ರಾಮಣ್ಣ ಮೇಯರ್‌, ದುರ್ಗಮ್ಮ ಉಪಮೇಯರ್‌

| Published : Jun 30 2024, 12:48 AM IST

ಸಾರಾಂಶ

ಮೇಯರ್‌, ಉಪಮೇಯರ್‌ ಆಯ್ಕೆಗೆ ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಮತ ಚಲಾಯಿಸಿದರು. ನಂತರ ನೂತನ ಮೇಯರ್‌, ಉಪ ಮೇಯರ್‌ ಅವರ ಆಯ್ಕೆಯನ್ನು ಘೋಷಣೆ ಮಾಡಲಾಯಿತು.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿರೀಕ್ಷೆಯಂತೆ ಮತ್ತೆ ಬಿಜೆಪಿ ಪಾಲಾಗಿದ್ದು, ಪಾಲಿಕೆಯ 23ನೇ ಅವಧಿಗೆ ಮೇಯರ್‌ ಆಗಿ ಬಿಜೆಪಿ ಹಿರಿಯ ಸದಸ್ಯ ರಾಮಣ್ಣ ಬಡಿಗೇರ, ಉಪ ಮೇಯರ್‌ ಆಗಿ ಬಿಜೆಪಿಯ ದುರ್ಗಮ್ಮ ಬಿಜವಾಡ ಆಯ್ಕೆಯಾಗಿದ್ದಾರೆ.

ಶನಿವಾರ ಪಾಲಿಕೆ ಸಭಾಭವನದಲ್ಲಿ ನಡೆದ ಮೇಯರ್‌, ಉಪ ಮೇಯರ್‌ ಚುನಾವಣೆ ಪ್ರಕ್ರಿಯೆಯಲ್ಲಿ ಹಿಂದುಳಿದ ವರ್ಗ ‘ಎ‘ಮೀಸಲಾಗಿದ್ದ ಮೇಯರ್‌ ಸ್ಥಾನಕ್ಕೆ 30ನೇ ವಾರ್ಡ್‌ ಬಿಜೆಪಿ ಸದಸ್ಯ ರಾಮಣ್ಣ ಬಡಿಗೇರ, 36ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯ ಇಮ್ರಾನ್‌ ಯಲಿಗಾರ, ಎಐಎಂಐಎಂನ 77ನೇ ವಾರ್ಡ್‌ ಸದಸ್ಯೆ ಹುಸೇನಬಿ ನಾಲತವಾಡ್‌ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಅಭ್ಯರ್ಥಿ ರಾಮಣ್ಣ ಬಡಿಗೇರ 47 ಮತ ಪಡೆದು ಗೆಲುವು ಸಾಧಿಸಿದರೆ, ಕಾಂಗ್ರೆಸ್‌ ಅಭ್ಯರ್ಥಿ ಯಲಿಗಾರ 36 ಮತ, ಎಐಎಂಐಎಂ ಅಭ್ಯರ್ಥಿ ನಾಲತವಾಡ 3 ಮತ ಪಡೆದು ಪರಾಭವಗೊಂಡರು.

ಅದೇ ರೀತಿ ಎಸ್‌ಸಿ ಮಹಿಳೆಗೆ ಮೀಸಲಾಗಿದ್ದ ಉಪ ಮೇಯರ್‌ ಸ್ಥಾನಕ್ಕೆ 69ನೇ ವಾರ್ಡ್‌ನ ಬಿಜೆಪಿ ಸದಸ್ಯೆ ದುರ್ಗಮ್ಮ ಬಿಜವಾಡ, 50ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯೆ ಮಂಗಳಾ ಹಿರೇಮನಿ ನಾಮಪತ್ರ ಸಲ್ಲಿಸಿದ್ದು, ಬಿಜೆಪಿ ಅಭ್ಯರ್ಥಿ ದುರ್ಗಮ್ಮ ಬಿಜವಾಡ 47 ಮತ ಪಡೆದು ಆಯ್ಕೆಯಾದರೆ, ಕಾಂಗ್ರೆಸ್‌ ಅಭ್ಯರ್ಥಿ ಮಂಗಳಾ ಹಿರೇಮನಿ 36 ಮತ ಪಡೆದು ಸೋಲನುಭವಿಸಿದರು.

