ರಮಾಬಾಯಿ ಆದರ್ಶಗಳು ದಾರಿದೀಪವಾಗಬೇಕು

| Published : Feb 08 2024, 01:33 AM IST

ಸಾರಾಂಶ

ಪ್ರಸ್ತುತ ಸನ್ನಿವೇಶವನ್ನು ಅವಲೋಕಿಸಿದರೆ ಮುಂದಿನ ದಿನಗಳು ಕರಾಳವಾಗಿ ಗೋಚರಿಸುತ್ತಿವೆ, ಒಳ್ಳೆಯ ದಿನಗಳಾಗಬೇಕಾದರೆ, ಮುಂದಿನ ಪೀಳಿಗೆಗೆ ರಮಾಬಾಯಿ ಅಂಬೇಡ್ಕರ್ ಅವರ ಆದರ್ಶಗಳು ದಾರಿ ದೀಪವಾಗಬೇಕು ಎಂದು ಸಂಸ್ಕೃತಿ ಚಿಂತಕ ಕೋಟಗಾನಹಳ್ಳಿ ರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಪ್ರಸ್ತುತ ಸನ್ನಿವೇಶವನ್ನು ಅವಲೋಕಿಸಿದರೆ ಮುಂದಿನ ದಿನಗಳು ಕರಾಳವಾಗಿ ಗೋಚರಿಸುತ್ತಿವೆ, ಒಳ್ಳೆಯ ದಿನಗಳಾಗಬೇಕಾದರೆ, ಮುಂದಿನ ಪೀಳಿಗೆಗೆ ರಮಾಬಾಯಿ ಅಂಬೇಡ್ಕರ್ ಅವರ ಆದರ್ಶಗಳು ದಾರಿ ದೀಪವಾಗಬೇಕು ಎಂದು ಸಂಸ್ಕೃತಿ ಚಿಂತಕ ಕೋಟಗಾನಹಳ್ಳಿ ರಾಮಯ್ಯ ಹೇಳಿದರು.

ಡಾ. ಬಿ.ಆರ್.ಅಂಬೇಡ್ಕರ್ ಪತ್ನಿ ರಮಾಬಾಯಿಯ ೧೨೫ನೇ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನ ಸಂಸ ಥಿಯೇಟರ್, ರಂಗ ಧರ್ಮ ಸಾಂಸ್ಕೃತಿಕ ಸಂಸ್ಥೆ ಮತ್ತು ನಗರದ ರಂಗವಾಹಿನಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಗರದ ಡಾ .ರಾಜಕುಮಾರ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ರಮಾಬಾಯಿ ಅಂಬೇಡ್ಕರ್ ೧೨೫ ದಿನಗಳ ರಂಗಜಾಥಾ ಹಾಗೂ ವಿಚಾರಗೋಷ್ಠಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ರಮಾಬಾಯಿ ಅವರನ್ನು ಉದಾತ್ತವಾಗಿ, ಸಾಂಪ್ರಾದಾಯಿಕವಾಗಿ, ಸಾಂಸ್ಕ್ರೃತಿಕವಾಗಿ ಕಟ್ಟಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ, ಸಂವಿಧಾನ ರಚನೆಯಾಗಿ ೭೫ ವರ್ಷವಾಗಿದ್ದರೂ ಇನ್ನೂ ಸಮಾನತೆಯನ್ನು ಸಾಧಿಸಲು ಸಾಧ್ಯವಾಗಿಲ್ಲ, ಹೀಗಿರುವಾಗ ಕೆಲ ಶಕ್ತಿಗಳು ವಿಶ್ವಗುರು ಎಂಬ ಪರಿಕಲ್ಪನೆಯ ವಿಷ ಬೀಜ ಬಿತ್ತುತ್ತಿದ್ದು ಇದು ಮಂದೆ ವಿಷ ವೃಕ್ಷವಾಗುತ್ತದೆ ಎಂದರು.

