ಸಾರಾಂಶ
ರಾಮನಗರ: ಅಯೋಧ್ಯೆಯ ಶ್ರೀ ರಾಮನಿಗೂ ರಾಮನಗರಕ್ಕೂ ನೇರವಾದ ನಂಟಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾ(ಬಾಲರಾಮನ) ಮೂರ್ತಿ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ಶೀಘ್ರದಲ್ಲಿಯೇ ಪ್ರಾಣ ಪ್ರತಿಷ್ಠಾಪನೆಯೂ ಆಗಲಿದೆ. ಹಾಗಾಗಿ ತ್ರೇತಾಯುಗದಲ್ಲಿ ಶ್ರೀ ರಾಮನ ಪಾದಸ್ಪರ್ಶ ಮಾಡಿದ ಸ್ಥಳಗಳಿಗೆ ಮತ್ತೇ ಜೀವ ಬಂದಿದೆ.
ರಾಮನಗರದ ಶ್ರೀರಾಮಗಿರಿ ಕ್ಷೇತ್ರದಲ್ಲಿನ ಪಟ್ಟಾಭೀರಾಮನಿಗೂ ಹಾಗೂ ಅಯೋಧ್ಯೆ ರಾಮನಿಗೂ ನೇರವಾದ ಸಂಬಂಧ ಇದೆ. ರಾಮದೇವರ ಬೆಟ್ಟಕ್ಕೆ ಈ ಹೆಸರು ಬರಲು ತ್ರೇತಾಯುಗದಲ್ಲಿ ಶ್ರೀರಾಮ ದೇವರು ವನವಾಸ ಕಾಲದಲ್ಲಿ ಸೀತಾ ಲಕ್ಷ್ಮಣ ಸಮೇತರಾಗಿ ಕೆಲ ಕಾಲ ಇಲ್ಲಿ ನೆಲೆಸಿದ್ದೇ ಕಾರಣ ಎಂದು ಹೇಳಲಾಗುತ್ತದೆ.
ಈ ಬೆಟ್ಟದ ಮೇಲೆ ಒಂದು ನೈಸರ್ಗಿಕ ಕೊಳವಿದೆ. ಸೀತೆಯ ಬಾಯಾರಿಕೆಯನ್ನು ತಣಿಸುವ ಸಲುವಾಗಿ ಶ್ರೀರಾಮ ಬಾಣಬಿಟ್ಟು ಗಂಗೆಯನ್ನು ಹೊರ ತಂದರು ಎಂದು ನಂಬಲಾಗಿದೆ. ಶ್ರೀರಾಮ ದೇವರ ಕೃಪೆಯಿಂದ ಇಲ್ಲಿ ಜಲ ಚಿಮ್ಮಿದ ಕಾರಣ ಇಷ್ಟು ಎತ್ತರದ ಬೆಟ್ಟದ ಮೇಲಿರುವ ಕೊಳ ಎಂದಿಗೂ ಬತ್ತಿಲ್ಲವಂತೆ. ವರ್ಷದ 365 ಕಾಲವೂ ಇಲ್ಲಿ ನೀರು ಇರುತ್ತದೆ. ಹೀಗಾಗಿ ಇದಕ್ಕೆ ರಾಮತೀರ್ಥ ಎಂದು ಕರೆಯಲಾಗುತ್ತದೆ.
ಈ ಕೊಳ ಎಷ್ಟು ಅಡಿ ಆಳವಿದೆ ಎಂಬ ಮಾಹಿತಿ ಯಾರ ಬಳಿಯೂ ಇಲ್ಲ. ಜತೆಗೆ, ಮಳೆ ಬಾರದಿದ್ದರು, ಕೊಳದ ನೀರು ಈ ತನಕ ಬತ್ತಿಲ್ಲ. ಬೆಟ್ಟದಲ್ಲಿನ ದೇವಾಲಯದ ಆವರಣದಲ್ಲಿ ಸಪ್ತ ಋಷಿಗಳು ತಪಸ್ಸು ಆಚರಿಸಿದರು ಎಂಬ ಐತಿಹ್ಯವಿದೆ. ಇದಕ್ಕೆ ಪೂರಕವಾಗಿ ಅವರ ಅಪರೂಪದ ಏಳು ಬಂಡೆಗಳು ಕಾಣಸಿಗುತ್ತವೆ.