ನಾಲ್ವರು ಗೈರು:

ಒಟ್ಟು 90 ಅರ್ಹ ಮತದಾರರಲ್ಲಿ ನಾಲ್ವರು ಗೈರು ಉಳಿದಿದ್ದರಿಂದ 86 ಮತಗಳಷ್ಟೇ ಚಲಾವಣೆಗೊಂಡವು. 9ನೇ ವಾರ್ಡ್‌ ಬಿಜೆಪಿ ಸದಸ್ಯ ನಿತೀನ್‌ ಇಂಡಿ ಅನಾರೋಗ್ಯ ಕಾರಣದಿಂದ ಹಾಗೂ ವಾರ್ಡ್‌ ನಂ. 79 ರ ಕಾಂಗ್ರೆಸ್‌ ಸದಸ್ಯೆ ಫಮೀದ್‌ಬೇಗಂ ಕಾರಡಗಿ, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಹು-ಧಾ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಗೈರಾಗಿದ್ದರು.

ಬಿಜೆಪಿ ಹಾಗೂ ಕಾಂಗ್ರೆಸ್‌ ಏಳು ಮಂದಿ ಜನಪ್ರತಿನಿಧಿಗಳಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ವಿ. ಸಂಕನೂರ, ಪ್ರದೀಪ ಶೆಟ್ಟರ್‌, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಹಾಗೂ ಪ್ರಸಾದ ಅಬ್ಬಯ್ಯ ಮತದಾನದಲ್ಲಿ ಪಾಲ್ಗೊಂಡಿದ್ದರು.

ಮಧ್ಯಾಹ್ನ 1 ಗಂಟೆಗೆ ಆರಂಭವಾದ ಚುನಾವಣೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ಆಗಿ ಕಾರ್ಯ ನಿರ್ವಹಿಸಿದ್ದ ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್‌.ಬಿ. ಶೆಟ್ಟೆಣ್ಣವರ ಮೇಯರ್‌, ಉಪಮೇಯರ್‌ ಸ್ಥಾನಕ್ಕೆ ಸಲ್ಲಿಸಿದ ಎಲ್ಲ ನಾಮಪತ್ರ ಕ್ರಮ ಬದ್ಧವಾಗಿವೆ ಎಂದು ತಿಳಿಸಿದ ಮೇಲೆ ಮೇಯರ್‌, ಉಪಮೇಯರ್‌ ಆಯ್ಕೆಗೆ ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಮತ ಚಲಾಯಿಸಿದರು. ನಂತರ ನೂತನ ಮೇಯರ್‌, ಉಪ ಮೇಯರ್‌ ಅವರ ಆಯ್ಕೆಯನ್ನು ಘೋಷಣೆ ಮಾಡಲಾಯಿತು.

ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಎಸ್‌.ಎಸ್‌. ಬಿರಾದಾರ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ವಿಜಯೋತ್ಸವ:

ಅತ್ತ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡು ಮೇಯರ್‌, ಉಪಮೇಯರ್‌ ಹೆಸರು ಘೋಷಣೆ ಮಾಡುತ್ತಿದ್ದಂತೆ ಹೊರಗೆ ಇದ್ದ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.ಹಿರಿತನಕ್ಕೆ ಅವಕಾಶ:

ಸತತ ನಾಲ್ಕು ಬಾರಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದ ರಾಮಣ್ಣ ಬಡಿಗೇರ, ಮೂರು ಬಾರಿ ಆಯ್ಕೆಯಾಗಿದ್ದ ಉಮೇಶಗೌಡ ಕೌಜಗೇರಿ ಹಾಗೂ ಎರಡು ಬಾರಿ ಆಯ್ಕೆಯಾಗಿದ್ದ ಬೀರಪ್ಪ ಖಂಡೇಕರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಹಿರಿತನಕ್ಕೆ ಅವಕಾಶ ನೀಡಬೇಕೋ, ಕುರುಬ ಸಮುದಾಯಕ್ಕೆ ಅವಕಾಶ ನೀಡಬೇಕೋ ಎನ್ನುವ ಗೊಂದಲ ಪಕ್ಷದಲ್ಲಿ ಉಂಟಾಗಿತ್ತು. ರಾಮಣ್ಣ ಬಡಿಗೇರ ಪರ ಶಾಸಕ ಅರವಿಂದ ಬೆಲ್ಲದ ಕೂಡಾ ಬ್ಯಾಟಿಂಗ್‌ ಮಾಡಿದ್ದರಲ್ಲದೇ ಹಿಂದಿನ ಎರಡು ಅವಧಿಯಲ್ಲಿ ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರಕ್ಕೆ ಅವಕಾಶ ನೀಡಲಾಗಿದೆ. ಈ ಬಾರಿ ಪಶ್ಚಿಮ ವಿಧಾನಸಭಾ ಕ್ಷೇತ್ರಕ್ಕೆ ಅವಕಾಶ ನೀಡಬೇಕೆಂದು ಕೇಳಿದ್ದರು. ಶುಕ್ರವಾರ ಖಾಸಗಿ ಹೋಟೆಲ್‌ನಲ್ಲಿ ಸಭೆ ಸೇರಿದ ಪಕ್ಷದ ಮುಖಂಡರು, ಸದಸ್ಯರ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸಿದ್ದರು. ಕೊನೆಗೆ ಹಿರಿತನಕ್ಕೆ ಮನ್ನಣೆ ನೀಡಿದ್ದರ ಪರಿಣಾಮ ಬಡಿಗೇರ ಅವರಿಗೆ ಮೇಯರ್‌ ಪಟ್ಟಒಲಿದು ಬಂದಿದೆ.

ದುರ್ಗಮ್ಮಗೆ ಒಲಿದ ಲಕ್‌:

ಉಪ ಮೇಯರ್‌ ಸ್ಥಾನ ಪರಿಶಿಷ್ಟ ಜಾತಿಗೆ ಮಹಿಳೆಗೆ ಮೀಸಲಾಗಿದ್ದರಿಂದ ಬಿಜೆಪಿಯಲ್ಲಿ ದುರ್ಗಮ್ಮ ಬಿಜವಾಡ, ಮಾಜಿ ಮೇಯರ್‌ ವೆಂಕಟೇಶ ಮೇಸ್ತ್ರಿ ಅವರ ಪತ್ನಿ ಚಂದ್ರಿಕಾ ಮೇಸ್ತ್ರಿ ಅವರು ಆ ಸ್ಥಾನಕ್ಕೆ ಅರ್ಹರಾಗಿದ್ದರು. ಮೊದಲ ಬಾರಿಗೆ ಸದಸ್ಯೆಯರಾಗಿ ಆಯ್ಕೆಯಾದ ಇವರಿಬ್ಬರ ನಡುವೆ ಉಪ ಮೇಯರ್‌ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿತ್ತು. ಪಕ್ಷದ ಮುಖಂಡರು ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ಅವಕಾಶ ನೀಡಲು ನಿರ್ಧರಿಸಿದ್ದರಿಂದ ದುರ್ಗಮ್ಮ ಬಿಜವಾಡಗೆ ಉಪ ಮೇಯರ್‌ ಆದರು.ಬಸ್‌ನಲ್ಲಿ ಬಂದ ಬಿಜೆಪಿ ಸದಸ್ಯರು:

ಶುಕ್ರವಾರ ಸಂಜೆಯಿಂದಲೇ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಸದಸ್ಯರು ಠಿಕಾಣಿ ಹೂಡಿದ್ದರು. ಶನಿವಾರ ಬೆಳಗ್ಗೆ ಪಕ್ಷದ ಮುಖಂಡರು ಮೇಯರ್‌, ಉಪ ಮೇಯರ್‌ ಸ್ಥಾನಕ್ಕೆ ಅಭ್ಯರ್ಥಿ ಹೆಸರು ಘೋಷಣೆ ಮಾಡುತ್ತಿದ್ದಂತೆ ಅಭ್ಯರ್ಥಿಗಳು ಕೆಲ ಸದಸ್ಯರೊಂದಿಗೆ ಬಂದು ನಾಮಪತ್ರ ಸಲ್ಲಿಸಿ ಹೋಟೆಲ್‌ಗೆ ವಾಪಸ್ಸಾದರು. ನಂತರ ಮಧ್ಯಾಹ್ನ 12.30ರ ಸಮಯಕ್ಕೆ ಮೇಯರ್‌, ಉಪಮೇಯರ್‌ ಅಭ್ಯರ್ಥಿ ಸೇರಿದಂತೆ ಎಲ್ಲ ಸದಸ್ಯರು ಹೋಟೆಲ್‌ನಿಂದ ಖಾಸಗಿ ಬಸ್‌ನಲ್ಲಿ ನೇರ ಪಾಲಿಕೆಗೆ ಬಂದಿಳಿದರು. ಬಸ್‌ ಇಳಿಯುತ್ತಿದ್ದಂತೆ ಭಾರತ ಮಾತಾ ಕೀ ಜೈ, ಬಿಜೆಪಿಗೆ ಜಯಕಾರ ಹಾಕುತ್ತ ಸಭಾಭವನ ಪ್ರವೇಶಿಸಿದರು. ತಂತ್ರಗಾರಿಕೆ ಮಾಡದ ಕಾಂಗ್ರೆಸ್‌:

ಪಾಲಿಕೆಯಲ್ಲಿ 37 ಸದಸ್ಯರ ಬಲ ಹೊಂದಿದ ಕಾಂಗ್ರೆಸ್‌ ಶನಿವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಪಾಲಿಕೆ ಸದಸ್ಯರ ಸಭೆ ನಡೆಸಿದರು. ಪಾಲಿಕೆ ಗದ್ದುಗೆ ಹಿಡಿಯಲು 11 ಸದಸ್ಯರ ಕೊರತೆ ಇದ್ದ ಕಾರಣ ಕಾಂಗ್ರೆಸ್‌ನವರ ಯಾವುದೇ ತಂತ್ರಗಾರಿಕೆ ಮಾಡದೇ, ಸಾಂಕೇತಿಕವಾಗಿ ಮೇಯರ್‌ ಸ್ಥಾನಕ್ಕೆ ಇಮ್ರಾನ್‌ ಯಲಿಗಾರ, ಉಪಮೇಯರ್‌ ಸ್ಥಾನಕ್ಕೆ ಮಂಗಳಾ ಹಿರೇಮನಿ ಅವರನ್ನು ಕಣಕ್ಕೆ ಇಳಿಸಿದ್ದರು. 37 ಸದಸ್ಯರ ಬಲದಲ್ಲಿ ಒಬ್ಬ ಸದಸ್ಯೆ ಗೈರು ಉಳಿದಿದ್ದರಿಂದ 36 ಮತಗಳನ್ನು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ನೀಡುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದರು. ಕಾಂಗ್ರೆಸ್‌ನ ಎಲ್ಲ ಸದಸ್ಯರು ಏಕಕಾಲಕ್ಕೆ ಸಭಾಭವನ ಪ್ರವೇಶಿಸಿದ್ದು ವಿಶೇಷ. ಅಂತರ ಕಾಯ್ದುಕೊಂಡ ಎಐಎಂಐಎಂ:

ಮೂವರೇ ಸದಸ್ಯರನ್ನು ಹೊಂದಿದ್ದರೂ ಎಐಎಂಐಎಂ ಪಕ್ಷವೂ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಎರಡು ರಾಷ್ಟ್ರೀಯ ಪಕ್ಷದೊಂದಿಗೆ ಅಂತರ ಕಾಯ್ದು ಕೊಂಡಿತು. ಮೇಯರ್‌ ಹುದ್ದೆಗೆ ಹುಸೇನಬಿ ನಾಲತವಾಡ ಸ್ಪರ್ಧಿಸಿದ್ದರು. ಆದರೆ ಉಪಮೇಯರ್‌ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದರಿಂದ ಆ ಸ್ಥಾನಕ್ಕೆ ಸ್ಫರ್ಧಿಸಲು ಸಾಧ್ಯವಾಗಲಿಲ್ಲ.