ಅಂಬೇಡ್ಕರ್ ಅವರ ಜೀವನದಲ್ಲಿ ಅತಿ ಹೆಚ್ಚು ಪ್ರಭಾವ ಬೀರಿದ ಮೂವರಲ್ಲಿ ರಮಾಬಾಯಿ ಮೊದಲಿಗರು, ತಮ್ಮ ಇಡೀ ಜೀವನವನ್ನು ಅಂಬೇಡ್ಕರ್ ಕೀರ್ತಿಗೆ ಮುಡಿಪಾಗಿಟ್ಟರು, ತಮ್ಮ ನೋವು ಸಂಕಷ್ಟಗಳನ್ನು ನುಂಗಿಕೊಂಡು ಅಂಬೇಡ್ಕರ್ ಓದಿಗೆ ಸಹಕರಿಸಿದ್ದರಿಂದ ಇಂದು ಜಗತ್ತು ಅಂಬೇಡ್ಕರ್‌ನನ್ನು ಮರೆಯಲು ಸಾಧ್ಯವಾಗುತ್ತಿಲ್ಲ, ಇಂತಹ ತ್ಯಾಗಮಯಿ ತಾಯಿಯ ಆದರ್ಶಗಳು ನಮ್ಮ ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು ಎಂದರು.

ಜ್ವಲಂತ ಸಮಸ್ಯೆಗಳಿಗೆ ಮೂಕ ಪ್ರೇಕ್ಷಕರಾಗಿ ಉಳಿಯಬಾರದು. ಈ ದೇಶದಲ್ಲಿ ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಬಳಸಿಕೊಂಡು ಅನ್ಯಾಯದ ವಿರುದ್ಧ ಸಂಘರ್ಷ ಮಾಡುವುದು ನಮ್ಮ ಹಕ್ಕಾಗಿದೆ ಎಂದು ರಮಾಬಾಯಿ ಅಂಬೇಡ್ಕರ್ ಹೇಳಿದ್ದಾರೆ.

ಅಂಬೇಡ್ಕರ್ ಶಿಕ್ಷಣ ಪಡೆಯುವ ದಿನಗಳಲ್ಲಿ ಸುಖ, ಸಂತೋಷ, ನೆಮ್ಮದಿ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಸಂಸಾರದ ನೋವು ಸ್ವಲ್ಪವೂ ತಿಳಿಯದಂತೆ ಕಾಪಾಡಿದ್ದು ರಮಾಬಾಯಿ. ಅಧ್ಯಕ್ಷತೆ ವಹಿಸಿದ್ದ ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಜಾತಿ, ಧರ್ಮ, ಲಿಂಗ ವ್ಯವಸ್ಥೆಯಲ್ಲಿ ರಮಾಬಾಯಿ ಉಪಮಯೆ, ಇಂತಹ ತಾಯಿಯನ್ನು ಅರ್ಥೈಸಿಕೊಳ್ಳಬೇಕಾಗಿದೆ.ದಿನೇ ದಿನೇ ಹೆಚ್ಚುತ್ತಿರುವ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಶೋಷಣೆ, ಗರ್ಭದೊಳಗಿನಿಂದ ಇರುವವರೆಗೂ ಹಕ್ಕುಗಳಿಗಾಗಿ ಮಹಿಳೆಯರು ಹೋರಾಡಬೇಕಾದ ಪ್ರಸ್ತುತ ಸನ್ನಿವೇದಲ್ಲಿ ರಮಾಬಾಯಿಯವರ ತಾಯಿತನದ ಪ್ರೀತಿ ಹೆಚ್ಚು ಅವಶ್ಯಕವಾಗಿದೆ.

ಸುಳ್ಳು ಸೃಷ್ಠಿ, ಇತಿಹಾಸದ ತಿದ್ದುಪಡಿ, ಪಠ್ಯಕ್ರಮಗಳ ತಿದ್ದುಪಡಿ, ಮಹಿಳೆಯರು, ಶೋಷಿತರು, ಸ್ವತಂತ್ರವನ್ನು ಕಳೆದು ಕೊಳ್ಳುತ್ತಿದ್ದಾರೆ, ಇಂತಹ ಸಮಯಲ್ಲಿ ರಮಾಬಾಯಿ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯ ವಾಗಿದೆ.

