ರಾಮ ಬಾಣ ಹೂಡ್ಯಾನಲೇ, ಮಹಾತಾಯಿ ಬಲೆ ಬೀಸ್ಯಾಳಲೇ.. ಎಚ್ಚರ!

| Published : Aug 19 2025, 01:00 AM IST

ರಾಮ ಬಾಣ ಹೂಡ್ಯಾನಲೇ, ಮಹಾತಾಯಿ ಬಲೆ ಬೀಸ್ಯಾಳಲೇ.. ಎಚ್ಚರ!
Share this Article
  • FB
  • TW
  • Linkdin
  • Email

ಸಾರಾಂಶ

ಸದ್ದಲೇ...! ರಾಮ ರಾಮ ಎಂದು ನುಡಿದೀತಲೇ... ನರಲೋಕದ ಜನಕ ಆನೆ ಚರಗ ಹೊಡೆದೀತಲೇ... ರಾಮ ಬಾಣ ಹೂಡ್ಯಾನಲೇ.. ಮಹಾತಾಯಿ ಬಲೆ ಬೀಸ್ಯಾಳಲೇ ಎಚ್ಚರ...!!

- ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿ ಕಾರ್ಣೀಕ ಸಂಪನ್ನ । - ಎಫ್‌ಬಿ, ವಾಟ್ಸಪ್‌ ಮುಂತಾದ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್‌

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸದ್ದಲೇ...! ರಾಮ ರಾಮ ಎಂದು ನುಡಿದೀತಲೇ... ನರಲೋಕದ ಜನಕ ಆನೆ ಚರಗ ಹೊಡೆದೀತಲೇ... ರಾಮ ಬಾಣ ಹೂಡ್ಯಾನಲೇ.. ಮಹಾತಾಯಿ ಬಲೆ ಬೀಸ್ಯಾಳಲೇ ಎಚ್ಚರ...!!

ಶ್ರಾವಣದ ಮಾಸದ ಕಡೇ ಸೋಮವಾರವಾದ ಇಂದು ನಗರದ ಆನೆಕೊಂಡದ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ಸ್ವಾಮಿ ಕಾರ್ನೀಕೋತ್ಸವ-2025 ರಲ್ಲಿ ಆದ ಕಾರ್ಣೀಕ ನುಡಿಗಳಿವು.

ಆನೆಕೊಂಡದ ಶ್ರೀ ಮರಡಿ ಬಸವೇಶ್ವರ ದೇವಾಲಯ ಆವರಣದಲ್ಲಿ ಸಂಜೆ ಸಾವಿರಾರು ಭಕ್ತರ ಸಮ್ಮುಖ ಕಾರ್ಣೀಕ ನಡೆಯಿತು. ಅಸಂಖ್ಯಾತ ಭಕ್ತರು ಶ್ರದ್ಧಾಭಕ್ತಿ, ತೀವ್ರ ಕುತೂಹಲದಿಂದ ಕಾರ್ಣೀಕ ನುಡಿ ಕೇಳಲು ಜಮಾಯಿಸಿದ್ದರು.

ಸದ್ದಲೇ...! ಅನ್ನುತ್ತಿದ್ದಂತೆಯೇ ಇಡೀ ಆನೆಕೊಂಡ ದೇವಸ್ಥಾನದ ಬಳಿ ಜಮಾಯಿಸಿದ್ದ ಭಕ್ತರು ಮೌನಕ್ಕೆ ಶರಣರಾದರು. ಕಾರ್ಣೀಕ ಹೇಳುವ ಅರ್ಚಕರು ಬಿಲ್ಲನ್ನೇರಿ, ರಾಮ ರಾಮ ಎಂದು ನುಡಿದೀತಲೇ... ನರಲೋಕದ ಜನಕ ಆನೆ ಚರಗ ಹೊಡೆದೀತಲೇ... ರಾಮ ಬಾಣ ಹೂಡ್ಯಾನಲೇ... ಮಹಾತಾಯಿ ಬಲೆ ಬೀಸ್ಯಾಳಲೇ ಎಚ್ಚರ...!! ಎಂಬ ಒಗಟಿನಂತಹ ಸಾಲುಗಳನ್ನು ಹೇಳಿ, ಕೆಳಗಿಳಿದರು. ಭಕ್ತರಿಂದ ಜೈಕಾರ, ಜನರ ಜಯಘೋಷಗಳು ಮೊಳಗಿದವು.

