ಸಾರಾಂಶ
ಸಿದ್ದಾಪುರ: ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ ಜಾತ್ಯತೀತ ನಿಲುವು ಬರೀ ತೋರಿಕೆಯ ನಿಲುವಾಗಿರದೇ ಅಂತರಂಗದ ಬಹುದೊಡ್ಡ ಶಕ್ತಿಯಾಗಿತ್ತು. ಆ ಕಾರಣದಿಂದ ಅವರು ಇಂದಿಗೂ ದೇಶದ ಬಹುದೊಡ್ಡ ರಾಜಕಾರಣಿಗಳಾಗಿ ಗುರುತಿಸಿಕೊಂಡಿದ್ದಾರೆ ಎಂದು ಸಾಹಿತಿ, ಚಿಂತಕ ಮಹಾಬಲಮೂರ್ತಿ ಕೊಡ್ಲೆಕೆರೆ ತಿಳಿಸಿದರು.ರಾಮಕೃಷ್ಣ ಹೆಗಡೆ ಚಿರಂತನ ಹಾಗೂ ಶಿಕ್ಷಣ ಪ್ರಸಾರಕ ಸಮಿತಿ ವತಿಯಿಂದ ರಾಮಕೃಷ್ಣ ಹೆಗಡೆ ಜನ್ಮದಿನಾಚರಣೆ ಅಂಗವಾಗಿ ಗುರುವಾರ ಪಟ್ಟಣದ ಚೇತನಾ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಆಯೋಜಿಸಿದ್ದ ಹೆಗಡೆ ಮತ್ತು ಜಾತ್ಯತೀತತೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ರಾಮಕೃಷ್ಣ ಹೆಗಡೆಯವರು ರಾಜಕೀಯದಲ್ಲಿ ಪ್ರಭಾವಿಗಳಾಗಿದ್ದಾಗ ವಿವಿಧ ರಂಗದಲ್ಲಿದ್ದ, ವಿವಿಧ ಧರ್ಮಗಳ, ಜಾತಿಯ ಮತ್ತು ವೈಚಾರಿಕತೆಯ ಪ್ರತಿಭೆಗಳನ್ನು ರಾಜಕಾರಣದಲ್ಲಿ ಬೆಳೆಸಿದರು. ಅವರ ಸಂಪುಟದಲ್ಲಿ ಇದ್ದವರು ಇಂದು ಖ್ಯಾತಿವೆತ್ತವರಾಗಿದ್ದಾರೆ ಎಂದರು.
ಪ್ರಧಾನಿಯಾಗುವ ಅರ್ಹತೆ ಇದ್ದೂ ಅದನ್ನು ಕಳೆದುಕೊಂಡ ಅವರಲ್ಲಿ ಎಲ್ಲ ವಿಷಯಗಳ ಜ್ಞಾನವಿತ್ತು. ಹೆಗಡೆಯವರ ವೈಚಾರಿಕತೆ, ಆಡಳಿತವೈಖರಿ ಇಂದಿಗೂ ಜನಮಾನಸದಲ್ಲಿ ಎಷ್ಟು ಪ್ರಭಾವ ಬೀರಿದೆ ಎಂದರೆ ಇಂದಿಗೂ ರಾಜಕೀಯ ವಿಶ್ಲೇಷಣೆಗಳನ್ನು ಹೆಗಡೆಯವರ ವೈಚಾರಿಕತೆಯೊಂದಿಗೆ ತುಲನೆ ಮಾಡಿ ನೋಡಲಾಗುತ್ತದೆ. ಕೆನರಾ ಕ್ಷೇತ್ರದ ಸಂಸತ್ ಚುನಾವಣೆಯಲ್ಲಿ ಹೆಗಡೆಯವರು ಸೋಲಲು ಅವರ ಜಾತ್ಯತೀತ ನಿಲುವು ಕೂಡ ಕಾರಣವಾಗಿತ್ತು ಎಂದರು.ಯಲ್ಲಾಪುರದ ಶ್ರೇಯಾ ಹೆಗಡೆ ಅವರ ಕುಂಚದಲ್ಲಿ ಮೂಡಿಬಂದ ಹೆಗಡೆಯವರ ಭಾವಚಿತ್ರದ ಅನಾವರಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹೆಗಡೆಯವರ ಒಡನಾಡಿಗಳಾದ ಜಿ.ಟಿ. ಹೆಗಡೆ ತಟ್ಟಿಸರ ಮತ್ತು ದೇವಿದಾಸ ಶೇಟ್ ಹಾಳದಕಟ್ಟಾ ಅವರನ್ನು ಸನ್ಮಾನಿಸಲಾಯಿತು. ಜಿ. ಟಿ. ಹೆಗಡೆ ಸಮ್ಮಾನ ಸ್ವೀಕರಿಸಿ ಮಾತನಾಡಿದರು. ರಾಮಕೃಷ್ಣ ಹೆಗಡೆ ಚಿರಂತನದ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಎನ್. ಭಟ್ ನಿರೂಪಿಸಿದರು. ಜಿ.ಕೆ. ಭಟ್ ವಂದಿಸಿದರು. ನಂತರ ನಡೆದ ಶರಸೇತು ಬಂಧ ತಾಳಮದ್ದಳೆಯ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ ಯಲ್ಲಾಪುರ, ಮುಮ್ಮೇಳದಲ್ಲಿ ಜಿ.ಕೆ. ಭಟ್ ಕಶಿಗೆ, ನಾರಾಯಣ ಯಾಜಿ ಸಾಲೆಬೈಲ್, ಮಹಾಬಲಮೂರ್ತಿ ಕೂಡ್ಲಕೆರೆ ಪಾಲ್ಗೊಂಡಿದ್ದರು.