ರಾಮನೋ, ರಾವಣನೋ ನೀವೇ ನಿರ್ಧರಿಸಿ: ಶಾಸಕ ಮುನಿರತ್ನ

| Published : Mar 26 2024, 01:04 AM IST

ಸಾರಾಂಶ

ಯಾರೂ ನಿರೀಕ್ಷಿಸದ ಒಬ್ಬ ಸಜ್ಜನ ವ್ಯಕ್ತಿಯನ್ನು ಮಾನ್ಯ ಪ್ರಧಾನ ಮಂತ್ರಿಯವರು ನಮ್ಮ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆ ಮಾಡಿರುವುದು ಹೆಮ್ಮೆಯ ವಿಷಯವಾಗಿದ್ದು, ಈ ಚುನಾವಣೆಯು ಧರ್ಮ-ಅಧರ್ಮದ ನಡುವಿನ ಹೋರಾಟವಾಗಿದೆ. ತಮ್ಮ ವೃತ್ತಿ ಜೀವನದಲ್ಲಿ ಲಕ್ಷಾಂತರ ಜನರ ಪ್ರಾಣ ಉಳಿಸಿರುವ ಸರಳ, ಸಜ್ಜನಿಕೆಯ ವ್ಯಕ್ತಿ ಬೇಕೋ ಅಥವಾ ದರ್ಪ, ದೌರ್ಜನ್ಯ, ದಬ್ಬಾಳಿಕೆಯಿಂದಲೇ ಜನರನ್ನು ಹೆದರಿಸಿ ರಾಜಕೀಯ ನಡೆಸುತ್ತಿರುವ ವ್ಯಕ್ತಿ ಬೇಕೋ ಎಂದು ಜನರೇ ತೀರ್ಮಾನಿಸಬೇಕಾಗಿದೆ.

ಕನ್ನಡಪ್ರಭ ವಾರ್ತೆ ಕನಕಪುರ

ಈ ಚುನಾವಣೆ ರಾಮ-ರಾವಣರ ಯುದ್ದವಾಗಿದ್ದು ಕ್ಷೇತ್ರದ ಮತದಾರರಿಗೆ ರಾಮ ಬೇಕೋ, ರಾವಣ ಬೇಕೋ ಎಂಬುದನ್ನು ನೀವೇ ನಿರ್ಧರಿಸಿ ಎಂದು ಶಾಸಕ ಮುನಿರತ್ನ ಹೇಳಿದರು.

ನಗರದ ಎಸ್.ಆರ್.ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜೆಡಿಎಸ್- ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಯಾರೂ ನಿರೀಕ್ಷಿಸದ ಒಬ್ಬ ಸಜ್ಜನ ವ್ಯಕ್ತಿಯನ್ನು ಮಾನ್ಯ ಪ್ರಧಾನ ಮಂತ್ರಿಯವರು ನಮ್ಮ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆ ಮಾಡಿರುವುದು ಹೆಮ್ಮೆಯ ವಿಷಯವಾಗಿದ್ದು, ಈ ಚುನಾವಣೆಯು ಧರ್ಮ-ಅಧರ್ಮದ ನಡುವಿನ ಹೋರಾಟವಾಗಿದೆ. ತಮ್ಮ ವೃತ್ತಿ ಜೀವನದಲ್ಲಿ ಲಕ್ಷಾಂತರ ಜನರ ಪ್ರಾಣ ಉಳಿಸಿರುವ ಸರಳ, ಸಜ್ಜನಿಕೆಯ ವ್ಯಕ್ತಿ ಬೇಕೋ ಅಥವಾ ದರ್ಪ, ದೌರ್ಜನ್ಯ, ದಬ್ಬಾಳಿಕೆಯಿಂದಲೇ ಜನರನ್ನು ಹೆದರಿಸಿ ರಾಜಕೀಯ ನಡೆಸುತ್ತಿರುವ ವ್ಯಕ್ತಿ ಬೇಕೋ ಎಂದು ಜನರೇ ತೀರ್ಮಾನಿಸಬೇಕಾಗಿದೆ ಎಂದರು.