ಅಲ್ಲದೆ, ವನವಾಸ ಮಾಡುವ ಸಮಯದಲ್ಲಿ ರಾಮನು ಕಾಕಾಸುರ ಎಂಬ ರಾಕ್ಷಸರನ್ನು ವಧೆ ಮಾಡುತ್ತಾರೆ. ಇಂದಿಗೂ ರಾಮದೇವರ ಬೆಟ್ಟದಲ್ಲಿ ಒಂದೇ ಒಂದು ಕಾಗೆ ಕಾಣ ಸಿಗುವುದಿಲ್ಲ ಎಂಬುದೇ ಮತ್ತೊಂದು ವಿಶೇಷ.
ವನವಾಸದ ಸಮಯದಲ್ಲಿ ಶ್ರೀರಾಮರು, ಬೆಟ್ಟದ ಮೇಲೆ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದರು ಎಂಬ ಐತಿಹ್ಯವಿದೆ. ಹಾಗಾಗಿ ಇಂದಿಗೂ ಸಹ ಅದನ್ನು ರಾಮೇಶ್ವರ ಎಂಬ ಹೆಸರಿನಿಂದಲೇ ಕರೆಯಲಾಗುತ್ತದೆ. ನಿತ್ಯಪೂಜೆಯೂ ಜರುಗುತ್ತಿದೆ.
ಲಂಕೆಯಲ್ಲಿ ರಾವಣ ಸಂಹಾರ ಮಾಡಿ, ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂದು ಅಯೋಧ್ಯೆಗೆ ಮರಳಿದ ಶ್ರೀರಾಮದೇವರಿಗೆ ಪಟ್ಟಾಭಿಷೇಕ ಆಗುತ್ತದೆ. ಆಗ ಸುಗ್ರೀವ, ಪಟ್ಟಾಭಿಷೇಕದಲ್ಲಿ ತಾನು ನೋಡಿದ ರೂಪದಲ್ಲೇ ವಿಗ್ರಹ ಮಾಡಿಸಿ ಕಿಷ್ಕಿಂದೆಯಲ್ಲಿ ಪ್ರತಿಷ್ಠಾಪಿಸಲು ತೆಗೆದುಕೊಂಡು ಹೋಗುತ್ತಿರುತ್ತಾನೆ.
ಹೀಗೆ ಆಕಾಶ ಮಾರ್ಗವಾಗಿ ಹೋಗುವಾಗ ಸುಂದರ ಪರಿಸರದಲ್ಲಿದ್ದ ಪ್ರಕೃತಿ ರಮಣೀಯ ಕೊಳವನ್ನು ನೋಡಿ ಇಳಿಯುತ್ತಾನೆ.
ಕೊಳದ ಎದುರು ಎತ್ತರ ಪ್ರದೇಶದಲ್ಲಿ ತಾನು ತಂದಿದ್ದ ಹನುಮಾನ್ ಸಮೇತ, ಸೀತಾ, ರಾಮ, ಲಕ್ಷ್ಮಣರ ಮೂರ್ತಿಯನ್ನಿಟ್ಟು ಕೊಳದತ್ತ ಸಾಗುತ್ತಾನೆ. ಆಗ ಈ ವನ ಪ್ರದೇಶದಲ್ಲಿದ್ದ ಸೂಕಾಸುರ ಎಂಬ ರಾಕ್ಷಸ ಸುಗ್ರೀವನ ಮೇಲೆ ದಾಳಿ ಮಾಡುತ್ತಾನೆ.
ಸುಗ್ರೀವ ಸೂಕಾಸುರನೊಂದಿಗೆ ಕಾಳಗ ಮಾಡಿ, ರಾಕ್ಷಸನನ್ನು ಸಂಹಾರ ಮಾಡುತ್ತಾನೆ. ಬಳಿಕ ತಾನು ಇಟ್ಟಿದ್ದ ಮೂರ್ತಿಯನ್ನು ತೆಗೆದುಕೊಂಡು ಕಿಷ್ಕಿಂದೆಗೆ ಹೋಗಲು ನಿರ್ಧರಿಸಿ ಮೂರ್ತಿಯನ್ನು ಎತ್ತುತ್ತಾನೆ. ಆದರೆ, ಅದು ಬರುವುದಿಲ್ಲ. ಎಷ್ಟೇ ಪ್ರಯತ್ನಪಟ್ಟರು ಅದು ಅಲುಗಾಡುವುದಿಲ್ಲ. ಆಗ ಅಶರೀರವಾಣಿ ಮೊಳಗುತ್ತದೆ.
