ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
1007ನೇ ಜಯಂತ್ಯುತ್ಸವದ 9ನೇ ಉತ್ಸವದ ಅಂಗವಾಗಿ ಸಾಮಾಜಿಕ ಸಾಮರಸ್ಯದ ಹರಿಕಾರ ರಾಮಾನುಜಾಚಾರ್ಯರಿಗೆ ಶನಿವಾರ ಮಹಾ ರಥೋತ್ಸವ ವೈಭವದಿಂದ ನೆರವೇರಿತು.ದೇವಾಲಯದಲ್ಲಿ ಆಚಾರ್ಯರಿಗೆ ಬೆಳಗ್ಗೆ 9 ಗಂಟೆಗೆ ಯಾತ್ರಾದಾನವಾದ ನಂತರ ವೇದಪಾರಾಯಣ ಮತ್ತು ಮಂಗಳವಾದ್ಯದೊಂದಿಗೆ ಒಳಪ್ರಾಕಾರದಲ್ಲಿ ಉತ್ಸವ ನೆರವೇರಿತು. ನಂತರ ರಾಮಾನುಜರ ಎದುರು ಸೇವೆಯಲ್ಲಿ ಚೆಲುವನಾರಾಯಣಸ್ವಾಮಿಗೆ ಮಹಾ ಮಂಗಳಾರತಿ ನಡೆದು ರಾಮಾನುಜರಿಗೆ ಮರ್ಯಾದೆ ನಡೆದ ನಂತರ ಉತ್ಸವ ರಥದ ಮಂಟಪದ ಬಳಿಗೆ ಬಂದು ಸೇರಿತು. ರಥಮಂಟಪಕ್ಕೆ ಮೂರು ಪ್ರದಕ್ಷಿಣೆ ಹಾಗೂ ಜೋಯಿಸರಿಂದ ಮಹೂರ್ತ ಪಠಣೆಯಾದ ನಂತರ 10-30ಕ್ಕೆ ರಥಾರೋಹಣ ಕಾರ್ಯಕ್ರಮ ನೆರವೇರಿತು. ದಿವ್ಯಪ್ರಬಂದ ಪಾರಾಯಣಗೋಷ್ಠಿ ನೆರವೇರಿತು.
ಧಾರ್ಮಿಕದತ್ತಿ ಇಲಾಖೆಯ ಅಧಿಕಾರಿ ಯತಿರಾಜ ಸಂಪತ್ಕುಮಾರನ್ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್.ಮಹೇಶ್ ಸರಪಣಿ ಎಳೆಯುವ ಮೂಲಕ 11.30ಕ್ಕೆ ಮಹಾರಥಕ್ಕೆ ಚಾಲನೆ ನೀಡಿದರು. ಮಹಾರಥ ಮಾರಿಗುಡಿಬೀದಿ, ರಾಜಬೀದಿ, ವಾನಮಾಮಲೈಮಠದ ಬೀದಿಗಳಲ್ಲಿ ಸಂಚರಿಸಿ ಮಧ್ಯಾಹ್ನ 4 ಗಂಟೆ ವೇಳೆಗೆ ಮುಕ್ತಾಯವಾಯಿತು. ಮಹಾರಥೋತ್ಸವದ ಧಾರ್ಮಿಕ ವಿಧಿವಿದಾನಗಳನ್ನು ಅರ್ಚಕ ವಿದ್ವಾನ್ ಬಿ.ವಿ.ಆನಂದಾಳ್ವಾರ್, ಆಗಪ್ರವೀಣ ವಿದ್ವಾನ್ ಭಾ.ವಂ. ರಾಮಪ್ರಿಯ ನೆರವೇರಿಸಿದರು. ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆಯಿಂದ ನೂರಾರು ಸಂಖ್ಯೆಯ ಶ್ರೀವೈಷ್ಣವ ಭಕ್ತರು ಭಾಗವಹಿಸಿದ್ದರು.