ಸಾರಾಂಶ
ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಅರ್ಪಿಸಿ ಹಣ್ಣು ಕಾಯಿಗಳ ಸೇವೆ ಸಲ್ಲಿಸಿ ದೇವರ ದರ್ಶನ ಪಡೆದು ಪುನೀತರಾದರು.
ಜೋಯಿಡಾ: ತಾಲೂಕಿನ ಗಡಿ ಪ್ರದೇಶ ಎರಡನೇ ಅತಿದೊಡ್ಡ ಜಾತ್ರೆಯಲ್ಲಿ ಒಂದಾದ ರಾಮನಗರದ ರಾಮಲಿಂಗೇಶ್ವರ ದೇವರ ರಥೋತ್ಸವ ಹರ ಹರ ಮಹಾದೇವ, ರಾಮಲಿಂಗೇಶ್ವರ ಮಹಾರಾಜ್ ಕೀ ಜೈ, ಜೈ ಶ್ರೀರಾಮ ಎನ್ನುತ್ತಾ ತೇರನ್ನು ಎಳೆಯುವ ಮೂಲಕ ಶ್ರೀ ರಾಮಲಿಂಗೇಶ್ವರ ದೇವರ ರಥೋತ್ಸವ ಬುಧವಾರ ಸಂಜೆ ಅದ್ಧೂರಿ ಸಂಪನ್ನಗೊಂಡಿತು.
ವಿಶಾಲವಾದ ಬೀದಿಯಲ್ಲಿ ಸಾವಿರಾರು ಭಕ್ತರು, ತಾಲೂಕಿನ ಜನಪ್ರತಿನಿಧಿಗಳು, ಗ್ರಾಮ ಪಂಚಾಯತ ಆಡಳಿತ ಸಮಿತಿ, ತಾಲೂಕಿನ ಅಧಿಕಾರ ವರ್ಗ, ಸಿಬ್ಬಂದಿ ಸಮ್ಮುಖದಲ್ಲಿ ತೇರನ್ನು ಎಳೆದು ಸಂಭ್ರಮಿಸಿದರು.ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಅರ್ಪಿಸಿ ಹಣ್ಣು ಕಾಯಿಗಳ ಸೇವೆ ಸಲ್ಲಿಸಿ ದೇವರ ದರ್ಶನ ಪಡೆದು ಪುನೀತರಾದರು. ಜಾತ್ರೆ ರಥೋತ್ಸವಕ್ಕೆ ತಾಲೂಕಿನ ಭಕ್ತರಲ್ಲದೇ ನೆರೆಯ ರಾಜ್ಯ ಗೋವಾದಿಂದ, ಪಕ್ಕದ ಜಿಲ್ಲೆ ಬೆಳಗಾವಿಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ವಿವಿಧ ಸ್ಥಾನ ಗಳಿಂದ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
ಜಾತ್ರೆಯಲ್ಲಿ ಅಲಂಕಾರಿಕ ವಸ್ತುಗಳ, ಹೂವಿನ ಮಾಲೆ ಅಂಗಡಿ, ಆಟಿಕೆ ಸಾಮಗ್ರಿಗಳ, ಬಟ್ಟೆ ಅಂಗಡಿ, ಪಾತ್ರೆಗಳ ಅಂಗಡಿ, ತಂಪು ಪಾನೀಯಗಳ ಅಂಗಡಿ, ಐಸ್ ಕ್ರೀಮ್, ಬಗೆ ಬಗೆಯ ತಿಂಡಿ ತಿನಿಸುಗಳ ಅಂಗಡಿಗಳು, ಮಿಠಾಯಿ ಅಂಗಡಿಗಳು, ಮಕ್ಕಳ ಹಾಗೂ ದೊಡ್ಡವರಿಗೆ ಮನರಂಜನೆಗೆ ಸಂಜೆಯ ಸಮಯದಲ್ಲಿ ಮನಸ್ಸಿಗೆ ಮುದ ನೀಡುವ ರೆಕಾಯಿಲ್ ಚಟುವಟಿಕೆಗಳು ಎಲ್ಲರನ್ನೂ ಆಕರ್ಷಿಸಿದವು.ದೇವಸ್ಥಾನ ಸಮಿತಿಯವರು ಮತ್ತು ಗ್ರಾಮಸ್ಥರು ಎಲ್ಲರ ಸಹಕಾರದೊಂದಿಗೆ ರಥೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.