುಖರಾದ ವಿಶ್ವನಾಥ ಬಿರಾದಾರ, ಹಣಮಂತರಾವ್‌ ಮುಕ್ತೆದಾರ್‌, ಹಣಮಂತರಾವ್‌ ಮೈಲಾರೆ, ಶಿವಲಿಂಗಪ್ಪ ಜಲಾದೆ, ಮಂಜುನಾಥ ಬಿರಾದಾರ, ಬಾಬುರಾವ್‌ ಪಸರಗೆ, ಬಾಬರೆಡ್ಡಿ, ಜನಸೇವಾ ಪ್ರೌಢಶಾಲೆ ಮುಖ್ಯಶಿಕ್ಷಕ ರಾಹುಲ್‌, ಶಿಕ್ಷಕರಾದ ಅಮಿತ, ಸತೀಶಕುಮಾರ ಮೊದಲಾದವರು ಪಾಲ್ಗೊಂಡಿದ್ದರು.

ಜನಸೇವಾ ಶಾಲೆಯಲ್ಲಿ ಆಡಳಿತಾಧಿಕಾರಿ ಸೌಭಾಗ್ಯವತಿ ಅವರ ನೇತೃತ್ವದಲ್ಲಿ ಹೋಮ, ಹವನ, ದೀಪೋತ್ಸವ ನೆರವೇರಿದವು.