ಸಂಜೆ ಯತಿರಾಜಮಠದಲ್ಲಿ ರಾಮಾನುಜರಿಗೆ ಅಂತರಂಗ ಅಭಿಷೇಕ ನೆರವೇರಿತು. ಮೇಲುಕೋಟೆಯಲ್ಲಿದ್ದಾಗ ಸಾಕ್ಷಾತ್ ರಾಮಾನುಜರೇ ಸ್ಥಾನೀಕರಿಂದ ಬಿಕ್ಷೆ ಸ್ವೀಕರಿಸುತ್ತಿದ್ದ ಐತಿಹಾಸಿಕ ವಿಶೇಷದ ಹಿನ್ನೆಲೆಯಲ್ಲಿ ನಡೆಯುವ ಬಿಕ್ಷಾ ಕೈಂಕರ್ಯ ಸೇವೆಯನ್ನು ರಾತ್ರಿ ರಾಮಾನುಜರ ಸನ್ನಿಧಿಯಲ್ಲಿ ಸ್ಥಾನೀಕರಾದ ಶ್ರೀನಿವಾಸನರಸಿಂಹನ್ ಗುರೂಜಿ, ಯತಿರಾಜದಾಸರ್ ಗುರುಪೀಠದಿಂದ ನೆರವೇರಿಸಿದರು. ಮುನ್ನಾದಿನವಾದ ಶುಕ್ರವಾರ ರಾತ್ರಿ ಸ್ಥಾನೀಕಂ ಶ್ರೀರಾಮನ್ ಗುರುವಾರ ಪ್ರಥಮ ಸ್ಥಾನೀಕ ಕರಗಂ ರಾಮಪ್ರಿಯ ಬಿಕ್ಷಾ ಕೈಂಕರ್ಯ ಸೇವೆ ಸಲ್ಲಿಸಿದ್ದರು.
ಇಂದು ರಾಮಾನುಜರ ಜಯಂತಿ:ರಾಮಾನುಜಾಚಾರ್ಯರ ಜಯಂತಿಯ ಅಂಗವಾಗಿ ಭಾನುವಾರ ಬೆಳಗ್ಗೆ 9ಕ್ಕೆ ದ್ವಾದಶಾರಾಧನೆಯೊಂದಿಗೆ ರಾಮಾನುಜರಿಗೆ ಮಹಾಭಿಷೇಕ, ಸಂಜೆ ಗಂದದ ಅಲಂಕಾರದಲ್ಲಿ ಬೆಳ್ಳಿಪಲ್ಲಕ್ಕಿಉತ್ಸವ ರಾತ್ರಿಶ್ರೀ ಚೆಲುವನಾರಾಯಣ ಸ್ವಾಮಿಯವರ ದಶಾವತಾರ ಉತ್ಸವ ನಡೆಯಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು:ರಾಮಾನುಜಚಾರ್ಯರ ಮಹಾರಥ ಎಳೆಯಲು ಸೇರಿದ್ದವರಲ್ಲಿ ಹೆಚ್ಚು ಮಂದಿ ಮಹಿಳಾ ಭಕ್ತರೇ ತುಂಬಿದ್ದು ಸುಡುವ ಬಿಸಿಲಿದ್ದರೂ ಲೆಕ್ಕಿಸದೆ ರಾಮಾನುಜ-ಯತಿರಾಜ ಎಂಬ ಜಯಘೋಷದೊಂದಿಗೆ ಆರಂಭಿದಿಂದಲೂ ಮಹಾ ರಥ ನೆಲೆಸೇರುವವರೆಗೂ ತೇರೆಳೆಯುವ ಕೈಂಕರ್ಯ ಮಾಡಿ ಮಹಾ ರಥೋತ್ಸವವನ್ನು ಯಶಸ್ವಿಗೊಳಿಸಿದರು.
ಮೇಲುಕೋಟೆ ಪೊಲೀಸರು ಹೆಚ್ಚಿನ ಸಿಬ್ಬಂದಿಯೊಂದಿಗೆ ಹಾಜರಿದ್ದು ಬಂದೋಬಸ್ತ್ ಮಾಡಿದ್ದರಲ್ಲದೆ ತೇರೆಳೆಯುತ್ತಿದ್ದ ಭಕ್ತರಿಗೆ ಉತ್ಸಾಹ ತುಂಬಿದರು.