ಶ್ರೀರಾಮ ದೇವರು ಇಲ್ಲಿ ಕೆಲ ಕಾಲ ನೆಲೆಸಿದ್ದರು. ಹೀಗಾಗಿ ಈ ಪವಿತ್ರ ಕ್ಷೇತ್ರ ಮಹಿಮೆಯಿಂದ ರಾಮದೇವರ ಮೂರ್ತಿ ನೀನು ಇಟ್ಟ ಕೂಡಲೇ ಪ್ರತಿಷ್ಠಾಪನೆ ಆಗಿದೆ.
ಹೀಗಾಗಿ ಇಲ್ಲಿಯೇ ಅದನ್ನು ಶಾಸ್ತ್ರೋಕ್ತವಾಗಿ ಪೂಜಿಸು ಎಂದು ಅಪ್ಪಣೆ ಆಗುತ್ತದೆ. ಅಂತೆಯೇ ಸುಗ್ರೀವ ರಾಮ ದೇವರನ್ನು ಇಲ್ಲಿಯೇ ಪ್ರತಿಷ್ಠಾಪಿಸಿ ಪೂಜಿಸಿ ತನ್ನ ರಾಜ್ಯಕ್ಕೆ ಮರಳುತ್ತಾನೆ ಎಂಬ ಐತಿಹ್ಯವಿದೆ ಎಂದು ಅರ್ಚಕರು ಹೇಳುತ್ತಾರೆ.
ಶ್ರಾವಣದಲ್ಲಿ ಜಾತ್ರೆ: ರಾಮನಗರ ಶ್ರೀರಾಮನ ಸ್ಥಾನ. ಸಪ್ತ ಪರ್ವತ, ಸಪ್ತ ಋಷಿಗಳಿಂದ ಸಮ್ಮಿಲನವಾಗಿದೆ. ರಾಮನಗರದ ಪಟ್ಟಾಭಿರಾಮ ಹಾಗೂ ಅಯೋಧ್ಯೆ ರಾಮನಿಗೂ ನಂಟಿದ್ದು, ಈ ಬಗ್ಗೆ ಸಾಕ್ಷೀಕರಿಸುತ್ತಿದೆ, ರಾಮನಗರ ಸ್ಥಳ ಪುರಾಣ. ಪ್ರತಿವರ್ಷ ಇಲ್ಲಿ ಶ್ರಾವಣ ಮಾಸದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ.
ಪಟ್ಟಾಭಿರಾಮನ ವಿಗ್ರಹ 2.5 ಅಡಿ ಎತ್ತರ: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾ ವಿಗ್ರಹ 4.25 ಅಡಿ ಇದ್ದರೆ, ಸುಗ್ರೀವನಿಂದ ಪ್ರತಿಷ್ಠಾಪನೆ ಮಾಡಲಾಗಿರುವ ರಾಮನಗರದ ಪಟ್ಟಾಭಿರಾಮನ ವಿಗ್ರಹವೂ ಇದಕ್ಕೆ 2.5 ಅಡಿ ಎತ್ತರವಿದೆ!
ಜತೆಗೆ, ಇಡೀ ವಿಗ್ರಹ ಏಕ ಶಿಲೆಯಾಗಿದ್ದು, ಪಟ್ಟಾಭಿಸ್ಥನಾಗಿ ಶ್ರೀರಾಮ ದೇವರು ಕುಳಿತಿರುವ ಭಂಗಿಯಲ್ಲಿದ್ದು, ಬಲ ತೊಡೆಯ ಮೇಲೆ ಸೀತಾ ಮಾತೆಯನ್ನು ಕೂರಿಸಿಕೊಂಡಿದ್ದಾರೆ. ಎಡಭಾಗದಲ್ಲಿ ವಿನೀತನಾಗಿ ಲಕ್ಷ್ಮಣ ನಿಂತಿದ್ದಾನೆ. ಶ್ರೀರಾಮ ದೇವರ ಪಾದದ ಬಳಿ ಭಕ್ತ ಆಂಜನೇಯ ಕೈಮುಗಿದು ಕುಳಿತಿರುವ ಮೂರ್ತಿ ಸುಂದರವಾಗಿದೆ.
