ಇಂದು ಯೋಗ ಎಂದರೆ ಕೇವಲ ಆಸನ, ಪ್ರಾಣಾಯಾಮಗಳಿಗಷ್ಟೇ ಸೀಮಿತಗೊಳಿಸಿದ್ದು, ಅದನ್ನು ಜ್ಞಾನಾಧಾರಿತವಾಗಿ ಅನುಷ್ಠಾನಗೊಳಿಸುವುದರ ಮೂಲಕ ಸಮಗ್ರವಾಗಿ ಯೋಗವನ್ನು ಅಭ್ಯಸಿಸಬೇಕು

----ಕನ್ನಡಪ್ರಭ ವಾರ್ತೆ ಮೈಸೂರು

ಯೋಗ ಒಂದು ಆರೋಗ್ಯ ವಿಜ್ಞಾನವಾಗಿದ್ದು, ಅದರ ಶಾಸ್ತ್ರೀಯ ಅಧ್ಯಯನ, ಅನುಷ್ಠಾನಗಳಿಂದ ವಿಶಿಷ್ಟವಾದ ಆಧ್ಯಾತ್ಮಿಕ ಜ್ಞಾನ ಲಭಿಸುತ್ತದೆ ಎಂದು ವೈದ್ಯ ಸಾಹಿತಿ ಡಾ.ಎಸ್.ಪಿ. ಯೋಗಣ್ಣ ತಿಳಿಸಿದರು.

ನಗರದ ರಾಮಾನುಜ ರಸ್ತೆಯ ನಮೋ ಯೋಗಭವನದಲ್ಲಿ ಮೈಸೂರು ಯೋಗ ಅಸೋಸಿಯೇಷನ್ ಹಾಗೂ ಹಿಮಾಲಯ ಪ್ರತಿಷ್ಠಾನ ಸಂಯುಕ್ತವಾಗಿ ಭಾನುವಾರ ಏರ್ಪಡಿಸಿದ್ದ ಸಾಂಪ್ರದಾಯಿಕ ಯೋಗ ಮಹೋತ್ಸವವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸಂಸ್ಕೃತಿಯ ಪ್ರತೀಕವಾದ ಯೋಗವನ್ನು ಸೂತ್ರಗಳ ಮೂಲಕ ಜನಸಾಮಾನ್ಯರಿಗೆ ಪ್ರಚುರಪಡಿಸಿದ ಕೀರ್ತಿ ಮಹರ್ಷಿ ಪತಂಜಲಿಗಳಿಗೆ ಸಲ್ಲುತ್ತದೆ. ಇಂದು ಯೋಗ ಎಂದರೆ ಕೇವಲ ಆಸನ, ಪ್ರಾಣಾಯಾಮಗಳಿಗಷ್ಟೇ ಸೀಮಿತಗೊಳಿಸಿದ್ದು, ಅದನ್ನು ಜ್ಞಾನಾಧಾರಿತವಾಗಿ ಅನುಷ್ಠಾನಗೊಳಿಸುವುದರ ಮೂಲಕ ಸಮಗ್ರವಾಗಿ ಯೋಗವನ್ನು ಅಭ್ಯಸಿಸಬೇಕು ಎಂದು ಹೇಳಿದರು.

ಹಿರಿಯ ಸಮಾಜಸೇವಕ ಕೆ. ರಘುರಾಂ ವಾಜಪೇಯಿ ಮಾತನಾಡಿ, ಭಾರತೀಯ ಅಷ್ಟಾಂಗ ಯೋಗ ಮಾರ್ಗಕ್ಕೆ ಪ್ರಪಂಚಾದ್ಯಂತ ಬೇಡಿಕೆಯಿದ್ದು, ಮೈಸೂರಿನ ಯೋಗಗುರುಗಳಾದ ಕೃಷ್ಣಮಾಚಾರ್ಯರ ಕಠಿಣ ಪರಿಶ್ರಮದಿಂದಾಗಿ ಯೋಗ ವಿಶ್ವಾದ್ಯಂತ ಪಸರಿಸಿತು ಎಂದರು.

