ಸಾರಾಂಶ
ಕೇಸರಿ ಬಣ್ಣದ ಬಟ್ಟೆ ಧರಿಸುವ ಯಂಕಾರೆಡ್ಡಿ ವಗರನಾಳ, ಮನೆಗೂ ಕೇಸರಿ ಬಣ್ಣ ಹಚ್ಚಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಗಳನ್ನು ಹಾಕಿ ಜೈ ಶ್ರೀರಾಮ್, ಜೈ ಹನುಮಾನ್ ಎಂಬ ಬರಹಗಳನ್ನು ಬರೆಯಿಸಿದ್ದಾರೆ. ದಿನನಿತ್ಯ ಶ್ರೀರಾಮಚಂದ್ರ, ಆಂಜನೇಯ ಸ್ತೋತ್ರಗಳನ್ನು ಪಠಿಸುತ್ತಾರೆ.
ರಾಮಮೂರ್ತಿ ನವಲಿ
ಗಂಗಾವತಿ: ಅಯೋಧ್ಯೆಯಲ್ಲಿ ಜ.22 ರಂದು ಭವ್ಯ ರಾಮಮಂದಿರ ಉದ್ಘಾಟನೆಯಾಗುತ್ತಿದ್ದು, ಆ ದಿನ ಯಾರೂ ಅಯೋಧ್ಯೆಯತ್ತ ಬಾರದಿರಿ, ಕೇವಲ ಆಹ್ವಾನಿತರು ಮಾತ್ರ ಬರಬೇಕೆಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ, ಶ್ರೀ ರಾಮಕ್ಷೇತ್ರ ತೀರ್ಥ ಟ್ರಸ್ಟ್‌ನವರು ಸಾರಿ ಸಾರಿ ಹೇಳುತ್ತಿದ್ದರೂ ಇಲ್ಲೊಬ್ಬ ರಾಮಭಕ್ತ ಕಳೆದ ಕೆಲ ದಿನಗಳಿಂದ ತನ್ನ ಬೈಕ್‌ನಲ್ಲಿ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಸುತ್ತಾಡಿ 22 ರಂದು ಅಯೋಧ್ಯೆಗೆ ಬರುವಂತೆ ಕರೆ ನೀಡುತ್ತಿದ್ದಾನೆ.ಗಂಗಾವತಿ ತಾಲೂಕಿನ ಹೇರೂರು ಗ್ರಾಮದ ಯಂಕಾರೆಡ್ಡಿ ವಗರನಾಳ ಬೈಕ್ ಮೇಲೆ ಶ್ರೀ ರಾಮಚಂದ್ರ ದೇವರ ಭಾವಚಿತ್ರ ಇರುವ ಎರಡು ಭಾರೀ ಗಾತ್ರದ ಕೇಸರಿ ಧ್ವಜವನ್ನು ಕಟ್ಟಿಕೊಂಡು ಗ್ರಾಮಾಂತರ ಪ್ರದೇಶದಲ್ಲಿ ಸುತ್ತಾಡುತ್ತ ರಾಮಮಂದಿರ ಉದ್ಘಾಟನೆ ಕಣ್ತುಂಬಿಕೊಳ್ಳಲು ಎಲ್ಲರೂ ಜ.22 ರಂದು ಅಯೋಧ್ಯೆಗೆ ಬನ್ನಿ ಎಂದು ಕೋರುತ್ತಿದ್ದಾನೆ.
ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ರಾಮಭಕ್ತರು, ಹಿಂದುಗಳು ಮನೆ ಮತ್ತು ದೇಗುಲಗಳಲ್ಲಿ ದೀಪ ಹಚ್ಚಿ ಸಂಭ್ರಮಿಸಬೇಕೆಂದು ಈ ರಾಮಭಕ್ತ ಸಾರುತ್ತಿದ್ದಾರೆ. ಸಾಧ್ಯವಾದವರು ಅಯೋಧ್ಯೆಗೆ ತೆರಳಿ ರಾಮಮಂದಿರ ಉದ್ಘಾಟನೆಗೆ ಶಕ್ತಿ ನೀಡಬೇಕೆಂದು ಮನವಿ ಮಾಡುತ್ತಿದ್ದಾರೆ. ಜೈ ಶ್ರೀರಾಮ, ಜೈ ಹನುಮಾನ ಎಂಬ ಭಿತ್ತಿಪತ್ರವನ್ನು ಜನರಿಗೆ ನೀಡುತ್ತಿದ್ದಾನೆ.ಕೇಸರಿ ಬಣ್ಣದ ಬಟ್ಟೆ ಧರಿಸುವ ಯಂಕಾರೆಡ್ಡಿ ವಗರನಾಳ, ಮನೆಗೂ ಕೇಸರಿ ಬಣ್ಣ ಹಚ್ಚಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಗಳನ್ನು ಹಾಕಿ ಜೈ ಶ್ರೀರಾಮ್, ಜೈ ಹನುಮಾನ್ ಎಂಬ ಬರಹಗಳನ್ನು ಬರೆಯಿಸಿದ್ದಾರೆ. ದಿನನಿತ್ಯ ಶ್ರೀರಾಮಚಂದ್ರ, ಆಂಜನೇಯ ಸ್ತೋತ್ರಗಳನ್ನು ಪಠಿಸುತ್ತಾರೆ.
ಗಂಗಾವತಿ ತಾಲೂಕು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆ, ಹಬ್ಬ ಹರಿದಿನಗಳಲ್ಲಿ ಉಚಿತವಾಗಿ ಭಗವಾಧ್ವಜ ಪೂರೈಸುತ್ತಿದ್ದಾರೆ. ಈಚೆಗೆ ಅಂಜನಾದ್ರಿಯಲ್ಲಿ ಜರುಗಿದ ಹನುಮದ್ ವ್ರತಾಚರಣೆ, ಗಣೇಶ ಹಬ್ಬ, ದಸರಾ ಉತ್ಸವಗಳಲ್ಲಿ ಧ್ವಜಗಳನ್ನು ಪೂರೈಸಿದ್ದಾರೆ. ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮಮಂದಿರ ಉದ್ಘಾಟನೆಗೊಳ್ಳುತ್ತಿದ್ದು, ರಾಮಭಕ್ತರು, ಹಿಂದೂಗಳ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎನ್ನುತ್ತಾರೆ ಹೇರೂರಿನ ರಾಮಭಕ್ತ ಯಂಕಾರೆಡ್ಡಿ ವಗರನಾಳ.