ಮೌಲ್ಯಗಳು ದೂರವಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಹೆಗಡೆಯವರ ಮೌಲ್ಯಾಧಾರಿತ ರಾಜಕಾರಣವನ್ನು ಕೇವಲ ನೆನಪು ಮಾಡಿಕೊಂಡರಷ್ಟೇ ಸಾಲದು, ಬದಲಾಗಿ ಆಚರಣೆಯಲ್ಲಿ ತರಬೇಕು.
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಮೌಲ್ಯಗಳು ದೂರವಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಹೆಗಡೆಯವರ ಮೌಲ್ಯಾಧಾರಿತ ರಾಜಕಾರಣವನ್ನು ಕೇವಲ ನೆನಪು ಮಾಡಿಕೊಂಡರಷ್ಟೇ ಸಾಲದು, ಬದಲಾಗಿ ಆಚರಣೆಯಲ್ಲಿ ತರಬೇಕು. ಅವರು ಪಾಲಿಸಿಕೊಂಡು ಬಂದ ಮೌಲ್ಯಗಳು ಅವರ ಕಾಲಾನಂತರವೂ ಅವರ ಹೆಸರನ್ನು ಅಜರಾಮರವಾಗಿಸಿವೆ ಎಂದು ರಾಮಕೃಷ್ಣ ಹೆಗಡೆ ಚಿರಂತನದ ಟ್ರಸ್ಟಿ, ಬ್ಯಾಂಕಿನ ನಿರ್ದೇಶಕ ಡಾ. ರವಿ ಭಟ್ಟ ಬರಗದ್ದೆ ಹೇಳಿದರು.ಶನಿವಾರ ತಾಲೂಕಿನ ಯು.ಕೆ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಯು.ಕೆ. ಸೌಹಾರ್ದ ಬ್ಯಾಂಕ್ ಮತ್ತು ರಾಮಕೃಷ್ಣ ಹೆಗಡೆ ಚಿರಂತನ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ರಾಮಕೃಷ್ಣ ಹೆಗಡೆ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಹೆಗಡೆಯವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಮಾತನಾಡಿದರು.
ನಾಡಿಗೆ ಧೀಮಂತ ನಾಯಕತ್ವ ನೀಡಿ, ಪಾರದರ್ಶಕ, ಜಾತ್ಯತೀತ, ಸರ್ವ ಜನರೂ ಒಪ್ಪುವ ಆಡಳಿತವನ್ನು ನೀಡಿದ್ದರು. ಇಂದಿನ ಯುವಪೀಳಿಗೆ ಅವರ ಆದರ್ಶಗಳೊಂದಿಗೆ ಹೆಜ್ಜೆಗಳನ್ನು ಇಟ್ಟಾಗ ಭವ್ಯ ನಾಡನ್ನು ನಿರ್ಮಿಸಬಹುದು ಎಂದರು.ಹಿರಿಯ ಸಹಕಾರಿ ಪಿ.ಜಿ. ಹೆಗಡೆ ಕಳಚೆ ಮಾತನಾಡಿದರು. ಬ್ಯಾಂಕಿನ ನಿರ್ದೇಶಕರಾದ ತಮ್ಮಣ್ಣ ಕವಡಿಕೇರಿ, ನಾರಾಯಣ ಗಾಂವ್ಕರ್, ಪ್ರಮುಖರಾದ ಆರ್.ಜಿ. ಉಪಾಧ್ಯಾಯ ಮಂಚಿಕೇರಿ, ಗೋಪಾಲಕೃಷ್ಣ ಭಾಗ್ವತ್ ಮಳಲಗಾಂವ್, ಸಿ.ಜಿ. ಹೆಗಡೆ, ಪ್ರಧಾನ ವ್ಯವಸ್ಥಾಪಕ ಎನ್.ಜಿ. ಕಿರಣ, ಸುಬ್ರಹ್ಮಣ್ಯ ಭಟ್ಟ, ಲಕ್ಷ್ಮಿ ನಾಯ್ಕ, ರಾಘವೇಂದ್ರ ಗಾಂವ್ಕರ್, ಸುನೀಲ್ ಭಟ್ಟ, ಸುರೇಶ್ ಬೇಕನಿ, ಬ್ಯಾಂಕಿನ ಸಿಬ್ಬಂದಿ, ರಾಮಕೃಷ್ಣ ಹೆಗಡೆ ಅಭಿಮಾನಿಗಳು ಪಾಲ್ಗೊಂಡು ಪುಷ್ಪನಮನ ಅರ್ಪಿಸಿದರು.