ರಣಹದ್ದು ವನ್ಯಜೀವಿ ಧಾಮ: ರಾಮಾಯಣದಲ್ಲಿ ಜಟಾಯು ಪಕ್ಷಿಯ ಉಲ್ಲೇಖವಿದೆ. ಅದೇ ಮಾದರಿಯಲ್ಲಿ ರಾಮದೇವರ ಬೆಟ್ಟದಲ್ಲಿ ಹೆಚ್ಚು ರಣಹದ್ದುಗಳನ್ನು ಕಾಣಬಹುದಾಗಿದೆ. ಹೆಚ್ಚಾಗಿ ರಣಹದ್ದುಗಳು ಕಂಡು ಬರುವ ಹಿನ್ನೆಲೆಯಲ್ಲಿ ರಣಹದ್ದು ವನ್ಯಜೀವಿಧಾಮ ನಿರ್ಮಿಸಿದೆ. ಇದು ದೇಶದಲ್ಲಿ ಪ್ರಥಮ ರಣಹದ್ದು ವನ್ಯಜೀವಿಧಾಮವಾಗಿದೆ.
ರಾಮದೇವರ ಬೆಟ್ಟ ದಕ್ಷಿಣ ಅಯೋಧ್ಯೆ: ರಾಮನಗರದ ರಾಮದೇವರ ಬೆಟ್ಟವನ್ನು ದಕ್ಷಿಣ ಅಯೋಧ್ಯೆಯನ್ನಾಗಿ ರೂಪಿಸುವ ಸಂಬಂಧ ಕೆಲವು ವಿಚಾರಗಳು ಚರ್ಚೆಯಾಗಿದ್ದವು. ಬಿಜೆಪಿ ಸರ್ಕಾರ ತನ್ನ ಬಜೆಟ್‌ನಲ್ಲಿ ರಾಮ ಮಂದಿರ ನಿರ್ಮಾಣ ವಿಚಾರವನ್ನು ಘೋಷಣೆ ಮಾಡಿತ್ತು.
ಇದಾಕ್ಕಾಗಿ ರಾಮದೇವರ ಬೆಟ್ಟ ಅಭಿವೃದ್ಧಿ ಸಮಿತಿಯನ್ನು ರಚನೆ ಮಾಡಿತ್ತು. ಸರ್ಕಾರ ಬದಲಾವಣೆಯಾದ ಬಳಿಕ ದಕ್ಷಿಣ ಅಯೋಧ್ಯೆ ನಿರ್ಮಾಣದ ಗುರಿ ತಟಸ್ಥವಾಗಿಯೇ ಉಳಿದುಕೊಂಡಿತು. ಈಗ ಕಾಂಗ್ರೆಸ್ ಸರ್ಕಾರದಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಮತ್ತೊಮ್ಮೆ ಜೀವ ಪಡೆದುಕೊಂಡಿದೆ..
ರಾಮದೇವರ ಬೆಟ್ಟದಲ್ಲಿನ ಪಟ್ಟಾಭಿರಾಮನ ವಿಗ್ರಹವೂ ಸುಗ್ರೀವನಿಂದ ಪ್ರತಿಷ್ಠಾಪನೆ ಮಾಡಲಾಗಿದೆ. ಈ ದೇವಾಲಯವನ್ನು ಮಾಗಡಿ ಕೆಂಪೇಗೌಡರು ನಿರ್ಮಿಸಿದರು.
ಅಯೋಧ್ಯೆಯಲ್ಲಿ ಜ.22ರಂದು ದೇವಾಲಯ ಉದ್ಘಾಟನೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪಟ್ಟಾಭಿರಾಮನ ದೇವಾಲಯದಲ್ಲಿ ಭಜನೆ ಸೇರಿದಂತೆ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದು ಪಟ್ಟಾಭಿರಾಮ ದೇವಾಲಯದ ಪ್ರಧಾನ ಅರ್ಚಕರು ನಾಗರಾಜ್ ಭಟ್ ತಿಳಿಸಿದರು.
;Resize=(690,390))
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))