ಮಂಜುನಾಥನ ಕೈಯಲ್ಲಿ ಮರಳಲ್ಲಿ ಅರಳಿದ ರಾಮಲಲ್ಲಾ

| Published : Jan 23 2024, 01:47 AM IST

ಸಾರಾಂಶ

ಕಲಾವಿದ ಮಂಜುನಾಥ ಹಿರೇಮಠ ಹಾಗೂ ಅವರ ಪುತ್ರರಾದ ವಿನಾಯಕ, ಕಾಂತೇಶ ಅವರ ಕೈಯಲ್ಲಿ ಮರಳಲ್ಲಿ ರಾಮಲಲ್ಲಾ ಹಾಗೂ ರಾಮಮಂದಿರದ ಪ್ರತಿಕೃತಿ ಅದ್ಭುತವಾಗಿ ಮೂಡಿ ಬಂತು.

ಧಾರವಾಡ: ಇಲ್ಲಿನ ಸಂಪಿಗೆ ನಗರದ ಬೇಂದ್ರೆ ನಗರ ಕ್ರಾಸ್ ಮೈದಾನದಲ್ಲಿ ಜನಜಾಗೃತಿ ಸಂಘದ ವತಿಯಿಂದ ಅರ್ಥಪೂರ್ಣವಾಗಿ ರಾಮೋತ್ಸವ ನಡೆಯಿತು. ಕಲಾವಿದ ಮಂಜುನಾಥ ಹಿರೇಮಠ ಹಾಗೂ ಅವರ ಪುತ್ರರಾದ ವಿನಾಯಕ, ಕಾಂತೇಶ ಅವರ ಕೈಯಲ್ಲಿ ಮರಳಲ್ಲಿ ರಾಮಲಲ್ಲಾ ಹಾಗೂ ರಾಮಮಂದಿರದ ಪ್ರತಿಕೃತಿ ಅದ್ಭುತವಾಗಿ ಮೂಡಿ ಬಂತು.

ಮರಳು ಕಲಾಕೃತಿ ರಚನೆ ಬೆಳಗ್ಗೆ 6ಕ್ಕೆ ಶುರವಾಗಿ 11.30ರ ಸುಮಾರಿಗೆ ಮುಕ್ತಾಯವಾಯಿತು. ಪೂಜಾ ಕಾರ್ಯಕ್ರಮಕ್ಕೆ ಉಪ್ಪಿನಬೆಟಗೇರಿಯ ಮೂರು ಸಾವಿರ ಮಠದ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಚಾಲನೆ ನೀಡಿದರು. ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಅದ್ಭುತ ಮಂದಿರ ನಿರ್ಮಾಣದ ಕನಸು ಐದು ಶತಮಾನದ ಬಳಿಕ ಸಾಕಾರಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಧೈರ್ಯ, ಸ್ಥೈರ್ಯ ಹಾಗೂ ಸಂಕಲ್ಪದ ಫಲವಾಗಿ ಭವ್ಯ ರಾಮಮಂದಿರ ಲೋಕಾರ್ಪಣೆಗೊಂಡಿದೆ. ಹೀಗಾಗಿ ಇಂದು ದೇಶದೆಲ್ಲೆಡೆ, ಸಂಭ್ರಮ ಮನೆ ಮಾಡಿದೆ‌. ಆದರ್ಶ ಪುರುಷ ಶ್ರೀರಾಮಚಂದ್ರನ‌ ಆಡಳಿತಾವಧಿಯ ರಾಮರಾಜ್ಯದ ಕನಸು ನನಸಾಗುವತ್ತ ಎಲ್ಲರೂ ದೃಢ ಹೆಜ್ಜೆ ಹಾಕಬೇಕು ಎಂದು ಸ್ವಾಮೀಜಿ ಹೇಳಿದರು.

ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಮಾತನಾಡಿ, ಸಂಘ ಕಳೆದ ಹಲವಾರು ವರ್ಷಗಳಿಂದ ಸ್ವಾಮಿ ವಿವೇಕಾನಂದ, ರಾಮಜನ್ಮ ಭೂಮಿಯ ಮರಳಿನ ಕಲಾಕೃತಿ ರಚಿಸಿ ಪೂಜಿಸುವ ಸಂಪ್ರದಾಯ ಆಚರಿಸಿಕೊಂಡು ಬಂದಿದ್ದೇವೆ. ಇಂದು ರಾಮಲಲ್ಲಾ ಹಾಗೂ ರಾಮಮಂದಿರ ಮರಳಿನಲ್ಲಿ ಮೂಡಿ ಬರುವ ಮೂಲಕ ಜನಮಾನಸದಲ್ಲಿ ಅಷ್ಟೇ ರಾಮಜಪ ಅಲ್ಲ. ನಮ್ಮ ಮರಳಿನ ಕಣಕಣದಲ್ಲಿ ರಾಮ ಇದ್ದಾನೆ ಎಂಬುದು ತೋರಿಸಿದಂತಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ರಾಘವೇಂದ್ರ ಶೆಟ್ಟಿ, ಸುಮಂಗಲಾ ಕೊರವರ, ಬಸವಣ್ಣೆಪ್ಪಾ ಕಮತಿ ಮತ್ತಿತರರು ಇದ್ದರು.