ಕೋವಿಡ್‌ ಸಂದರ್ಭದಲ್ಲಿ ದೇಶದಲ್ಲಿ ಯಾರೂ ಮಾಡದ ಕೆಲಸ ನಾನು ಮಾಡಿದ್ದೇನೆ ಎಂದು ಪ್ರಚಾರ ಮಾಡಿಕೊಳ್ಳುತ್ತಿರುವ ಸಂಸದ ಡಿ. ಕೆ. ಸುರೇಶ್ ರವರು ರಾಜರಾಜೇಶ್ವರಿ ಕ್ಷೇತ್ರದ ಜನತೆಗೆ ಏನಾದರೂ ಸಹಾಯ ಮಾಡಿದ್ದಾರಾ ಎಂಬುದನ್ನು ಮೊದಲು ತಿಳಿಸಲಿ, ಇಡೀ ಜಗತ್ತೇ ಅಸಹಾಯಕತೆಯಿಂದ ಕೈಚೆಲ್ಲಿ ಕುಳಿತುಕೊಂಡಾಗ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ದೇಶದ ಜನರ ಆರೋಗ್ಯಕ್ಕೆ ಯಾವುದೇ ತೊಂದರೆಯಾಗದಂತೆ ಉಚಿತ ಲಸಿಕೆಯನ್ನು ನೀಡಿದರು. ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿಯೊಬ್ಬ ರೈತನ ಬ್ಯಾಂಕ್ ಖಾತೆಗೆ ನೇರವಾಗಿ ಆರು ಸಾವಿರ ರು.ಗಳನ್ನು ಹಾಕುವ ಮೂಲಕ ನೆರವಿಗೆ ಧಾವಿಸಿದ್ದನ್ನು ದೇಶದ ಜನ ಎಂದೂ ಮರೆಯಬಾರದು, ಈ ಕ್ಷೇತ್ರದ ಮತದಾರ ಬಂಧುಗಳು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಬದಲಾವಣೆ ತರಲು ಮುಂದಾಗುವಂತೆ ಕರೆ ನೀಡಿದರು.