ಬಸವಣ್ಣ, ಅಂಬೇಡ್ಕರ್‌ ರಂತಹ ಮಹಾಪುರುಷರನ್ನು ಜಾತಿಗೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ, ಜಾತಿ, ಧರ್ಮ, ಲಿಂಗವ್ಯವಸ್ಥೆಗಳು ಹೋಗಬೇಕು ಇವುಗಳು ಹೋಗಬೇಕಾದರೆ ಮೊದಲು ನಮ್ಮಲ್ಲಿ ಬದಲಾವಣೆ ಬರಬೇಕು, ಇದನ್ನೇ ರಮಾಬಾಯಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅಂಬೇಡ್ಕರ್ ಅವರ ಯಶಸ್ಸಿಗೆ ಕಾರಣರಾದರು.

ಮುಖ್ಯ ಅತಿಥಿಗಳಾಗಿದ್ದ ಚಾಮರಾಜನಗರ ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ. ಸಿ, ಮಾದೇಶ್ ಮಾತನಾಡಿ, ಮೀನಿನ ಮಾರುಕಟ್ಟೆಯಲ್ಲಿ ಸರಳ ಸಮಾರಂಭದಲ್ಲಿ ರಮಾಬಾಯಿ ಅಂಬೇಡ್ಕರ್‌ನನ್ನು ವಿವಾಹವಾದರು, ಈ ವೇಳೆ ರಮಾಬಾಯಿ ಅವರಿಗೆ 9 ವರ್ಷ, ಅಂಬೇಡ್ಕರರಿಗೆ ಹದಿನೈದು ವರ್ಷ . ಅಂಬೇಡ್ಕರ್ ಅವರು ಪ್ರೀತಿಯಿಂದ " ರಾಮು " ಎಂದು ಕರೆಯುತ್ತಿದ್ದರೆ, ರಮಾಬಾಯಿ ಸಾಹೇಬ್ ಎಂದು ಕರೆಯುತ್ತಿದ್ದರು.ಅವರು ಐದು ಮಕ್ಕಳಿಗೆ ಜನ್ಮ ನೀಡಿದರು ಇವರಲ್ಲಿ, ಯಶವಂತ್ ಜೀವಂತವಾಗಿ ಉಳಿದರು, ಉಳಿದ ಮಕ್ಕಳು ತೀರಿಕೊಂಡಾಗಲು ವಿದೇಶದಲ್ಲಿ ಅಂಬೇಡ್ಕರ್ ಅವರಿಗೆ ವಿಷಯ ತಿಳಿಸಿದರೆ ಎಲ್ಲಿ ಅವರ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗುತ್ತದೆ ಎಂದು ಎಲ್ಲಾ ನೋವನ್ನು ನುಂಗಿ ಸಂಸಾರ ಸಾಗಿಸಿದ ಮಹಾತಾಯಿ ರಮಾಬಾಯಿ.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ಮಾತನಾಡಿ, ಹೆಣ್ಣು ಮಕ್ಕಳಿಗೆ ಹೆಚ್ಚಿನ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಅಂಬೇಡ್ಕರ್‌ಗೆ ರಮಾಬಾಯಿ ಒಳ್ಳೆಯ ಸಂಗಾತಿ ಎಂದರು.

ಜನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ ಪ್ರಾಸ್ತಾವಿಸಿದರು. ಬೆಂಗಳೂರಿನ ಸಂಸ ಥಿಯೇಟರ್‌ನ ಸಂಚಾಲಕ ಸಿ.ಎಂ.ಸುರೇಶ್. ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜು, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಪ್ರದಾನಕಾರ್ಯದರ್ಶಿ ಮಹದೇವಸ್ವಾಮಿ ಉಪಸ್ಥಿತರಿದ್ದರು. ಜಾದೂಗಾರ ಜಗ್ಗಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಜಾದೂ ಮಾಡಿ ಪುಷ್ಪಾರ್ಚನೆ ಮಾಡಿ ರಾಷ್ಟ್ರಧ್ವಜವನ್ನು ಪ್ರದರ್ಶಿಸಿದರು.