ಸಾಹಿತಿ ದೇವರಾಜು ಪಿ. ಚಿಕ್ಕಹಳ್ಳಿ ಮಾತನಾಡಿ, ಮೈಸೂರಿಗೂ ಯೋಗಕ್ಕೂ ಅವಿನಾಭಾವ ಸಂಬಂಧವಿದ್ದು, ಮೌಲ್ಯಯುತ ಯೋಗ ಶಿಕ್ಷಕರು ರೂಪುಗೊಳ್ಳಬೇಕು ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಯೋಗಪಟು ಶ್ರೀಹರಿ ಐಯ್ಯಂಗಾರ್ ವೇದಘೋಷ ಹಾಗೂ ಮಂತ್ರ ಪುಷ್ಪ ನೆರವೇರಿಸಿಕೊಟ್ಟರು. ಹಿರಿಯ ಯೋಗಶಿಕ್ಷಕ ಜಯಕುಮಾರ್ ಸ್ವಾಮಿಶ್ರೀ ಪತಂಜಲಿಯ ಯೋಗಸೂತ್ರಗಳ ಮೊದಲ ಸಮಾಧಿ ಪಾದವನ್ನು ಪಾರಾಯಣ ಮಾಡಿಸಿದರು. ಯೋಗದಲ್ಲಿ ಚಿತ್ತದ ಪಾತ್ರ ಕುರಿತು ನರಸಿಂಹ ಪ್ರಸಾದ್, ಭಕ್ತಿಯೋಗ ಕುರಿತು ಮಣಿಕಂಠನ್ ಹಾಗೂ ಆಧ್ಯಾತ್ಮಿಕ ಯೋಗದ ಕುರಿತು ಜಗನ್ನಾಥ ಶೆಟ್ಟಿ ವಿಚಾರ ಮಂಡಿಸಿದರು.

ಇದೇ ವೇಳೆ ಯೋಗ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಬಿ.ಎಸ್. ನರಸಿಂಹಪ್ರಸಾದ್, ಜಗನ್ನಾಥ ಶೆಟ್ಟಿ, ವೆಂಕಟಾಚಲ ಶೆಟ್ಟಿ, ಮಹದೇವ ಗೌಡ, ಎಂ.ಆರ್. ಕಿಶೋರ್, ಮಲ್ಲಿಕಾರ್ಜುನ ಸ್ವಾಮಿ, ರಜಿನಿ ದೇವಮ್ಮ, ಸತೀಶ್ ಪೂಜಾರಿ ಮತ್ತು ಎನ್. ದಿವ್ಯಶ್ರೀ ಅವರಿಗೆ ಯೋಗಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಿನಕಲ್‌ ನಾರಾಯಣಾನಂದ ಯೋಗಾಶ್ರಮದ ಶ್ರೀ ನಿತ್ಯಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೈಸೂರು ಯೋಗ ಅಸೋಸಿಯೇಷನ್ ಅಧ್ಯಕ್ಷ ಯೋಗಪ್ರಕಾಶ್, ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್. ಅನಂತ, ಕಾರ್ಯದರ್ಶಿ ಎ. ಹರ್ಷವರ್ಧನ, ಉಪಾಧ್ಯಕ್ಷ ಕೃಷ್ಣಮೂರ್ತಿ, ಯೋಗಾಚಾರ್ಯ ಪಿ.ಆರ್. ವಿಶ್ವನಾಥ ಶೆಟ್ಟಿ, ಆಧ್ಯಾತ್ಮಿಕ ಚಿಂತಕಿ ಸುಮತಿ ಸುಬ್ರಹ್ಮಣ್ಯ ಮೊದಲಾದವರು ಇದ್ದರು.