ಚುನಾವಣಾ ವೇಳೆ ಕ್ಷೇತ್ರದಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಲು ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜಿಸುವಂತೆ ಈಗಾಗಲೇ ಚುನಾವಣಾ ಆಯೋಗಕ್ಕೆ ವಿನಂತಿಸಿದ್ದು, ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಯಾವುದಕ್ಕೂ ಹೆದರದೇ ನರೇಂದ್ರ ಮೋದಿಜೀಯವರ ದಕ್ಷ ಆಡಳಿತ ಹಾಗೂ ನಮ್ಮ ಅಭ್ಯರ್ಥಿಯ ಸೇವಾ ಮನೋಭಾವವವನ್ನು ಪ್ರತಿ ಬೂತ್ ಮಟ್ಟದಲ್ಲಿ ಮತದಾರರಿಗೆ ತಿಳಿಸಬೇಕು. 7 ವಿಧಾನಸಭೆ ಕ್ಷೇತ್ರಗಳಲ್ಲಿಯೂ ಡಾ. ಮಂಜುನಾಥ್ ರವರು ಸುಮಾರು 3 ಲಕ್ಷ ಮತಗಳ ಅಂತರದಿಂದ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಮಾಗಡಿ ಶಾಸಕ ಎ. ಮಂಜು ಮಾತನಾಡಿ, ಪ್ರಧಾನ ಮಂತ್ರಿಯವರ ಆಯ್ಕೆ ಡಾ. ಮಂಜುನಾಥ್ ಆಗಿದ್ದು, ಇವರ ಸೇವೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೇ ಇಡೀ ದೇಶದ ಜನರ ಆರೋಗ್ಯ ಸೇವೆಗೆ ತೊಡಗಿಸಿಕೊಳ್ಳಬೇಕೆಂಬ ಆಶಯದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ವಕೀಲರ ಸಂಘದ ಅಧ್ಯಕ್ಷ ರಂಗನಾಥ್, ಕೆಆರ್ ಐಡಿಎಲ್ ಮಾಜಿ ಅಧ್ಯಕ್ಷ ರುದ್ರೇಶ್, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಬಿ. ನಾಗರಾಜು, ಮುಖಂಡರಾದ ಕಬ್ಬಾಳೇಗೌಡ, ಧನಂಜಯ್, ಸಿದ್ಧಮರೀಗೌಡ, ಪುಟ್ಟರಾಜು, ಚಿನ್ನಸ್ವಾಮಿ, ನಗರಸಭಾ ಸದಸ್ಯ ಸ್ಟುಡಿಯೋ ಚಂದ್ರು, ಸರ್ದಾರ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ,ಜಿಲ್ಲಾ ಮುಖಂಡರಾದ ಶಿವಮಾದು, ಜಗನ್ನಾಥ್, ಡಾಕ್ಟರ್ ಪುಣ್ಯವತಿ, ಮಮತ,ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಪಿ.ಕುಮಾರ್, ಪ್ರಧಾನ ಕಾರ್ಯದರ್ಶಿ ಬೊಮ್ಮನಹಳ್ಳಿ ಕುಮಾರ್, ನಗರ ಮಂಡಲ ಅಧ್ಯಕ್ಷ ಮಂಜುನಾಥ್,ಬಿಜೆಪಿ ಜಿಲ್ಲಾ ರೈತಾ ಮೋರ್ಚಾ ಅಧ್ಯಕ್ಷ ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗನಂದ್, ಜಿಲ್ಲಾ ಎಸ್.ಟಿ ಮೋರ್ಚಾ ಅಧ್ಯಕ್ಷ ಶ್ರೀನಿವಾಸ್, ತಾಲೂಕು ಎಸ್ಟಿ ಮೋರ್ಚಾ ಅಧ್ಯಕ್ಷ ಶಿವಮುತ್ತು, ಯುವ ಮೋರ್ಚಾ ಅದ್ಯಕ್ಷ ಸುನಿಲ್, ಶೇಖರ್, ಮಹಿಳಾ ಘಟಕದ ಪವಿತ್ರ, ತಾಹಸೀನಾ ಖಾನ್ ಸೇರಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಸಾವಿರಾರು ಕಾರ್ಯಕರ್ತರು ಹಾಗೂ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಡಿಕೆ ಸಹೋದರರ ಹಣಬಲ ಕೆಲಸ ಮಾಡುವುದಿಲ್ಲ: ಸಿಪಿವೈ

ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೇಶ್ವರ್ ಮಾತನಾಡಿ, ಕಳೆದ ಹನ್ನೆರಡು ವರ್ಷಗಳ ಅವಧಿಯಲ್ಲಿ ಡಿ.ಕೆ ಸುರೇಶ್ ಸಂಸದರಾಗಿದ್ದವರು, ಈ ಅವಧಿಯಲ್ಲಿ ನಡೆದುಕೊಂಡ ರೀತಿಯಿಂದ ಬಹಳಷ್ಟು ಜನರು ಬೇಸತ್ತು, ಈ ಸಭೆಗೆ ಬಂದಿರುವುದು ತಿಳಿಯುತ್ತಿದೆ. ಈ ಚುನಾವಣೆಯನ್ನು ಅವರು ಅಂದುಕೊಂಡಂತೆ ತೋಳ್ಬಲ, ಹಣಬಲದ ಮೂಲಕ ಸುಲಭವಾಗಿ ಗೆಲ್ಲಬಹುದು ಎಂದುಕೊಂಡಿದ್ದರೆ ಅದು ಅವರ ಭ್ರಮೆಯಾಗಿದ್ದು, ಅವೆಲ್ಲವನ್ನೂ ಮೀರಿದಂತಹ ಚುನಾವಣೆ ಇದಾಗಿದೆ, ನಮ್ಮ ಅಭ್ಯರ್ಥಿ ಜನಾನುರಾಗಿಯಾಗಿರುವುದರಿಂದ ಜನರೇ ಅವರ ಪರವಾಗಿ ಬೀದಿಗಿಳಿದು ಕೆಲಸ ಮಾಡುತ್ತಿದ್ದಾರೆ. ವಿರೋಧಿಗಳು ಇದುವರೆಗೂ ಎದುರಾಳಿಗಳ ವೀಕ್ನೆಸ್ ತಿಳಿದುಕೊಂಡು ಅವರನ್ನು ತಮ್ಮ ಹಿಡಿತಕ್ಕೆ ತಗೊಂಡು ಚುನಾವಣೆ ನಡೆಸುತ್ತಿದ್ದರು. ಆದರೆ ಈ ಚುನಾವಣೆ ಅದೆಲ್ಲವನ್ನೂ ಮೀರಿದ್ದಾಗಿದ್ದು, ಜನರೇ ಸ್ವಯಂಪ್ರೇರಿತರಾಗಿ ಬೀದಿಗಿಳಿದು ಡಾ.ಮಂಜುನಾಥ್ ಪರ ಮತ ಕೇಳುತ್ತಿರುವುದು ನೋಡಿದರೆ, ನಾವು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಡಿಕೆ ಸಹೋದರರು ರಾಜಕಾರಣಕ್ಕೆ ಬಂದ ಮೇಲೆ ಸ್ವಾರ್ಥದಿಂದ ಎಷ್ಟು ಪ್ರಬಲರಾಗಿದ್ದಾರೆಂದರೆ ಸರ್ಕಾರ ಮೂಲಕ ಅವರ ಆಸ್ತಿಯನ್ನು ಎಷ್ಟು ವೃದ್ಧಿ ಮಾಡಿಕೊಳ್ಳಬಹುದು ಎಂಬುದನ್ನು ಅರಿತು ಮುಖ್ಯಮಂತ್ರಿಯವರನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿರುವುದನ್ನು ಕಾಣಬಹುದಾಗಿದೆ ಎಂದರು.

ಡಾ. ಮಂಜುನಾಥ್ ಅವರ ವೈದ್ಯಕೀಯ ಸೇವೆ ಆಧಾರದಲ್ಲಿ ಮೊನ್ನೆ ಪ್ರಧಾನಮಂತ್ರಿಯವರೇ ಅವರನ್ನು ಶಿವಮೊಗ್ಗಕ್ಕೆ ಕರೆಸಿಕೊಂಡು ಹೆಚ್ಚು ಮತಗಳಿಂದ ಗೆದ್ದು ಬರುವಂತೆ ಹೇಳಿದ್ದಾರೆ, ಡಾ.ಮಂಜುನಾಥ್ ಕೇವಲ ಸಂಸದರಷ್ಟೇ ಅಲ್ಲದೇ ಕೇಂದ್ರ ಮಂತ್ರಿಯಾಗಬೇಕೆಂಬುದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮತದಾರರ ಆಶಯವಾಗಿದೆ, ಡಾ. ಮಂಜುನಾಥ್ ರವರ ಮೇಲೆ ಈಗಾಗಲೇ ಕೇಂದ್ರದ ನಾಯಕರು ಅಪಾರ ಗೌರವವನ್ನು ಇಟ್ಟುಕೊಂಡಿದ್ದು ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಮಂತ್ರಿಯಾಗುವುದು ನಿಶ್ಚಿತವಾಗಿದ್ದು, ಇದು ನಿಮ್ಮೆಲ್ಲರ ಆಶಿರ್ವಾದದಿಂದ ಮಾತ್ರ ಸಾಧ್ಯ ಎಂದರು.

.