ಈ ಕಾರ್ಣೀಕ ನುಡಿ-ದೃಶ್ಯಗಳು ಸೋಷಿಯಲ್ ಮೀಡಿಯಾಗಳಲ್ಲಿ, ಫೋನ್‌ಗಳಲ್ಲಿ, ವಾಟ್ಸಪ್ ಗ್ರೂಪ್‌ಗಳಲ್ಲಿ ಮಿಂಚಿನಂತೆ ವೈರಲ್ ಆದವು. ನಗರ, ಜಿಲ್ಲೆ, ಅನ್ಯ ಜಿಲ್ಲೆ, ರಾಜ್ಯದ ವಿವಿಧ ಜಿಲ್ಲೆಗಳ ಜನರು ಆನೆಕೊಂಡದ ಕಾರ್ಣೀಕ ನೀಡುವ ಸಂಕೇತ, ಸುಳಿವುಗಳನ್ನು ಗ್ರಹಿಸುತ್ತಲೇ ಬಂದಿದ್ದಾರೆ.

ಆನೆಕೊಂಡ ಶ್ರೀ ಬಸವೇಶ್ವರ ಸ್ವಾಮಿ, ತಾಲೂಕಿನ ನೀಲಾನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ, ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಿ ಸೇರಿದಂತೆ ವಿವಿಧ ದೇವರುಗಳ ಪಲ್ಲಕ್ಕಿಗಳ ಆರ್ಭಟದ ಮಧ್ಯೆ, ಸಾವಿರಾರು ಭಕ್ತರ ಸಮ್ಮುಖ ಮುಂದಿನ ಶ್ರಾವಣದವರೆಗಿನ ಭವಿಷ್ಯ ನುಡಿಯಲಾಯಿತು.

ನರಲೋಕದ ಜನಕ ಆನೆ ಚರಗ ಹೊಡೆದೀತಲೇ ಎಂದರೆ, ಇದು ಸಮೃದ್ಧಿ ಸಂದೇಶ‍ವೆಂಬ ಮಾತು ಕೇಳಿಬಂದರೆ, ಮಾನವ-ಪ್ರಾಣಿ ಸಂಘರ್ಷ ಮತ್ತಷ್ಟು ಹೆಚ್ಚುವ ಸುಳಿವು ನೀಡಲಾಗಿದೆ ಎಂದೇ ಭಕ್ತರು ವಿಶ್ಲೇಷಿಸುತ್ತಿದ್ದರು. ರಾಮ ಬಾಣ ಹೂಡ್ಯಾನಲೇ , ಮಹಾತಾಯಿ ಬಲೆ ಬೀಸ್ಯಾಳಲೇ ಎಂದರೆ, ಭಾರತ ಮಾತೆಯನ್ನು ರಕ್ಷಿಸುವ ಕೆಲಸಕ್ಕಾಗಿ ರಾಮ ಬಾಣ ಹೂಡ್ಯಾನಲೇ ಎಂಬುದಾಗಿಯೂ, ಮಹಾತಾಯಿ ಬಲೆ ಬೀಸ್ಯಾಳಲೇ ಎಂದರೆ, ಭಾರತವು ಜಗತ್ತಿನ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗುವತ್ತ ದಿಟ್ಟಹೆಜ್ಜೆ ಇಡುತ್ತಿದೆ ಎಂಬುದಾಗಿಯೂ ತಮ್ಮದೇ ಚಿಂತನೆಯಿಂದ ವ್ಯಾಖ್ಯಾನ ಮಾಡುತ್ತಿದ್ದರು.

- - -

-18ಕೆಡಿವಿಜಿ12, 13, 14.ಜೆಪಿಜಿ: ದಾವಣಗೆರೆ ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿ ಕಾರ್ಣೀಕ ನುಡಿಯುತ್ತಿರುವ ಅರ್ಚಕರು.

-18ಕೆಡಿವಿಜಿ15, 16.ಜೆಪಿಜಿ: ದಾವಣಗೆರೆ ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿ ಕಾರ್ಣೀಕ ನುಡಿಯುತ್ತಿರುವ ಅರ್ಚಕರ ಸಂದೇಶ ಆಲಿಸಲು ಸೇರಿರುವ ಜನಸಾಗರ.